More

    ಸಿಎಸ್‌ಆರ್ ಅಭಿವೃದ್ಧಿಗೆ ಪೂರಕ, ಶಾಸಕ ವಿಶ್ವನಾಥ್ ಅಭಿಮತ ಸೇತುವೆ, ನೂತನ ರಸ್ತೆ ಉದ್ಘಾಟನೆ

    ನೆಲಮಂಗಲ: ಸಾಮಾಜಿಕ ಜವಾಬ್ದಾರಿಯನ್ನು ಹೊತ್ತ ಕೆಲ ಕಂಪನಿಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮುಂದಾಗಿರುವುದು ಸಂತಸದ ಸಂಗತಿ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ತಿಳಿಸಿದರು.

    ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ಮಾಕಳಿ ಮತ್ತು ಹಾರೋಕ್ಯಾತನಹಳ್ಳಿ ಮಾರ್ಗದಲ್ಲಿ ಬಿಎಚ್‌ಇಎಲ್‌ನ ಸಿಎಸ್‌ಆರ್ ಅನುದಾನದಡಿ ನಿರ್ಮಿಸಿದ್ದ ಅರ್ಕಾವತಿ ನದಿ ನಾಲೆಯ ಸೇತುವೆ ಮತ್ತು ಗ್ರಾಮದ ಸಂಪರ್ಕ ರಸ್ತೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

    ಬಿಎಚ್‌ಇಎಲ್, ಜಿಂದಾಲ್ ಸೇರಿ ಹತ್ತಾರು ಕಂಪನಿಗಳು ಗಳಿಸಿದ ಲಾಭದ ಸ್ವಲ್ಪ ಪ್ರಮಾಣವನ್ನು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮೀಸಲಿರಿಸಿದ್ದು, ಜನರಿಗೆ ಅನುಕೂಲವಾಗಿದೆ. ಗ್ರಾಮದ ಇನ್ನೊಂದು ಸಂಪರ್ಕ ರಸ್ತೆ ಅಭಿವೃದ್ಧಿಗೂ ಸರ್ಕಾರದಿಂದ 1.30 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.

    ನಿವೇಶನ ಹಂಚಿಕೆಗೆ ಕ್ರಮ: ಬಿಡಿಎನಿಂದ ದಾಸನಪುರ ಹೋಬಳಿಯ ಆಲೂರು ಮತ್ತು ಹುಣ್ಣಿಗೆರೆಯಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ದಾಸನಪುರ ವ್ಯಾಪ್ತಿಯಲ್ಲಿ ನೂರಾರು ನಿವೇಶನ ವಿಂಗಡಣೆ ಮಾಡಿದ್ದು, ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲು ಈಗಾಗಲೇ ತಹಸೀಲ್ದಾರ್‌ಗೆ ತಿಳಿಸಲಾಗಿದೆ ಎಂದು ಹೇಳಿದರು.

    ಬಿಎಚ್‌ಇಎಲ್ ಮಾನವಸಂಪನ್ಮೂಲ ಅಭಿವೃದ್ಧಿ ಅಧಿಕಾರಿ ಅನಿಲ್ ಕಪೂರ್ ಮಾತನಾಡಿ, ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ 75 ಲಕ್ಷ ರೂ. ವೆಚ್ಚದ ಸೇತುವೆ ಹಾಗೂ ರಸ್ತೆ ನಿರ್ಮಿಸಿಕೊಡಲಾಗಿದೆ. ಸಂಸ್ಥೆಯಿಂದ ಶಾಲೆ, ಶೌಚಗೃಹ, ಶುದ್ಧಕುಡಿಯುವ ನೀರಿನ ಘಟಕ ನಿರ್ಮಾಣ, ಕೋವಿಡ್-19 ಸಂದರ್ಭದಲ್ಲಿ ಆರೋಗ್ಯ ಕಿಟ್ ವಿತರಣೆ ಸೇರಿ ನೂರಾರು ಸಮಾಜಮುಖಿ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದರು.

    ಪಂಚಾಯಿತಿ ಕಾರ್ಯಾಲಯಕ್ಕೆ ಮನವಿ: ಅಂಗನವಾಡಿ ಜಾಗದಲ್ಲಿ ಪಂಚಾಯಿತಿ ಕಾರ್ಯಾಲಯ 5 ವರ್ಷಗಳಿಂದಲೂ ನಡೆಯುತ್ತಿದೆ. ಅಡಕಿಮಾರನಹಳ್ಳಿ ಗ್ರಾಮದ 2 ಎಕರೆ ಸರ್ಕಾರಿ ಜಾಗದಲ್ಲಿ ಶಾಲೆ, ಗ್ರಂಥಾಲಯ, ಆಸ್ಪತ್ರೆ, ಪಶುಆಸ್ಪತ್ರೆ, ಅಂಚೆಕಚೇರಿ ಮತ್ತು ಆಟದ ಮೈದಾನಕ್ಕೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಗ್ರಾಪಂ ಅಧ್ಯಕ್ಷ ಶ್ರೀನಿವಾಸ್ ಶಾಸಕರಲ್ಲಿ ಮನವಿ ಮಾಡಿಕೊಂಡರು.

    ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್, ತಹಸೀಲ್ದಾರ್ ಬಾಲಕೃಷ್ಣ, ಬಿಜೆಪಿ ಯಲಹಂಕ ಮಂಡಲ ಅಧ್ಯಕ್ಷ ಹನುಮಯ್ಯ, ಜಿಪಂ ಸದಸ್ಯೆ ರತ್ನಮ್ಮ, ತಾಪಂ ಸದಸ್ಯೆ ನಂದಾಸಿಂಗ್, ಗ್ರಾಪಂ ಉಪಾಧ್ಯಕ್ಷೆ ವಿ. ರೂಪಾ, ಸದಸ್ಯರಾದ ಭವ್ಯಾ ಜಗದೀಶ್, ಮಂಜುಳಾ ರಾಜಣ್ಣ, ಪುಟ್ಟಗಂಗಮ್ಮಮೋಹನ್, ರಾಜೇಶ್, ವೆಂಕಟೇಶ್, ಗಂಗರಾಜು, ನಾಗೇಶ್, ಶಂಕರ್, ಗಿರಿಗೌಡ, ಶೋಭಾ ಪ್ರಕಾಶ್, ಅನಿತಾ ಮುಖಂಡರಾದ ಎಚ್.ಎ. ಪ್ರಕಾಶ್, ನಾಗೇಶ್, ಸಿದ್ಧಲಿಂಗಪ್ಪ, ರಾಮಕೃಷ್ಣಪ್ಪ, ನರಸಿಂಹಯ್ಯ, ಮಂಜುನಾಥ್, ಲೋಕೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts