More

    ಸಿದ್ಧಗಿರಿ ಆಸ್ಪತ್ರೆಯಲ್ಲಿ ಮಿದುಳು ಬೈಪಾಸ್ ಸರ್ಜರಿ ಯಶಸ್ವಿ

    ಬೆಳಗಾವಿ: ನಿರಾಧಾರ ಆಧಾರ ತತ್ವದಡಿ ರೋಗಿಗಳ ಸೇವೆಗೆ ಮೀಸಲಾದ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಪಶ್ಚಿಮ ಮಹಾರಾಷ್ಟ್ರದಲ್ಲಿ ಎನ್‌ಎಬಿಎಸ್ ನಾಮಾಂಕಿತ ಚಾರಿಟೆಬಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಎಂದು ಗುರುತಿಸಲ್ಪಟ್ಟಿದೆ ಎಂದು ಕೊಲ್ಲಾಪುರ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

    ಕನ್ಹೇರಿಯ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹದಯದ ಬೈಪಾಸ್ ಶಸ್ತ್ರಚಿಕಿತ್ಸೆ ಬಗ್ಗೆ ನಾವು ಯಾವಾಗಲೂ ಕೇಳುತ್ತೇವೆ. ಆದರೆ, ಬೈಪಾಸ್ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಮಿದುಳಿನ ಅಸ್ವಸ್ಥತೆ ಸರಿಪಡಿಸುವ ಶಸ್ತ್ರಚಿಕಿತ್ಸೆಗಳನ್ನು ಭಾರತದ 8-10 ಸ್ಥಳಗಳಲ್ಲಿ ಮಾತ್ರ ನಡೆಸಲಾಗುತ್ತದೆ. ಅದರಲ್ಲಿ ನಮ್ಮ ಆಸ್ಪತ್ರೆಯೂ ಒಂದು ಎಂದರು.

    ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ನ್ಯೂರೋಸರ್ಜನ್ ಡಾ. ಶಿವಶಂಕರ ಮರಜಕ್ಕೆ ಮಾತನಾಡಿ, ಆಸ್ಪತ್ರೆಯಲ್ಲಿ 25 ರೋಗಿಗಳು ಯಶಸ್ವಿಯಾಗಿ ಮಿದುಳಿನ ಬೈಪಾಸ್ ಸರ್ಜರಿಗೆ ಒಳಗಾಗಿದ್ದಾರೆ. ಇದು ಅತ್ಯಂತ ಕಷ್ಟಕರ ಮತ್ತು ಅಪರೂಪವೆಂದು ಪರಿಗಣಿಸಲಾಗಿದೆ. ಮಿದುಳು ಸರ್ಜರಿ ನಡೆಸಿದ ದೇಶದ ಮೊದಲ ಗ್ರಾಮೀಣ ಆಸ್ಪತ್ರೆ ನಮ್ಮದಾಗಿದೆ. ಇಂತಹ ಕಾಯಿಲೆಗಳಿಂದ ಬಳಲುತ್ತಿರುವ ಹಲವಾರು ರೋಗಿಗಳು ಮುಂಬೈ, ಬೆಂಗಳೂರು, ದೆಹಲಿಯಂತಹ ಮೆಟ್ರೋ ಸಿಟಿಗಳಿಗೆ ಹೋಗುವ ಬದಲು ಕನ್ಹೇರಿ ಮಠದಲ್ಲಿ ಚಿಕಿತ್ಸೆ ಪಡೆಯಬಹುದು ಎಂದರು.

    ಮಿದುಳಿನ ಮೋಯಾ-ಮೋಯಾ ಕಾಯಿಲೆಯಲ್ಲಿ ಎರಡೂ ರಕ್ತನಾಳಗಳು ರಕ್ತ ಪೂರೈಕೆ ನಿಲ್ಲಿಸುತ್ತವೆ. ಈ ರೋಗವು ಮುಖ್ಯವಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಅಂತಹ ಸಂದರ್ಭದಲ್ಲಿ ರೋಗಿಯು ಮತ್ತೆ ಮತ್ತೆ ಪಾರ್ಶ್ವವಾಯು ರೋಗಲಕ್ಷಣ ತೋರಿಸುತ್ತಾನೆ. ಅಂತಹ ಸಂದರ್ಭದಲ್ಲಿ ರೋಗಿಯು ಕೋಮಾಕ್ಕೆ ಹೋಗುವ ಸಾಧ್ಯತೆ ಹೆಚ್ಚು. ಈ ಸಮಯದಲ್ಲಿ ಬೈಪಾಸ್ ಸರ್ಜರಿ ಒಂದೇ ಪರಿಹಾರ ಎಂದು ತಿಳಿಸಿದರು.

    ಸಿದ್ಧಗಿರಿ ಆಸ್ಪತ್ರೆಯಲ್ಲಿ ನಾವು ಮುಖ್ಯವಾಗಿ ಎರಡು ರೀತಿ ಸರ್ಜರಿ ಮಾಡುತ್ತೇವೆ. ಮೊದಲ ವಿಧದಲ್ಲಿ ರಕ್ತ ಪೂರೈಕೆಯ ನಾಳಕ್ಕೆ ಪರ್ಯಾಯವಾಗಿ ತೋಳಿನಿಂದ ರಕ್ತನಾಳ ತೆಗೆದು ಹಾಕಲಾಗುತ್ತದೆ. ಕುತ್ತಿಗೆಯಿಂದ ಹೊಸ ನಾಳ ಸೇರಿಸಲಾಗುತ್ತದೆ. ಮಿದುಳಿಗೆ ರಕ್ತಪೂರೈಕೆ ಮಾಡುವ ಮುಖ್ಯ ಅಪಧಮನಿಗೆ ಜೋಡಿಸಲಾಗುತ್ತದೆ. ಅದಕ್ಕಾಗಿ ಸಾಮಾನ್ಯವಾಗಿ ದೇಹದ ಇತರ ಭಾಗಗಳಿಂದ ಧಮನಿಯ 20 ಸೆಂ.ಮೀ ಭಾಗ ಬಳಸಲಾಗುತ್ತದೆ. ಈ ರೀತಿ ಸರ್ಜರಿ ಮಾಡಲು ಅತ್ಯಂತ ಆಧುನಿಕ ಸೂಕ್ಷ್ಮದರ್ಶಕಗಳು ಮತ್ತು ಯಂತ್ರಗಳು ಬೇಕಾಗುತ್ತವೆ. ಯಂತ್ರ ನಿರ್ವಹಿಸಲು ಅನುಭವಿ ಸಿಬ್ಬಂದಿ ಅಗತ್ಯವಿದೆ. ಈ ಎಲ್ಲ ಸುಧಾರಿತ ತಂತ್ರಜ್ಞಾನಗಳನ್ನು ಸಿದ್ಧಗಿರಿ ಆಸ್ಪತ್ರೆಯಲ್ಲಿ ಕಾಡಸಿದ್ಧೇಶ್ವರ ಸ್ವಾಮೀಜಿ ಅವರು ಲಭ್ಯಗೊಳಿಸಿದ್ದಾರೆ ಎಂದರು.

    ಡಾ.ಪ್ರಕಾಶ ಭರಮಗೌಡರ, ನರ ಶಸ್ತ್ರಚಿಕಿತ್ಸಕ ಡಾ.ಆವಿಷ್ಕಾರ ಕಧವ್, ಡಾ. ನಿಶಾದ್ ಸಾಠೆ, ಡಾ. ಸ್ವಪ್ನಿಲ್ ವಾಲಿವಾಡೆ, ರಾಜೇಂದ್ರ ಶಿಂಧೆ, ಕುಮಾರ ಚವ್ಹಾಣ, ಅಭಿಜಿತ್ ಚೌಗಲೆ, ಸಾಗರ್ ಗೋಸಾವಿ, ಪ್ರಸಾದ್ ನೆವೆರೆಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts