More

    ಸಿಎಂ ಮಾತು ತಪ್ಪಿದ್ದು ನೋವಿನ ಸಂಗತಿ

    ಸವದತ್ತಿ: ಮೀಸಲಾತಿ ಘೋಷಿಸುವುದಾಗಿ ತಿಳಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಮತ್ತೆ ಮಾತು ತಪ್ಪುತ್ತಿರುವುದು ನೋವು ತಂದಿದೆ ಎಂದು ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

    ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಸೋಮವಾರ ಏರ್ಪಡಿಸಿದ್ದ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಅವರು, ಮೀಸಲಾತಿ ಘೋಷಿಸದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಯಡಿಯೂರಪ್ಪ ಮಾತು ಕೊಟ್ಟು ತಪ್ಪಿದ್ದಕ್ಕೆ ಪಂಚಮಸಾಲಿಗಳಲ್ಲಿ ಅಸಮಾಧಾನವಿದೆ. ಸಿಹಿ ಸುದ್ದಿ ನೀಡುವ ಬದಲಾಗಿ ಸರ್ಕಾರ ನಮ್ಮೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.

    ಶ್ರೀಮಂತ ಸಮುದಾಯಕ್ಕೆ ಮೀಸಲಾತಿ ನೀಡಿದ ಸರ್ಕಾರ ಪಂಚಮಸಾಲಿಗಳಿಗೆ ಏಕೆ ನೀಡುತ್ತಿಲ್ಲ. ಡಾ.ಅಂಬೇಡ್ಕರ್ ನೀಡಿದ ರೊಟ್ಟಿಯೊಂದರಲ್ಲಿ ಬರೀ ಒಂದು ತುತ್ತನ್ನು ನಮ್ಮ ಸಮಾಜ ಕೇಳುತ್ತಿದೆ. ನಮ್ಮ ಹೋರಾಟ ನಿರಂತರವಾಗಿರಲಿದ್ದು, ಡಿ. 22ರಂದು 25 ಲಕ್ಷ ಪಂಚಮರೊಂದಿಗೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕೋಣ. ಮೀಸಲಾತಿ ನೀಡಿದಲ್ಲಿ ಮುತ್ತಿನ ಹಾರ, ಇಲ್ಲದಿದ್ದರೆ ವಿಧಾನಸೌಧಕ್ಕೆ ಹರಹರ ಮಹಾದೇವ ಎನ್ನುತ್ತ ಮುತ್ತಿಗೆ ಹಾಕುತ್ತೇವೆ ಎಂದರು.

    ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಎಲ್ಲ ಪಕ್ಷದ ಮುಖಂಡರು ಸೇರಿ ನಡೆಸಿದ ಪ್ರಯತ್ನ ಫಲ ನೀಡುತ್ತದೆ. ಭವಿಷ್ಯದಲ್ಲಿ ಒಳ್ಳೆಯ ಅವಕಾಶಗಳಿವೆ. ಬೊಮ್ಮಾಯಿ ಮೀಸಲಾತಿ ನೀಡುತ್ತಾರೆಂಬ ವಿಶ್ವಾಸವಿದೆ. ಪಕ್ಷದ ಕೋರ್ ಕಮಿಟಿಯಲ್ಲಿ ನಮ್ಮ ಸಮುದಾಯದ ಹಿರಿಯ ವ್ಯಕ್ತಿಗೆ ಸ್ಥಾನ ನೀಡಬೇಕು. ಲಿಂಗಾಯತರ ಹೆಸರು ಹೇಳಿ ಬೆಣ್ಣಿ ತಿಂದವರು ಬಹಳ ಜನರಿದ್ದಾರೆ. ಎರಡೂ ಪಕ್ಷಗಳ ನಡುವೆ ಮೀಸಲಾತಿ ಕುರಿತು ಪ್ರಕ್ರಿಯೆ ನಡೆದಿದೆ. 22ಕ್ಕೆ ಮೀಸಲಾತಿ ಪ್ರಕಟಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದ್ದಾರೆ ಎಂದರು.

    ಪಂಚಮಸಾಲಿ ಜಿಲ್ಲಾಧ್ಯಕ್ಷ ಪಂಚನಗೌಡ ದ್ಯಾಮನಗೌಡರ ಮಾತನಾಡಿ, ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಮೀಸಲಾತಿ ಬೇಕಾಗಿದೆ. ಬಸವೇಶರ ಐಕ್ಯ ಸ್ಥಳದಿಂದ ಹಂತ ಹಂತವಾಗಿ ಈ ಕುರಿತು ಹೋರಾಟ ಆರಂಭವಾಗಿದೆ. ಕರ್ನಾಟಕದ 6 ಕೋಟಿ ಜನಸಂಖ್ಯೆಯಲ್ಲಿ 1.30 ಕೋಟಿ ಪಂಚಮಸಾಲಿ ಸಮುದಾಯವಿದೆ. ಮೀಸಲಾತಿ ಭಿಕ್ಷೆಯಲ್ಲ. ಅದು ನಮ್ಮ ಹಕ್ಕು. ಅದನ್ನು ಪಡೆಯದೇ ವಿಶ್ರಮಿಸುವುದಿಲ್ಲ. ಸಂವಿಧಾನದಡಿ ಮೀಸಲಾತಿ ನೀಡುವ ಅವಕಾಶವಿದೆ ಎಂದರು.

    ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಅರವಿಂದ ಬೆಲ್ಲದ, ಈರಣ್ಣ ಕಡಾಡಿ ಮಾತನಾಡಿದರು. ವಿನಯಕುಮಾರ ದೇಸಾಯಿ, ಸುರೇಶ ಬಡಗಿಗೌಡ್ರ, ವಿಜಯಾನಂದ ಕಾಶಪ್ಪನವರ, ಈರಣ್ಣ ಕಡಾಡಿ, ವಿನಯ ಕುಲಕರ್ಣಿ, ಅಲ್ಲಮಪ್ರಭು ಪ್ರಭುನವರ, ಸಂಜೀವಕುಮಾರ ನವಲಗುಂದ, ದೊಡಗೌಡ ಖೋದಾನಪುರ, ಬಸವರಾಜ ಪುಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts