More

    ಸಿದ್ದರಾಮಯ್ಯ ಸರ್ವಾಧಿಕಾರಿ ಧೋರಣೆಗೆ ಅಸಮಾಧಾನ

    ಕೋಲಾರ : ಸಿದ್ದರಾಮಯ್ಯ ಸರ್ಕಾರ ಸರ್ವಾಧಿಕಾರದ ಧೋರಣೆ ಅನುಸರಿಸುತ್ತಿದೆ. ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದೆ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಮುಳುಗಿ, ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
    ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ೪೮ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಎಎಸ್ ಅಧಿಕಾರಿಗಳನ್ನು ಐಎನ್‌ಡಿಐಎ ಸಭೆಗೆ ಆಗಮಿಸಿದ್ದ ವಿವಿಧ ಪಕ್ಷಗಳ ಮುಖಂಡರಿಗೆ ಯೋಗಕ್ಷೇಮ ನೋಡಿಕೊಳ್ಳಲು ನೇಮಿಸುವ ಮೂಲಕ ದ್ವಾರಪಾಲಕರು ಮತ್ತು ಕಾರ್ಯಕರ್ತರನ್ನಾಗಿ ಮಾಡಿಕೊಂಡಿದ್ದಾರೆ. ವರ್ಗಾವಣೆಗೆ ದರಗಳನ್ನು ನಿಗಧಿಪಡಿಸಿ ದಂಧೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಬಜೆಟ್ ಅಧಿವೇಶನದಲ್ಲಿ ರೈತರ ಆತ್ಮಹತ್ಯೆ, ಬೆಲೆ ಏರಿಕೆ, ವರ್ಗಾವಣೆ ಧಂದೆ, ಭಯೋತ್ಪಾದಕತೆ ಬಗ್ಗೆ ಮಾತನಾಡಲು ಅವಕಾಶ ನೀಡದೆ ಸರ್ವಾಧಿಕಾರ ಆಡಳಿತ ನಿರ್ವಹಿಸುತ್ತಿದ್ದಾರೆ ಎಂದು ದೂರಿದರು.
    ಈ ಕುರಿತು ಅಧಿವೇಶನದಲ್ಲಿ ಪ್ರತಿಭಟಿಸಿದ ಶಾಸಕರನ್ನು ಅಮಾನತ್ತು ಮಾಡಿದ್ದಾರೆ. ಸಭಾಧ್ಯಕ್ಷ ಯು.ಟಿ.ಖಾದರ್ ಕಾಂಗ್ರೆಸ್ ಕಾರ್ಯಕರ್ತರಂತೆ ನಡೆದುಕೊಂಡಿದ್ದಾರೆ. ಪಕ್ಷದ ಚಟುವಟಿಕೆಗಳಲ್ಲಿ ಸಹ ಭಾಗವಹಿಸುತ್ತಿದ್ದಾರೆ. ಇದಕ್ಕೆ ಸೋನಿಯ ಗಾಂಧಿರನ್ನು ಭೇಟಿಯಾಗಲು ಅರ್ಧಗಂಟೆ ಕಾದುಕುಳಿತ್ತಿದ್ದುದೇ ಸಾಕ್ಷಿ. ಸಭಾಧ್ಯಕ್ಷರು ಪಕ್ಷಬಂಧದಿಂದ ಮುಕ್ತರಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂಬುವುದು ಅವರ ಅರಿವಿಗಿಲ್ಲ ಎಂದರು.
    ವಿಪಕ್ಷಗಳ ರಾಜಕೀಯ ನಾಯಕರಿಗೆ ಐಎಎಸ್ ಅಧಿಕಾರಿಗಳನ್ನು ಪಿಆರ್‌ಒಗಳನ್ನಾಗಿ ನಿಯೋಜಿಸಿಕೊಂಡಿದ್ದರ ವಿರುದ್ಧ ಬಿಜೆಪಿಯಿಂದ ಈಗಾಗಲೆ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ರಾಜ್ಯಪಾಲರು ಅಧಿಕಾರಿಗಳ ಪಟ್ಟಿ ತರಿಸಿಕೊಂಡು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
    ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ ಮಾತನಾಡಿ, ಕೇಂದ್ರ ಸರ್ಕಾರವು ಫಸಲ್ ಭೀಮಾ ಯೋಜನೆಯಲ್ಲಿ ರೈತರ ಖಾತೆಗೆ ೬ ಸಾವಿರ ರೂ. ಬಿಡುಗಡೆ ಮಾಡಿದ್ದು ರಾಜ್ಯ ಸರ್ಕಾರವು ೪ ಸಾವಿರ ರೂ. ಜಮೆ ಮಾಡಬೇಕಾಗಿದೆ. ನೀರಾವರಿಗೆ ಅನುದಾನಗಳನ್ನು ಬಿಡುಗಡೆ ಮಾಡಬೇಕು. ರೈತರು ಕೃಷಿಉತ್ಪನ್ನವನ್ನು ಸ್ವತಂತ್ರöವಾಗಿ ಮಾರಾಟ ಮಾಡುವ ಹಕ್ಕನ್ನು ಕಸಿದು ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಮೂಲಕವೇ ಕಮೀಷನ್ ನೀಡಿ ಮಾರಾಟ ಮಾಡುವ ಹುನ್ನಾರ ಮಾಡಿದ್ದಾರೆ ಎಂದು ದೂರಿದರು.
    ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಟ್ಟಿದೆ. ಗೃಹ ಇಲಾಖೆ ವೈಫಲ್ಯದಿಂದ ಹತ್ಯೆ, ಕಳವು, ಅತ್ಯಾಚಾರ, ದರೋಡೆ ಮತ್ತಿತರ ಪ್ರಕಣಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು ನೆಮ್ಮದಿಯಿಂದ ಜೀವನ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಜೈಮುನಿ ಭೀಕರ ಹತ್ಯೆ, ಬೆಂಗಳೂರಿನಲ್ಲಿ ಐವರು ಉಗ್ರರು ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದು ಸೇರಿ ನಾನಾ ಕಡೆ ಕ್ರಿಮಿನಲ್ ಪ್ರಕರಣಗಳು ನಡೆಯುತ್ತಿದ್ದರೂ ಅಪರಾಧಿಗಳನ್ನು ಪತ್ತೆ ಹಚ್ಚಿ ಜೈಲಿಗೆ ಕಳುಹಿಸುವ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.
    ಸಿದ್ದರಾಮಯ್ಯರ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಪ್ರತಿಕೃತಿ ದಹನ ಮಾಡಲಾಯಿತು.
    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಕೆಯುಡಿಎ ಮಾಜಿ ಅಧ್ಯಕ್ಷ ವಿಜಯಕುಮಾರ್, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರ, ನಗರ ಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಕಾರ್ಯದರ್ಶಿ ರಾಜೇಶ್ ಸಿಂಗ್, ಮಾಧ್ಯಮ ವಕ್ತಾರ ಕೆಂಬೋಡಿ ನಾರಾಯಣಸ್ವಾಮಿ, ಆಶ್ರಯ ಸಮಿತಿ ಮಾಜಿ ಸದಸ್ಯ ಗೋವಿಂದರಾಜು, ಮುಖಂಡರಾದ ಮಾಗೇರಿ ನಾರಾಯಣಸ್ವಾಮಿ, ಶಿಳ್ಳೆಂಗೆರೆ ಮಹೇಶ್, ಶ್ರೀನಿವಾಸಪುರ ಮುನಿವೆಂಕಟಪ್ಪ, ಮುಳಬಾಗಿಲು ಸುಂದರ್, ಬಂಗಾರಪೇಟೆ ಚಂದ್ರಾರೆಡ್ಡಿ, ಮಂಜುನಾಥ್ ಸಿಂಗ್, ವೇಮಗಲ್ ಓಹೀಲೇಶ್, ಬಾಲಾಜಿ. ಮಂಜುನಾಥ್, ಮಹಿಳಾ ನಾಯಕಿ ಮಮತಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts