More

    ಸಾಹಿತ್ಯಕ್ಕಿದೆ ಸಮಾಜ ತಿದ್ದುವ ಶಕ್ತಿ ಮಾಜಿ ಸಚಿವೆ ಡಾ. ಬಿ.ಟಿ. ಲಲಿತಾನಾಯಕ್ ಅಭಿಮತ

    ನೆಲಮಂಗಲ ಸಾಹಿತ್ಯಕ್ಕೆ ಸಮಾಜವನ್ನು ಬದಲಿಸುವ ಶಕ್ತಿಯಿದೆ ಎಂದು ಮಾಜಿ ಸಚಿವೆ ಡಾ. ಬಿ.ಟಿ. ಲಲಿತಾನಾಯಕ್ ಅಭಿಪ್ರಾಯಪಟ್ಟರು.

    ನಗರದ ಪವಾಡಶ್ರೀ ಬಸವಣ್ಣ ದೇವರ ಮಠದಲ್ಲಿ ನೆಮ್ಮದಿ ಸಂಸ್ಥೆ, ಮಾತೃಕೃಪ ಪ್ರಕಾಶನ ಬುಧವಾರ ಆಯೋಜಿಸಿದ್ದ ಸಾಹಿತಿ ಎಚ್. ರಾಮುಜೋಗಿಹಳ್ಳಿ ರಚಿತ ಚಾಪೆ ನೇಯುವ ಹುಡುಗಿ ಎಂಬ ಜಾಗೃತಿ ಗೀತೆಗಳ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು.

    ಸಾಹಿತ್ಯ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಇದರ ಮೂಲಕ ದೇಶದಾದ್ಯಂತ ಹಲವು ಚಳವಳಿ, ಹೋರಾಟ ಮತ್ತು ಸತ್ಯಾಗ್ರಹ ನಡೆದಿವೆ. ಸಾಹಿತ್ಯ ಕ್ಷೇತ್ರಕ್ಕೆ ಜನಪದರು, ಶಿವಶರಣರು, ಕವಿಗಳು, ಸಾಹಿತಿಗಳು ನೀಡಿರುವ ಕೊಡುಗೆ ಅಪಾರ ಎಂದರು.

    ಅಧುನಿಕ ಜಗತ್ತಿನಲ್ಲಿ ಕೆಲ ಪುರೋಹಿತಶಾಹಿಗಳು ಜನರಿಗೆ ಮೂಢನಂಬಿಕೆಯ ಬೀಜ ಬಿತ್ತುತಿದ್ದಾರೆ. ಅವರನ್ನು ವೈಜ್ಞಾನಿಕವಾಗಿ ಮುಕ್ತಿಗೊಳಿಸುವ ಕೆಲಸವನ್ನು ಸಾಹಿತಿಗಳು ಮಾಡಿದ್ದಾರೆ. ಮೂಢನಂಬಿಕೆಯ ಬೇರನ್ನು ಬುಡ ಸಾಮೇತ ಕಿತ್ತುಹಾಕಿ ಮುಂದಿನ ಪೀಳಿಗೆಯ ಮಕ್ಕಳಲ್ಲಿ ಮಾನವೀಯತೆ ಮತ್ತು ವೈಜ್ಞಾನಿಕ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

    ರಾಜ್ಯ ಬೀದಿನಾಟಕ ಸಂಘಗಳ ಗೌರವಾಧ್ಯಕ್ಷ ಗ್ಯಾರಂಟಿ ರಾಮಣ್ಣ ಮಾತನಾಡಿ, ಚಾಪೆ ನೇಯುವ ಹುಡುಗಿ ಕವನ ಸಂಕಲನ ಮಹಿಳೆಯ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸುತ್ತದೆ. ಜತೆಗೆ ಅಧುನಿಕ ರಾಜಕೀಯ ವ್ಯವಸ್ಥೆ, ಶಿಕ್ಷಣ, ಹೋರಾಟ, ಮತದಾನ, ಬಾಲ್ಯವಿವಾಹ, ರೈತರ ಸಮಸ್ಯೆ, ಮಾನವೀಯತೆ, ಸ್ವಚ್ಛತೆ ಸೇರಿ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ ಎಂದರು.

    ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಅಲೋಚನೆ ಮಾಡಿ ಸಾಹಿತಿ ಎಚ್. ರಾಮುಜೋಗಿಹಳ್ಳಿ ಪುಸ್ತಕಕ್ಕೆ ಬರೆದಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ಸರ್ಕಾರ, ಜನಪ್ರತಿನಿಧಿಗಳು ಎಲ್ಲರೂ ಎಚ್ಚೆತ್ತುಕೊಳ್ಳುವ ರೀತಿಯ ಕವಿತೆಗಳು ಇವರಿಂದ ಇನ್ನಷ್ಟು ಮೂಡಿ ಬರಲಿ ಎಂದು ಹಾರೈಸಿದರು.

    ಕಾರ್ಯಕ್ರಮಕ್ಕೂ ಮುನ್ನ ಖ್ಯಾತ ಜಾನಪದ ಗಾಯಕ ಚಿಕ್ಕರೆಡ್ಡಿ ಮತ್ತು ತಂಡದವರು ಗೀತೆ ಪ್ರಸ್ತುತಪಡಿಸಿದರು. ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಆರ್. ಪ್ರಮೋದ್‌ಕುಮಾರ್, ವಿಮುಕ್ತಿ ವಿದ್ಯಾಸಂಸ್ಥೆ ನಿರ್ದೇಶಕ ಆರ್. ವಿಶ್ವಸಾಗರ್, ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎಂ.ವಿ. ನೆಗಳೂರು, ವಿಕಾಸ ಸಂಸ್ಥೆ ಕಾರ್ಯದರ್ಶಿ ಎಂ. ನಾಗರಾಜು, ಚಂದನ ವಾಹಿನಿ ನಿರೂಪಕ ದೊಡ್ಡಿಶಿವರಾಮ್, ನಿರ್ಮಾಪಕ ತಿಮ್ಮರಾಜು, ಕಲಾವಿದರಾದ ಕಾಂತರಾಜು, ಗಂಗಣ್ಣ, ಪವನ್‌ಕುಮಾರ್‌ನಾಯ್ಕ, ದಿನೇಶ್, ಮುರಗೇಶ್, ನವೀನ್‌ಕುಮಾರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts