More

    ಸಿಸಿ ಟಿವಿ ಅಳವಡಿಸದೇ ನಿಯಮ ಉಲ್ಲಂಘನೆ



    ನರಗುಂದ: ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಕಡ್ಡಾಯವೆಂದು 2016ರಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ. ಆದರೆ, ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಈ ಆದೇಶ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

    ನೌಕರರ ಕಾರ್ಯಕ್ಷಮತೆ, ಪಾರದರ್ಶಕ ಆಡಳಿತ, ಅಹಿತಕರ ಘಟನೆಗಳನ್ನು ತಡೆಗಟ್ಟುವುದು ಈ ಯೋಜನೆಯ ಪ್ರಮುಖ ಉದ್ದೇಶ. ತಾಲೂಕಿನ ಒಟ್ಟು 26 ಗ್ರಾಮಗಳ ಪೈಕಿ 13 ಗ್ರಾಪಂಗಳ ಪಿಡಿಒ, ಕಾರ್ಯದರ್ಶಿ ಹಾಗೂ ಸಿಬ್ಬಂದಿ ಸಕಾಲಕ್ಕೆ ಹಾಜರಾಗುತ್ತಿಲ್ಲ. ಇದರಿಂದ ತಾಲೂಕಿನ ಬಹುತೇಕ ಗ್ರಾಪಂ ಕಚೇರಿ ಆಡಳಿತ ಯಂತ್ರ ದಿಕ್ಕು ತಪ್ಪುತ್ತಿವೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

    ತಾಲೂಕಿನ ಬನಹಟ್ಟಿ, ಹುಣಸೀಕಟ್ಟಿ, ಕಣಕೀಕೊಪ್ಪ, ಚಿಕ್ಕನರಗುಂದ, ಶಿರೋಳ, ಭೈರನಹಟ್ಟಿ, ರಡ್ಡೇರ ನಾಗನೂರ, ವಾಸನ ಗ್ರಾ ಪಂಗಳಲ್ಲಿ ಈಗಾಗಲೇ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಇವುಗಳಲ್ಲಿ ಶಿರೋಳ, ಭೈರನಹಟ್ಟಿ, ಚಿಕ್ಕನರಗುಂದ ಗ್ರಾಪಂ ಕಚೇರಿಗಳಲ್ಲಿರುವ ಕ್ಯಾಮರಾ ಸ್ಥಗಿತಗೊಂಡಿವೆ. ಇನ್ನುಳಿದ ಕೆಲ ಕಚೇರಿಗಳಲ್ಲಿ ಕ್ಯಾಮರಾ ಅಳವಡಿಸಿದ್ದರೂ ಅವು ದುರಸ್ತಿಯಲ್ಲಿವೆ. ಆದರೆ, ಬೆನಕನಕೊಪ್ಪ, ಹದಲಿ, ಹಿರೇಕೊಪ್ಪ, ಸುರಕೋಡ, ಕೊಣ್ಣೂರ ಗ್ರಾಪಂ ಕಚೇರಿಗಳಿಗೆ ಇದುವರೆಗೂ ಸಿಸಿ ಟಿವಿ ಅಳವಡಿಕೆಗೆ ಪಿಡಿಒ, ಕಾರ್ಯದರ್ಶಿ, ಜನಪ್ರತಿನಿಧಿಗಳು ಮನಸ್ಸು ಮಾಡುತ್ತಿಲ್ಲ.

    ಈ ಕುರಿತು ತಾಲೂಕು ಪಂಚಾಯತಿ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಇದರಿಂದ ಗ್ರಾಮಾಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಗ್ರಾಪಂ ಆಡಳಿತ ವ್ಯಾಪ್ತಿ, ವಸತಿ, ಶೌಚಗೃಹ, ನರೇಗಾ, ಕುಡಿಯುವ ನೀರು, ಸ್ವಚ್ಛತೆ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಗ್ರಾಪಂ ಆಡಳಿತ ಪಾರದರ್ಶಕವಾಗಿಲ್ಲ ಎಂಬ ದೂರುಗಳು ಸರ್ವೆ ಸಾಮಾನ್ಯವಾಗಿವೆ. ಫಲಾನುಭವಿಗಳು, ಸಾರ್ವಜನಿಕರ ಕೆಲಸಗಳು ಸಕಾಲಕ್ಕೆ ಆಗುತ್ತಿಲ್ಲ. ಗ್ರಾಮಸಭೆ, ಸಾಮಾನ್ಯ ಸಭೆ, ದೈನಂದಿನ ಆಡಳಿತವನ್ನು ಸಂಪೂರ್ಣ ಚಿತ್ರೀಕರಿಸುವ ಸಾಮರ್ಥ್ಯದ ಪಾರದರ್ಶಕ ಸಿಸಿ ಟಿವಿ ಕ್ಯಾಮರಾ ಅಳವಡಿಕೆಯಾಗಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.

    ಸರ್ಕಾರ 2016ರಲ್ಲಿ ಜಾರಿಗೆ ತಂದಿರುವ ಸಿಸಿ ಟಿವಿ ಕಡ್ಡಾಯದ ಆದೇಶ ನರಗುಂದ ತಾಲೂಕಿನಲ್ಲಿ ಇನ್ನೂ ಸಂಪೂರ್ಣ ಜಾರಿಗೆ ಬಂದಿಲ್ಲ. ಬಾಪೂಜಿ ಸೇವಾ ಕೇಂದ್ರದ ಸೌಲಭ್ಯಗಳೂ ಜನರಿಗೆ ಸರಿಯಾಗಿ ದೊರೆಯುತ್ತಿಲ್ಲ. ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಕೆಲಸಕ್ಕೆ ಹಾಜರಾಗುತ್ತಿಲ್ಲ. ಈ ಕುರಿತು ವಿಚಾರಿಸಿದರೆ ಸಭೆ, ಸಮಾರಂಭಗಳಿಗೆ ಹೋಗಿದ್ದಾರೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಇದರಿಂದ ಸಾಕಷ್ಟು ಕಿರಿಕಿರಿ ಉಂಟಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲ ಗ್ರಾಪಂ ಕಚೇರಿಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಲು ಮುಂದಾಗಬೇಕು.

    | ಮಾಡಿಗೆಪ್ಪ ತಳವಾರ, ಹಿರೇಕೊಪ್ಪ ಗ್ರಾಮಸ್ಥ

    ತಾಲೂಕಿನ 13 ಪಂಚಾಯಿತಿಗಳ ಪೈಕಿ ಕೆಲ ಗ್ರಾಪಂ ಕಚೇರಿಗಳಲ್ಲಿ ಈಗಾಗಲೇ ಸಿಸಿ ಟಿವಿ ಅಳವಡಿಸಲಾಗಿದೆ. ಇನ್ನ್ನುಳಿದ ಕೆಲವೆಡೆ ಅಳವಡಿಸಬೇಕಾಗಿದೆ. ಆದರೆ, ಆ ಗ್ರಾಪಂ ಪಿಡಿಒಗಳು ಇತ್ತೀಚೆಗೆ ಬೇರೆಡೆ ವರ್ಗಾವಣೆಗೊಂಡಿದ್ದಾರೆ. ನಾನು ಕೂಡ ಇತ್ತೀಚೆಗೆ ತಾಪಂ ಇಒ ಹುದ್ದೆಗೆ ಪ್ರಭಾರಿಯಾಗಿ ನೇಮಕಗೊಂಡಿದ್ದೇನೆ. ಈ ಕುರಿತು ಪರಿಶೀಲಿಸಿ ಎಲ್ಲ ಗ್ರಾಪಂ ಕಚೇರಿಗಳಿಗೆ ಸಿಸಿ ಟಿವಿ ಕ್ಯಾಮರಾ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ.

    | ಸಿ.ಆರ್. ಕುರ್ತಕೋಟಿ, ತಾಪಂ ಪ್ರಭಾರಿ ಇಒ ನರಗುಂದ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts