More

    ಆಕಾಶ್-ಎನ್‌ಜಿ ಕ್ಷಿಪಣಿಯ ಪರೀಕ್ಷೆ ಯಶಸ್ವಿ: ದೇಶದ ವಾಯು ರಕ್ಷಣಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ

    ಭುವನೇಶ್ವರ: ಹೊಸ ತಲೆಮಾರಿನ ಆಕಾಶ್-ಎನ್‌ಜಿ ಕ್ಷಿಪಣಿಯನ್ನು ಭಾರತ ಶುಕ್ರವಾರ ಒರಿಸ್ಸಾದ ಕರಾವಳಿಯಲ್ಲಿ ಯಶಸ್ವಿಯಾಗಿ ಹಾರಾಟ-ಪರೀಕ್ಷೆ ನಡೆಸಿದೆ. ಈ ಮೂಲಕ ದೇಶದ ಸೇನಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ದೊರೆತಂತಾಗಿದೆ.

    “10.30 ಗಂಟೆಗೆ ಚಂಡೀಪುರದ ಸಮಗ್ರ ಪರೀಕ್ಷಾ ಶ್ರೇಣಿಯಿಂದ ಕ್ಷಿಪಣಿಯನ್ನು ಪರೀಕ್ಷಿಸಲಾಯಿತು” ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

    ಅತ್ಯಂತ ಕಡಿಮೆ ಎತ್ತರದಲ್ಲಿ ಹೆಚ್ಚಿನ ವೇಗದ ಮಾನವರಹಿತ ವೈಮಾನಿಕ ಗುರಿಯ ವಿರುದ್ಧ ಈ ಹಾರಾಟ ಪರೀಕ್ಷೆಯನ್ನು ನಡೆಸಲಾಯಿತು. ಶಸ್ತ್ರಾಸ್ತ್ರ ವ್ಯವಸ್ಥೆಯ ಯಶಸ್ವಿ ಪ್ರಯೋಗಗಳಿಗೆ ಅದರ ಬಳಕೆಗೆ ದಾರಿ ಮಾಡಿಕೊಟ್ಟಿದೆ ಎಂದು ಸಚಿವಾಲಯ ಹೇಳಿದೆ.

    ಆಕಾಶ್-ಎನ್‌ಜಿ ಕ್ಷಿಪಣಿಯು ಅಂದಾಜು 80 ಕಿಮೀ ಅಂತರ ಕ್ರಮಿಸುವ ವ್ಯಾಪ್ತಿ ಉಳ್ಳದ್ದಾಗಿದೆ.

    “ಉಡಾವಣೆ ಪರೀಕ್ಷೆಯ ಸಮಯದಲ್ಲಿ, ಶಸ್ತ್ರಾಸ್ತ್ರ ವ್ಯವಸ್ಥೆಯಿಂದ ಗುರಿಯನ್ನು ಯಶಸ್ವಿಯಾಗಿ ತಡೆದು ನಾಶಪಡಿಸಲಾಯಿತು. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ರೇಡಿಯೋ ಫ್ರೀಕ್ವೆನ್ಸಿ ಸೀಕರ್, ಲಾಂಚರ್, ಬಹು-ಕಾರ್ಯ ರಾಡಾರ್ ಮತ್ತು ಕಮಾಂಡ್, ಕಂಟ್ರೋಲ್ ಮತ್ತು ಸಂವಹನ ವ್ಯವಸ್ಥೆ ಇರುವ ಕ್ಷಿಪಣಿಯನ್ನು ಒಳಗೊಂಡಿರುವ ಸಂಪೂರ್ಣ ಶಸ್ತ್ರಾಸ್ತ್ರ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಇದು ಖಚಿತಪಡಿಸಿದೆ” ಎಂದು ಸಚಿವಾಲಯ ಹೇಳಿದೆ.

    “ಹಲವಾರು ರಾಡಾರ್‌ಗಳು, ಟೆಲಿಮೆಟ್ರಿ ಮತ್ತು ಎಲೆಕ್ಟ್ರೋ-ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್‌ಗಳಿಂದ ಸೆರೆಹಿಡಿಯಲಾದ ದತ್ತಾಂಶಗಳ ಮೂಲಕ ವ್ಯವಸ್ಥೆಯ ಕಾರ್ಯಕ್ಷಮತೆಯು ಖಚಿತಗೊಂಡಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾರತೀಯ ವಾಯುಪಡೆ, ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಹಿರಿಯ ಅಧಿಕಾರಿಗಳು ಹಾರಾಟ ಪರೀಕ್ಷೆಯನ್ನು ವೀಕ್ಷಿಸಿದ್ದಾರೆ” ಎಂದು ಸಚಿವಾಲಯ ಹೇಳಿದೆ.

    ಆಕಾಶ್-ಎನ್‌ಜಿ ವ್ಯವಸ್ಥೆಯು ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಹೆಚ್ಚಿನ ವೇಗದ ಮತ್ತು ಚಾಣಾಕ್ಷ ವೈಮಾನಿಕ ಬೆದರಿಕೆಗಳನ್ನು ಪ್ರತಿಬಂಧಿಸುವ ಸಾಮರ್ಥ್ಯ ಹೊಂದಿದೆ.

    ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್‌ಡಿಒ, ಭಾರತೀಯ ವಾಯುಪಡೆ ಮತ್ತು ಸಂಬಂಧಿತ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಈ ಹಾರಾಟ ಪರೀಕ್ಷೆಗೆ ಶ್ಲಾಘಿಸಿದ್ದಾರೆ. “ಈ ವ್ಯವಸ್ಥೆಯ ಯಶಸ್ವಿ ಅಭಿವೃದ್ಧಿಯು ದೇಶದ ವಾಯು ರಕ್ಷಣಾ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ” ಎಂದು ಅವರು ಹೇಳಿದ್ದಾರೆ.

    ಡಿಆರ್‌ಡಿಒ ಅಧ್ಯಕ್ಷ ಸಮೀರ್ ವಿ.ಕಾಮತ್ ಅವರು ಕೂಡ ಕ್ಷಿಪಣಿಯ ಯಶಸ್ವಿ ಹಾರಾಟ ಪರೀಕ್ಷೆಗೆ ಸಂಬಂಧಿಸಿದ ತಂಡಗಳನ್ನು ಅಭಿನಂದಿಸಿದ್ದಾರೆ.

    ರಾಮ ಮಂದಿರ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ: ನಾಲ್ವರು ಶಂಕರಾಚಾರ್ಯರ ಒಲವು ನಿಲುವುಗಳೇನು?

    ಸ್ಪರ್ಧೆಗೆ ಹಲವು ಬಿಜೆಪಿ ಸಂಸದರ ನಿರಾಸಕ್ತಿ: ರಾಜ್ಯದಲ್ಲಿ ಕಣಕ್ಕಿಳಿಯಲಿವೆ 11 ಹೊಸ ಮುಖಗಳು

    ಮೋದಿ ಉದ್ಘಾಟಿಸಲಿರುವ ಭಾರತದ ಅತ್ಯಂತ ಉದ್ದದ ಸಮುದ್ರ ಸೇತುವೆ ವೈಶಿಷ್ಟ್ಯಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts