More

    ಸಿಸಿಟಿವಿ ದೃಶ್ಯಾವಳಿಗೆ ತಡಕಾಟ ; ಹಗರಣ ಬಹಿರಂಗ ಸೃಷ್ಟಿಸಿದ ತಲ್ಲಣ ; ಸ್ಮಾರ್ಟ್‌ಸಿಟಿ ಸಿಬ್ಬಂದಿಗೆ ಮಾನಸಿಕ ಕಿರುಕುಳ

    ತುಮಕೂರು : ಸ್ಮಾರ್ಟ್‌ಸಿಟಿ ಹಗರಣದ ಬಗ್ಗೆ ಸಮಗ್ರ ವರದಿ ನೀಡುವಂತೆ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್‌ಸಿ)ದ ಪತ್ರವನ್ನು ಗೌಪ್ಯವಾಗಿ ಇಡಲಾಗಿದ್ದು ಈ ಪತ್ರ ಬಹಿರಂಗವಾಗಿರುವುದು ಅಧಿಕಾರಿಗಳ ನಿದ್ದೆಗೆಡಿಸಿದೆ.

    ಅತ್ಯಂತ ಜತನದಿಂದ ಕಾಪಾಡಿಕೊಂಡು ಬಂದಿದ್ದ ಮಾಹಿತಿ ಸೋರಿಕೆ ಆಗಿರುವುದನ್ನು ಪತ್ತೆಹಚ್ಚಲು ಈಗ ಕಚೇರಿಯ ಸಿಸಿಟಿವಿ ದೃಶ್ಯಾವಳಿಗೆ ತಡಕಾಟ ನಡೆಸಲಾಗಿದೆ. ರಾಜ್ಯದ ಸ್ಮಾರ್ಟ್‌ಸಿಟಿ ಯೋಜನೆಯ ನೋಡಲ್ ಏಜೆನ್ಸಿಯಾದ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತದ ಲೆಕ್ಕ ಪರಿಶೋಧನಾ ತನಿಖಾ ತಂಡವು ‘ತುಮಕೂರು ಸ್ಮಾರ್ಟ್ ಸಿಟಿ’ಯಲ್ಲಿ ಸುಮಾರು 3 ಕೋಟಿ ರೂ. ಅವ್ಯವಹಾರ ನಡೆದಿರುವುದನ್ನು ಪತ್ತೆ ಹಚ್ಚಿದ್ದು, ಈ ಬಗ್ಗೆ ವಿಜಯವಾಣಿಯಲ್ಲಿ ಆ.21ರಂದು ‘ಸ್ಮಾರ್ಟ್ ಅವ್ಯವಹಾರ ಬೆಳಕಿಗೆ !’ ತಲೆಬರಹದಡಿ ವಿಶೇಷ ವರದಿ ಪ್ರಕಟವಾಗಿತ್ತು.

    ಹಗರಣ ಸೃಷ್ಟಿಸಿದ ತಲ್ಲಣ: ಸ್ಮಾರ್ಟ್‌ಸಿಟಿ ಹಗರಣ ಬಹಿರಂಗಗೊಳ್ಳುತ್ತಿದ್ದಂತೆ ಸಂಸ್ಥೆಯಲ್ಲಿ ತಲ್ಲಣ ಸೃಷ್ಟಿಸಿದ್ದು ಅಧಿಕಾರಿ ವಲಯ ಬೆಚ್ಚಿಬಿದ್ದಿದೆ. ಕಳೆದ 2 ವರ್ಷಗಳ ಹಿಂದೆ ಸ್ಮಾರ್ಟ್‌ಸಿಟಿ ಅಧ್ಯಕ್ಷರು ನಂತರ 2020ರಲ್ಲಿ ಅಂದಿನ ವ್ಯವಸ್ಥಾಪಕ ನಿರ್ದೇಶಕರು ನಡೆಸಿರುವ ಪತ್ರ ವ್ಯವಹಾರದ ಮಾಹಿತಿ ಬಹಿರಂಗಗೊಂಡಿರುವುದು ಅಧಿಕಾರಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

    ಹಗರಣದ ಗುರುತರ ಆರೋಪಹೊತ್ತಿರುವ ಲೆಕ್ಕ ಶಾಖೆಯ ಮುಖ್ಯಸ್ಥ ಕೆ.ಎ.ಶ್ರೀನಿವಾಸ್ ಅವರು ಕಚೇರಿಯಲ್ಲಿ ರಹಸ್ಯವಾಗಿಟ್ಟಿದ್ದ ಮಾಹಿತಿ ಬಹಿರಂಗವಾಗಿರುವುದನ್ನು ಪತ್ತೆ ಮಾಡಲು ದಿನವಿಡೀ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ್ದಾರೆ. ಇದರ ಜತೆಗೆ ಪ್ರತಿಯೊಬ್ಬ ಸಿಬ್ಬಂದಿಯನ್ನು ಅನುಮಾನದಿಂದ ಕರೆಸಿ ಮಾಧ್ಯಮದವರಿಗೆ ಮಾಹಿತಿ ಕೊಟ್ಟವರು ಯಾರೆಂದು ಪ್ರಶ್ನಿಸುವ ಮೂಲಕ ಮಾನಸಿಕ ಕಿರುಕುಳ ನೀಡಲಾಗಿರುವುದು ಸಹ ರಹಸ್ಯವಾಗೇನೂ ಉಳಿದಿಲ್ಲ. ಸ್ಮಾರ್ಟ್‌ಸಿಟಿ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ಮತ್ತಷ್ಟು ಅವ್ಯವಹಾರಗಳು ಹೊರಬೀಳಬಹುದೆಂಬ ಆತಂಕ ಈಗ ಅಧಿಕಾರಿ ವಲಯವನ್ನು ಕಾಡುತ್ತಿದೆ.

    ಕೆಯುಐಡಿಎಫ್‌ಸಿ ಪತ್ರ : 2018ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಬಿಡಗಡೆ ಮಾಡಿದ್ದ 260 ಕೋಟಿ ರೂಪಾಯಿ ಅನುದಾನವನ್ನು ದೀರ್ಘಕಾಲಿನ ಫ್ಲೆಕ್ಸಿ ಠೇವಣಿಯಲ್ಲಿಡದೆ ಉಳಿತಾಯ ಖಾತೆಯಲ್ಲೇ ಉಳಿಸಿಕೊಂಡಿದ್ದರಿಂದ ಸಂಸ್ಥೆಗೆ ಅಂದಾಜು 3 ಕೋಟಿ ರೂ. ಬಡ್ಡಿ ನಷ್ಟವಾಗಿತ್ತು. ಈ ಬಗ್ಗೆ ಕೆಯುಐಡಿಎಫ್‌ಸಿ ಲೆಕ್ಕಪರಿಶೋಧನಾ ತಂಡವೇ ತನಿಖೆ ನಡೆಸಿ ವರದಿ ನೀಡಿದ್ದು ಇದನ್ನು ಆಧರಿಸಿ ಎಂಡಿ ಎಂಟಿ ರೇಜು ಸಮಗ್ರ ವರದಿ ನೀಡುವಂತೆ ಹಾಲಿ ಸ್ಮಾರ್ಟ್‌ಸಿಟಿ ಎಂಡಿಗೆ ಪತ್ರ ಬರೆದಿರುವುದು ಅಲ್ಲೋಲಕಲ್ಲೋಲಕ್ಕೆ ಕಾರಣವಾಗಿದೆ. ಒಂದು ವಾರ ಕಳೆದರೂ ಈ ಪತ್ರಕ್ಕೆ ಉತ್ತರ ಕೊಡದೆ ಇರುವುದು ಹಲವು ಗುಮಾನಿಗಳನ್ನು ಹುಟ್ಟುಹಾಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts