More

    ಸಾಯಿಬಾಬಾ ಮಂದಿರಕ್ಕೆ ಜನಸಾಗರ: 15 ಸಾವಿರಕ್ಕೂ ಹೆಚ್ಚು ಮಂದಿಗೆ ಬ್ಯಾಲಹಳ್ಳಿ ಗೋವಿಂದಗೌಡರಿಂದ ಅನ್ನದಾಸೋಹ

    ಕೋಲಾರ: ಗುರುಪೂರ್ಣಿಮೆ ಅಂಗವಾಗಿ ನಗರದ ಸಾಯಿಬಾಬಾ ಮಂದಿರದಲ್ಲಿ ಬುಧವಾರ ವಿಶೇಷ ಪೂಜೆ, ಹೂವಿನ ಅಲಂಕಾರ, ವಾದ್ಯಗೋಷ್ಠಿ ಏರ್ಪಡಿಸಲಾಗಿದ್ದು, ಸಹಸ್ರಾರು ಮಂದಿ ಬಾಬಾ ದರ್ಶನ ಪಡೆದರು. ಎಲ್ಲರಿಗೂ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೋಳಿಗೆ ಸಹಿತ ಊಟದ ವ್ಯವಸ್ಥೆ ಮಾಡಿಸಿದ್ದರು.


    ಪ್ರತಿ ವರ್ಷದಂತೆ ಈ ವರ್ಷವೂ ಬಾಬಾ ಮಂದಿರದಲ್ಲಿ ಮುಂಜಾನೆಯಿಂದಲೇ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದುದು ಕಂಡು ಬಂತು. ಮುಂಜಾನೆಯ ಅಭಿಷೇಕ, ಗುರು ಭಜನೆಯೊಂದಿಗೆ ಪೂಜಾ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಸಾಯಿಬಾಬಾ ಮೂರ್ತಿ, ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.
    ಪೊಲೀಸರ ನೆರವು ಭಕ್ತರನ್ನು ನಿಯಂತ್ರಿಸಲು ಮಂದಿರದ ಮುಂಭಾಗ ಬ್ಯಾರಿಕೇಡ್​ಗಳನ್ನು ನಿರ್ಮಿಲಾಗಿತ್ತು. ಪೊಲೀಸರು ದೇವಾಲಯ ಮುಂಭಾಗದ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಸರದಿ ಸಾಲಲ್ಲಿ ಭಕ್ತರು ಸಂಚರಿಸಲು ನೆರವಾದರು. 50ಕ್ಕೂ ಹೆಚ್ಚು ಮಹಿಳಾ ಕಾರ್ಯಕರ್ತರು ಭಕ್ತಾಧಿಗಳಿಗೆ ವಿಭೂತಿ, ತೀರ್ಥ, ಪ್ರಸಾದ ಮತ್ತಿತರ ಸೇವೆಗಳಿಗೆ ಸಹಕರಿಸಿದರು.

    15ಸಾವಿರ ಜನಕ್ಕೆ ಊಟ:
    ಕರೊನಾ ಹಿನ್ನೆಲೆಯಲ್ಲಿ 2 ವರ್ಷದಿಂದ ಕಳೆಗುಂದಿದ್ದ ಗುರುಪೂರ್ಣಿಮೆ ಈ ಬಾರಿ ಅದ್ದೂರಿಯಾಗಿ ನಡೆಯಿತು. 2 ಸಾವಿರ ಮಂದಿ ಊಟಕ್ಕೆ ಕೂರಲು ಬೃಹತ್​ ಪೆಂಡಾಲ್​ ಹಾಕಿಸಿ ಭಕ್ತಾಧಿಗಳಿಗೆ ಹೋಳಿಗೆ, ಇಡ್ಲಿ, ಪಾಯಸ, ಬೂಂದಿ, ತರಕಾರಿ ಫಲಾವ್​, ಅನ್ನ ಸಾಂಬಾರು, ರಸಂ, ಮೊಸರು ಸೇರಿ ಹಬ್ಬದ ಸಿಹಿ ಊಟ ಬಡಿಸಲಾಯಿತು. 300ಕ್ಕೂ ಹೆಚ್ಚು ಮಂದಿ ಬಾಣಸಿಗರು ಭೋಜನ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದು, 15 ಸಾವಿರಕ್ಕೂ ಮೀರಿದ ಜನ ಊಟ ಸವಿದರು.

    ಶಾಸಕ, ಸಂಸದರಿಂದ ಬಾಬಾ ದರ್ಶನ: ಮಾಜಿ ಕೇಂದ್ರ ಸಚಿವ ಕೆ.ಎಚ್​.ಮುನಿಯಪ್ಪ, ಶಾಸಕಿ ರೂಪಕಲಾ, ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮತ್ತಿತರರು ಆಗಮಿಸಿ ಬಾಬಾ ದರ್ಶನ ಪಡೆದರು. ಊಟ, ಪೂಜಾ ಕಾರ್ಯಗಳ ಉಸ್ತುವಾರಿಯನ್ನು ಬ್ಯಾಲಹಳ್ಳಿ ಗೋವಿಂದಗೌಡರ ನೇತೃತ್ವದ ತಂಡದಲ್ಲಿ ನಾಗನಾಳ ಸೋಮಣ್ಣ, ಅಣ್ಣಿಹಳ್ಳಿ ನಾಗರಾಜ್​, ನೆನುಮನಹಳ್ಳಿ ಚಂದ್ರಶೇಖರ್​, ಎಸ್​ಎಫ್​ಸಿಎಸ್​ ಅಧ್ಯಕ್ಷರಾದ ಮುನಿರಾಜು, ಪ್ರಸನ್ನ, ಒಬಿಸಿ ಮುನಿಸ್ವಾಮಿ, ಮುಖಂಡರಾದ ಶಶಿಧರ್​, ನಾಗನಾಳ ಗೋಪಾಲಪ್ಪ, ವೆಂಕಟೇಗೌಡ, ಚಂಬೆ ರಾಜೇಶ್​, ನಗರಸಭೆ ಸದಸ್ಯ ರಾಕೇಶ್​, ರಾಮಚಂದ್ರ, ರವಿಶಂಕರ್​ ಗುಪ್ತಾ, ಬಣಕನಹಳ್ಳಿ ನಟರಾಜ್​, ಶ್ರೀರಾಮ ಕಾಫಿ ವರ್ಕ್ಸ್​ನ ಶ್ರೀನಾಥ್​, ಎಸ್​ಎಸ್​ಎಲ್​ವಿ ಸ್ಟೋರ್ಸ್​ನ ಶ್ರೀನಾಥ್​ ಮತ್ತಿತರರು ನಿರ್ವಹಿಸಿದರು.


    ಸಾಮರಸ್ಯಕ್ಕೆ ಬಾಬಾ ಆದರ್ಶ
    ಕೋಮು ಸಾಮರಸ್ಯಕ್ಕಾಗಿ ಸಾಯಿಬಾಬಾ ಆದರ್ಶವಾಗಿದ್ದು, ದೇಶದಲ್ಲಿ ದ್ವೇಷದ ಭಾವನೆ ಹೋಗಿ ಶಾಂತಿ ನೆಲಸಲಿ, ಸ್ನೇಹ, ಸಂಬಂಧಗಳು ಬಲಗೊಳ್ಳಲಿ ಎಂದು ಪ್ರಾರ್ಥಿಸಿ ಈ ಕಾರ್ಯಕ್ರಮ ಆಯೋಜಿಸಿರುವುದಾಗಿ ಗೋವಿಂದಗೌಡರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts