More

    ಸಿಎಸ್​ಇಝುಡ್ ಘೊಷಿಸುವ ಪ್ರಸ್ತಾವನೆ

    ಕಾರವಾರ: ಜಿಲ್ಲೆಯ ಮುರ್ಡೆಶ್ವರದಿಂದ ಕಾರವಾರದವರೆಗೆ ಕರಾವಳಿ ವಿಶೇಷ ಆರ್ಥಿಕ ವಲಯ (ಸಿಎಸ್​ಇಝುಡ್) ಘೊಷಿಸುವ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅವರು, ‘ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಇದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಮಾಡುವುದಿಲ್ಲ. ಆದರೆ, ಮೂಲಸೌಕರ್ಯ ಒದಗಿಸಿ ಕೈಗಾರಿಕೆಗಳ ಬೆಳವಣಿಗೆಗೆ ಬೇಕಾದ ವ್ಯವಸ್ಥೆ ಮಾಡಿಕೊಡಲಾಗುವುದು’ ಎಂದು ಹೇಳಿದರು.

    ಬೇಲೆಕೇರಿ ಬಂದರನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಕೇಂದ್ರ ಸರ್ಕಾರ ನೆರವು ನೀಡಲು ಸಿದ್ಧವಿದ್ದು, ಇದಕ್ಕಾಗಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಅದಿರು ಸಂಬಂಧ ಕೆಲವು ನ್ಯಾಯಾಲಯದ ಪ್ರಕರಣಗಳಿವೆ. ಅವುಗಳನ್ನು ಬಗೆಹರಿಸಿ ಶೀಘ್ರ ಬಂದರು ಅಭಿವೃದ್ಧಿಗೆ ವಿಸ್ತ್ರತ ಕ್ರಿಯಾ ಯೋಜನೆ ಮಾಡಲಾಗುವುದು ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಾಸಕ ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಕಪಿಲ್ ಮೋಹನ್, ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಜಿಪಂ ಸಿಇಒ ಎಂ.ರೋಶನ್, ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಇದ್ದರು.

    ಅಧಿಕಾರಿಗಳಿಗೆ ಸೂಚನೆ: ತದಡಿಯಲ್ಲಿ 1972 ರಲ್ಲಿ ಕೆಐಡಿಬಿ ಭೂಸ್ವಾಧೀನ ಮಾಡಿಕೊಂಡ 1800 ಎಕರೆ ಜಮೀನಿನಲ್ಲಿ ಪ್ರವಾಸೋದ್ಯಮ ಹಬ್ ಪ್ರಾರಂಭಿಸುವ ಬಗ್ಗೆ ಕ್ರಿಯಾ ಯೋಜನೆ ರೂಪಿಸಿ. ಕೆಪಿಸಿಗೆ ಹಸ್ತಾಂತರಿಸಿದ 400 ಎಕರೆ ಜಮೀನನ್ನು ವಾಪಸ್ ಪಡೆಯಿರಿ.

    ಕಾರವಾರದ ಮುಡಗೇರಿಯಲ್ಲಿ ಕೈಗಾರಿಕಾ ವಸಾಹತು ನಿರ್ವಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸಿದ ಜಮೀನಿನ ರೈತರ ಜತೆ ಸಭೆ ಮಾಡಿ, ಹೊಸ ಬೆಲೆ ನಿಗದಿ ಮಾಡಿ. ವಿವಿಧೆಡೆ ಸಣ್ಣ ಕೈಗಾರಿಕೆಗಳ ನಿರ್ವಣಕ್ಕೆ ಭೂಮಿ ಒದಗಿಸುವ ಬಗ್ಗೆ ಯೋಜನೆ ರೂಪಿಸಿ

    ವಿಮಾನ ನಿಲ್ದಾಣದ ಬಗ್ಗೆ ಶೀಘ್ರ ನಿರ್ಧಾರ
    ನೌಕಾನೆಲೆ ಹಾಗೂ ನಾಗರಿಕ ಬಳಕೆಗಾಗಿ ಅಲಗೇರಿಯಲ್ಲಿ ವಿಮಾನ ನಿಲ್ದಾಣ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ರ್ಚಚಿಸಿ ಶೀಘ್ರ ನಿರ್ಧಾ ಕೈಗೊಳ್ಳಲಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಬೇಲೆಕೇರಿ ಬಂದರು ಹಾಗೂ ವಿಮಾನ ನಿಲ್ದಾಣ ಮಾಡುವ ಸ್ಥಳ ಪರಿಶೀಲನೆ ನಡೆಸಿ, ನೌಕಾ ಅಧಿಕಾರಿಗಳು ಸಿದ್ಧ ಪಡಿಸಿದ ನೀಲ ನಕ್ಷೆ ವೀಕ್ಷಿಸಿ ಅವರು ಮಾತನಾಡಿದರು. ವಿಮಾನ ನಿಲ್ದಾಣ ನಿರ್ವಣದಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಲಿದೆ. ಇದಕ್ಕೆ ವಿರೋಧ ಮಾಡಬಾರದು ಎಂದು ವಿನಂತಿಸಿದರು.

    ನೌಕಾನೆಲೆಯವರು 2025ರೊಳಗೆ ವಿಮಾನ ನಿಲ್ದಾಣ ಸಿದ್ಧ ಮಾಡಬೇಕಿದೆ. ರಾಜ್ಯ ತನ್ನ ನಿರ್ಧಾರ ಪ್ರಕಟಿಸಿದರೆ, ಎರಡೂ ಒಟ್ಟೊಟ್ಟಿಗೆ ಕಾಮಗಾರಿ ಪ್ರಾಂಭವಾಗಲಿದೆ. ಈ ವಿಷಯ ಸಚಿವ ಸಂಪುಟದಲ್ಲಿ ಚರ್ಚೆಯಾಗಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಮಾಹಿತಿ ನೀಡಿದರು.

    ಅಂಕೋಲಾ- ಹುಬ್ಬಳ್ಳಿ ರೈಲು ಮಾರ್ಗಕ್ಕೆ ಉ.ಕ. ಜಿಲ್ಲೆಯವರೇ ಅಡ್ಡಗಾಲು
    ಯಲ್ಲಾಪುರ:
    ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಮಹತ್ವವನ್ನು ಹೈಕೋರ್ಟ್​ಗೆ ಮನವರಿಕೆ ಮಾಡಿಕೊಟ್ಟು, ತಡೆಯಾಜ್ಞೆಯನ್ನು ತೆರವು ಮಾಡುವ ಪ್ರಯತ್ನ ನಡೆಸಲಾಗುವುದು ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

    ಬೇಲೆಕೇರಿ ಬಂದರು ಹಾಗೂ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗವಾದರೆ, ಕೇವಲ ಉತ್ತರ ಕನ್ನಡಕ್ಕಲ್ಲ, ಇಡೀ ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲವಾಗಲಿದೆ. ರೈಲು ಯೋಜನೆ ನಿರ್ವಣಕ್ಕೆ ಸರ್ಕಾರದಿಂದ ಯಾವುದೇ ರೀತಿ ಹಿನ್ನಡೆಯಾಗಿಲ್ಲ. ಅದಕ್ಕೆ ಉತ್ತರ ಕನ್ನಡ ಜಿಲ್ಲೆಯವರೇ ಅಡ್ಡಗಾಲು ಹಾಕುತ್ತಿದ್ದಾರೆ. ಇದು ಸರ್ಕಾರಕ್ಕೂ ಕಗ್ಗಂಟಾಗಿದೆ ಎಂದರು.

    ಕೇವಲ ಬೆಂಗಳೂರನ್ನು ಕೇಂದ್ರೀಕರಿಸಿ ಉದ್ಯಮಗಳು ಬೆಳೆಯಬಾರದು. ಎರಡು ಮತ್ತು ಮೂರನೇ ಹಂತದ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಕ್ರಮ ವಹಿಸಿದೆ. ಕೃಷಿ ಭೂಮಿ ಖರೀದಿಗೆ ನಿಯಮ ಸರಳೀಕರಣಗೊಳಿಸಿದೆ. ಚೀನಾ ತೊರೆದು ಬರುವ ಕೈಗಾರಿಕೆಗಳನ್ನು ಸೆಳೆಯಲು ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಉದ್ಯಮಿಗಳಿಗೆ ಅನುಮತಿ ನೀಡಲು ಏಕ ಹವಾಕ್ಷಿ ನೀತಿ ಜಾರಿಗೆ ತರಲಾಗಿದೆ ಎಂದರು.

    ಬಿಜೆಪಿ ರಾಜ್ಯ ವಕ್ತಾರ ಪ್ರಮೋದ ಹೆಗಡೆ, ಸಹಕಾರಿ ಕ್ಷೇತ್ರ ಹಾಗೂ ಆರ್ಥಿಕ ಸಂಸ್ಥೆಗಳ ಸಮಸ್ಯೆಗಳ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ತಾ.ಪಂ. ಅಧ್ಯಕ್ಷೆ ಚಂದ್ರಕಲಾ ಭಟ್ಟ, ಸದಸ್ಯರಾದ ನಟರಾಜ ಗೌಡರ್, ಸುಬ್ಬಣ್ಣ ಬೋಳ್ಮನೆ, ಜಿ.ಪಂ. ಮಾಜಿ ಸದಸ್ಯರಾದ ಉಮೇಶ ಭಾಗ್ವತ, ವಿಜಯ ಮಿರಾಶಿ, ಪ.ಪಂ. ಮಾಜಿ ಅಧ್ಯಕ್ಷ ಶಿರೀಷ ಪ್ರಭು, ಪ್ರಮುಖ ಗಣಪತಿ ಮುದ್ದೆಪಾಲ ಇತರರಿದ್ದರು.

    ಕ್ರೀಡಾಂಗಣ ಜಾಗ ಪರಿಶೀಲನೆ
    ಕಾರವಾರ ಚಿತ್ತಾಕುಲಾ ಗ್ರಾಪಂ ವ್ಯಾಪ್ತಿಯಲ್ಲಿ ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ನಿರ್ವಿುಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಜಾಗವನ್ನು ಸಚಿವ ಜಗದೀಶ ಶೆಟ್ಟರ್ ಹಾಗೂ ಶಿವರಾಮ ಹೆಬ್ಬಾರ ಅವರು ಶುಕ್ರವಾರ ಪರಿಶೀಲಿಸಿದರು. ಕ್ರೀಡಾಂಗಣಕ್ಕೆ ಸರ್ಕಾರ ಲೀಸ್ ಮೇಲೆ ನೀಡಲು ಮುಂದಾಗಿರುವ ಜಾಗ ಗೋಮಾಳವಾಗಿದ್ದು, ಅದನ್ನು ಪರಿವರ್ತನೆ ಮಾಡಬಾರದು ಎಂದು ಸ್ಥಳೀಯರು ಸಚಿವರಿಗೆ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts