More

    ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ

    ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಚುನಾವಣಾ ಆಯೋಗ ನಿಗಾ ವಹಿಸಿದೆ. ಫೇಸ್‌ಬುಕ್, ವಾಟ್ಸ್ ಆ್ಯಪ್, ಟ್ವೀಟರ್, ಇನ್‌ಸ್ಟಾಗ್ರಾಂ, ಗೂಗಲ್, ಯೂಟ್ಯೂಬ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಹೀಗಾಗಿ ಗಡಿ, ಭಾಷೆ ಹೆಸರಿನಲ್ಲಿ ಮಾತಯಾಚನೆ ಮಾಡುವವರಲ್ಲಿ ಈಗ ನಡುಕ ಉಂಟಾಗಿದೆ.

    ಚುನಾವಣೆಯಲ್ಲಿ ಮತದಾರರನ್ನು ಸೆಳೆದುಕೊಳ್ಳಲು ಮತ್ತು ಆಮಿಷವೊಡ್ಡುವ ಉದ್ದೇಶದಿಂದ ಅಭ್ಯರ್ಥಿಗಳು ಮತ್ತು ಬೆಂಬಲಿತ ಕಾರ್ಯಕರ್ತರು ಬಳಕೆ ಮಾಡುವ ಸಾಮಾಜಿಕ ಜಾಲತಾಣಗಳ ಮೇಲೆ ವಿಶೇಷ ನಿಗಾ ಇಡಲಾಗುತ್ತಿದೆ. ಅಲ್ಲದೆ, ಚುನಾವಣೆಯಲ್ಲಿ ಅಕ್ರಮ ಚಟುವಟಿಕೆ ತಡೆಗಟ್ಟಲು 58 ವಾರ್ಡ್‌ಗಳಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಕೆಲವರಲ್ಲಿ ಆತಂಕ ಸೃಷ್ಟಿಸಿದೆ.

    ಈಗಾಗಲೇ ಆಯೋಗವು ಚುನಾವಣೆಯಲ್ಲಿ ಭಾಷೆ, ಜಾತಿ, ಧರ್ಮದ ಹೆಸರಿನಲ್ಲಿ ಕರಪತ್ರ ಮುದ್ರಿಸಿ ಪ್ರಚಾರ ನಡೆಸುವಂತಿಲ್ಲ ಎಂದು ತಿಳಿಸಿದೆ. ಅಲ್ಲದೆ ಧರ್ಮ, ಜಾತಿ ಕುರಿತು ಪ್ರಚೋದನಕಾರಿ ಹೇಳಿಕೆ, ಭಾಷೆ ಹೆಸರಿನಲ್ಲಿ ಮತಯಾಚನೆ ಮಾಡುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿ ಪ್ರಚಾರ ನಡೆಸಿದರೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಭ್ಯರ್ಥಿಗಳಿಗೆ ಮತ್ತು ಬೆಂಬಲಿತರಿಗೆ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೆಲ ಅಭ್ಯರ್ಥಿಗಳು ತಮ್ಮ ವಾರ್ಡ್‌ಗಳಲ್ಲಿ ವಾಟ್ಸ್ ಆ್ಯಪ್, ಟ್ವೀಟರ್, ಇನ್‌ಸ್ಟಾಗ್ರಾಂನಲ್ಲಿ ಗ್ರೂಪ್ ರಚಿಸಿ ಮತಯಾಚನೆ ಮಾಡುವ ಸಾಧ್ಯತೆ ಇರುವುದರಿಂದ ಆಯೋಗವು ಎಲ್ಲಡೆ ಕಣ್ಣಿಟ್ಟಿದೆ.

    ಅಕ್ರಮ ಚಟುವಟಿಕೆಗೆ ಅವಕಾಶ ಕೊಡಬೇಡಿ

    ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯನ್ನು ಪಾರದರ್ಶಕ, ಮುಕ್ತ, ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವುದು ನಮ್ಮ ಜವಾಬ್ದಾರಿ. ಹೀಗಾಗಿ ನ್ಯಾಯಯುತ ಚುನಾವಣೆ ನಡೆಸಲು ಎಲ್ಲರೂ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಡಾ. ಬಿ.ಬಸವರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಚುನಾವಣಾಧಿಕಾರಿ, ಪೊಲೀಸ್ ಆಯುಕ್ತರು, ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು, ಸಾಮಾನ್ಯ ವೀಕ್ಷಕರು ಮತ್ತು ಚುನಾವಣಾ ವಿವಿಧ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು ಹಾಗೂ ಮಾದರಿ ನೀತಿಸಂಹಿತೆ ನೋಡಲ್ ಅಧಿಕಾರಿಗಳು ಹೆಚ್ಚು ಜಾಗರೂಕತೆಯಿಂದ ಕಾರ್ಯ ನಿರ್ವಹಿಸಬೇಕು. ಮನೆ-ಮನೆಗೆ ತೆರಳಿ ಪ್ರಚಾರಕ್ಕೆ ಮಾತ್ರ ಅವಕಾಶ ನೀಡಿರುವುದರಿಂದ ಚುನಾವಣಾ ಪ್ರಚಾರದ ವೇಳೆ ನಡೆಯಬಹುದಾದ ಅಕ್ರಮಗಳ ಮೇಲೆ ನಿಗಾ ವಹಿಸಬೇಕು. ಹಣಬಲ, ತೋಳ್ಬಲಕ್ಕೆ ಆಸ್ಪದ ನೀಡಬಾರದು ಎಂದು ಸೂಚಿಸಿದರು.

    ಕಣದಲ್ಲಿ 385 ಅಭ್ಯರ್ಥಿಗಳು

    ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ 385 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ. 58 ವಾರ್ಡ್‌ಗಳಿಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪೈಕಿ 468 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದವು. ಈ ಪೈಕಿ ಬುಧವಾರ ನಾಲ್ವರು ನಾಮಪತ್ರ ಹಿಂದಕ್ಕೆ ಪಡೆದಿದ್ದರೆ, ಗುರುವಾರ 79 ಮಂದಿ ಕಣದಿಂದ ಹಿಂದೆ ಸರಿದಿದ್ದಾರೆ. ಬಿಜೆಪಿಯ 55, ಕಾಂಗ್ರೆಸ್‌ನ 45, ಆಮ್ ಆದ್ಮಿ ಪಕ್ಷದ 27, ಜೆಡಿಎಸ್‌ನ 11, ಎಐಎಂಐಎಂ ಪಕ್ಷದ 7, ಉತ್ತಮ ಪ್ರಜಾಕೀಯ ಪಕ್ಷ, ಎಸ್‌ಡಿಪಿಐ ಪಕ್ಷದ ತಲಾ ಒಬ್ಬ ಅಭ್ಯರ್ಥಿ ಕಣದಲ್ಲಿದ್ದಾರೆ. 238 ಅಭ್ಯರ್ಥಿಗಳು ಪಕ್ಷೇತರರಾಗಿ ಅಖಾಡಕ್ಕಿಳಿದಿದ್ದಾರೆ. 4ನೇ ವಾರ್ಡ್ ನಲ್ಲಿ 16 ಪಕ್ಷೇತರರು ಸೇರಿ 19 ಜನರು ಕಣದಲ್ಲಿದ್ದರೆ, ಉಳಿದ ವಾರ್ಡ್‌ಗಳಲ್ಲಿ ಇಬ್ಬರಿಗಿಂತ ಹೆಚ್ಚಿನ ಅಭ್ಯರ್ಥಿಗಳಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿರುವವರಿಗೆ ಶುಕ್ರವಾರ ಚಿಹ್ನೆ ಹಂಚಿಕೆ ಮಾಡಲಾಗುವುದು. ಸೆ.3ರಂದು ಮತದಾನ ನಡೆಯಲಿದೆ.

    ಮಹಾನಗರ ಪಾಲಿಕೆಯ 58 ವಾರ್ಡ್‌ಗಳಿಗೆ ಸೆಪ್ಟೆಂಬರ್ 3ರಂದು ಜರಗುತ್ತಿರುವ ಚುನಾವಣೆಗೆ 13 ಉಪ ಮತಗಟ್ಟೆಗಳು ಸೇರಿದಂತೆ ಒಟ್ಟು 415 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನಗರದ ಬಿ.ಕೆ.ಮಾಡೆಲ್ ಹೈಸ್ಕೂಲಿನಲ್ಲಿ ಮಸ್ಟರಿಂಗ್ ಹಾಗೂ ಡಿಮಸ್ಟ್ ರಿಂಗ್ ನಡೆಯಲಿದೆ. ಪ್ರತಿಯೊಂದು ಮತ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿ ಪ್ರಕಾರ ವೈದ್ಯಕೀಯ ತಂಡ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ತಡೆಗಟ್ಟಲು ಚೆಕ್ ಪೋಸ್ಟ್, ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ.
    | ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts