More

    ಸಾಮರಸ್ಯ ಮೂಡಿಸುವುದೇ ಶರನ್ನವರಾತ್ರಿಯ ಮೂಲ ಉದ್ದೇಶ

    ಬೇಲೂರು: ಅಶಾಂತಿ, ಅತೃಪ್ತಿಯಿಂದ ತಲ್ಲಣಿಸುತ್ತಿರುವ ಜನಸಮುದಾಯಕ್ಕೆ ಶಾಂತಿ, ಸಮೃದ್ಧಿಯ ಬದುಕಿನೊಂದಿಗೆ ಎಲ್ಲರಲ್ಲಿ ಸಾಮರಸ್ಯ, ಸೌಹಾರ್ದತೆ ಮೂಡಿಸುವುದೇ ಶರನ್ನವರಾತ್ರಿಯ ಮೂಲ ಉದ್ದೇಶವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

    ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ರಾತ್ರಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಹಿಂದುಗಳ ಪವಿತ್ರ ಹಬ್ಬಗಳಲ್ಲಿ ನಾಡಹಬ್ಬ ದಸರಾ ಒಂದಾಗಿದೆ. ಅಸುರ ಶಕ್ತಿಗಳ ವಿರುದ್ಧ ದೈವಿ ಶಕ್ತಿಗಳ ಹೋರಾಟದ ವಿಜಯವೇ ದಸರಾ ಹಬ್ಬದ ವೈಶಿಷ್ಟ್ಯತೆ. ವೀರಶೈವ ಸಿದ್ಧಾಂತವನ್ನು ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತವೆಂದು ಕರೆಯುತ್ತಾರೆ. ಶಕ್ತಿ ವಿಶಿಷ್ಟ ಜೀವನಿಗೂ ಶಕ್ತಿ ವಿಶಿಷ್ಟ ಶಿವನಿಗೂ ಇರುವ ಸಾಮರಸ್ಯವೇ ವಿಶಿಷ್ಟಾದ್ವೈತ ಎಂದು ನುಡಿದರು.

    ಗುರುಮನೆ ದಸರಾ ಪರಂಪರೆ:
    ಪೂರ್ವ ಕಾಲದಲ್ಲಿ ವಿಜಯನಗರದ ಅರಸರು, ನಂತರ ಮೈಸೂರು ಅರಸರು ನಾಡಿನ ಶ್ರೇಯಸ್ಸಿಗಾಗಿ ಸುಖ, ಶಾಂತಿ, ನೆಮ್ಮದಿಗಾಗಿ ದಸರಾ ನಾಡಹಬ್ಬ ಆಚರಿಸುತ್ತ ಬಂದಿದ್ದಾರೆ. ಇಂದಿಗೂ ಮೈಸೂರಿನಲ್ಲಿ ಸರ್ಕಾರ ದಸರಾ ನಾಡಹಬ್ಬವನ್ನು ವೈಭವದಿಂದ ನಡೆಸುತ್ತ ಬಂದಿರುವುದು ನಾಡಿನ ಆಧ್ಯಾತ್ಮಿಕ ಭಾವನೆಯನ್ನು ಎತ್ತಿ ತೋರಿಸುತ್ತದೆ. ಗುರುಮನೆ ದಸರಾ ಹಬ್ಬವನ್ನು ಶ್ರೀ ರಂಭಾಪುರಿ ಪೀಠ ಮೊದಲಿನಿಂದಲೂ ಆಚರಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
    ಶ್ರೀ ಶಿವಾನಂದ ಜಗದ್ಗುರುಗಳು ತಮ್ಮ ಕಾಲದಲ್ಲಿ ನಾಡಿನ ಬೇರೆ ಬೇರೆ ಭಾಗಗಳಲ್ಲಿ ಆಚರಿಸಿಕೊಂಡು ಬಂದು ಆಧ್ಯಾತ್ಮದ ಜ್ಞಾನ ವಿಕಾಸಕ್ಕೆ ಶ್ರಮಿಸಿದರು. ತದನಂತರ ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಶರನ್ನವರಾತ್ರಿ ದಸರಾ ನಾಡಹಬ್ಬಕ್ಕೆ ವಿಶೇಷ ಮೆರುಗು ತಂದುಕೊಟ್ಟರು. ಇದೇ ಹಾದಿಯಲ್ಲಿ ಶ್ರೀ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳು ಮುನ್ನಡೆದು ಶರನ್ನವರಾತ್ರಿ ಹಬ್ಬ ಆಚರಿಸಿಕೊಂಡು ಬಂದ ಇತಿಹಾಸ ಕಾಣುತ್ತೇವೆ ಎಂದು ವಿವರ ನೀಡಿದರು.

    ದಾಖಲೆಗಳನ್ನು ದಾಟಿದ ಬೇಲೂರು ದಸರಾ
    1992ರಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿ ಪ್ರಾರಂಭವಾದ ಪ್ರಸ್ತುತ ಜಗದ್ಗುರುಗಳ ದಸರಾ ಸಮಾರಂಭ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸಂಭ್ರಮದಿಂದ ನಡೆದುಕೊಂಡು ಬಂದಿದೆ. ಹೊಯ್ಸಳರು ಆಳಿದ, ಶಿಲ್ಪಕಲೆಗೆ ಪ್ರಸಿದ್ಧಿ ಆಗಿರುವ ಬೇಲೂರು ನಗರದಲ್ಲಿ ಇಂದು ಆರಂಭವಾಗಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಈ ಹಿಂದಿನ ಎಲ್ಲ ದಾಖಲೆಗಳನ್ನು ದಾಟಿ ಬಹಳ ವೈಭವದಿಂದ ನಡೆಯುತ್ತಿರುವುದು ಧರ್ಮಾಭಿಮಾನಿಗಳ ಶ್ರದ್ಧೆಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ರಂಭಾಪುರಿ ಪೀಠದಿಂದ ಧರ್ಮ ಸಂಸ್ಕೃತಿ ಉಳಿವು
    ಶರನ್ನವರಾತ್ರಿ ಧರ್ಮ ಸಮ್ಮೇಳನ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಬೇಲೂರು ನಗರದಲ್ಲಿ ಇಂದು ಪ್ರಾರಂಭವಾಗಿರುವ ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ನಾಡಹಬ್ಬ ಅತ್ಯಂತ ಸಂಭ್ರಮದಿಂದ ನಡೆಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಧರ್ಮ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸಿಕೊಂಡು ಬಂದ ಗೌರವ ಶ್ರೀ ರಂಭಾಪುರಿ ಧರ್ಮ ಪೀಠಕ್ಕೆ ಸಲ್ಲುತ್ತದೆ. ಶಿವನಷ್ಟೇ ಶಕ್ತಿಯನ್ನು ಆರಾಧಿಸುವುದು ಹಿಂದುಗಳ ಸಂಸ್ಕೃತಿಯಾಗಿದೆ ಎಂದರು.
    ಭೌತಿಕ ಬದುಕಿಗೆ ಸುಖ ಶಾಂತಿ ಪ್ರಾಪ್ತವಾಗಬೇಕಾದರೆ ಆಧ್ಯಾತ್ಮಿಕ ಭಾವನೆಗಳನ್ನು ಜಾಗೃತಗೊಳಿಸಬೇಕಾಗುತ್ತದೆ. ಜಾತಿ ಮತ ಪಂಥಗಳ ಗಡಿ ಮೀರಿ ಭಾವೈಕ್ಯತೆ ಮತ್ತು ಸಾಮರಸ್ಯಕ್ಕೆ ಸದಾ ಶ್ರಮಿಸುತ್ತಿರುವ ಶ್ರೀ ರಂಭಾಪುರಿ ಜಗದ್ಗುರುಗಳು ಜನಜಾಗೃತಿಗಾಗಿ ಇಂಥ ದಸರಾ ಸಮಾರಂಭ ಏರ್ಪಡಿಸುತ್ತಿದ್ದಾರೆ ಎಂದು ಕೊಂಡಾಡಿದರು.
    ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಶ್ರೀ ಜಗದ್ಗುರು ರಂಭಾಪುರಿ ಪೀಠದ ವೆಬ್‌ಸೈಟ್ ಅನಾವರಣ ಮಾಡಿದರು.


    ‘ಶ್ರೀ ಸೋಮೇಶ್ವರ ಸಂದೇಶಾಮೃತ’, ‘ಭಾವತರಂಗ’ ಬಿಡುಗಡೆ:

    ‘ಶ್ರೀ ಸೋಮೇಶ್ವರ ಸಂದೇಶಾಮೃತ’ ಕೃತಿ ಬಿಡುಗಡೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶರನ್ನವರಾತ್ರಿ ಸಂದರ್ಭದಲ್ಲಿ ಆದಿಶಕ್ತಿಯ ಪೂಜೆಗೆ ಅಗ್ರಸ್ಥಾನವನ್ನು ಹಿಂದು ಸಂಸ್ಕೃತಿಯಲ್ಲಿ ಕೊಡಲಾಗಿದೆ. ದುಷ್ಟಶಕ್ತಿಗಳ ದಮನ, ಸಾತ್ವಿಕ ಶಕ್ತಿಗಳ ಸಂವರ್ಧನೆಯೇ ದಸರಾ ನಾಡಹಬ್ಬದ ಮೂಲ ಉದ್ದೇಶವಾಗಿದೆ. ‘ರಂಭಾಪುರಿ ಬೆಳಗು’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿರುವ ಜಗದ್ಗುರುಗಳ ಸಂದೇಶಗಳನ್ನು ಒಟ್ಟುಗೂಡಿಸಿ ಹೊರತಂದಿರುವ ‘ಶ್ರೀ ಸೋಮೇಶ್ವರ ಸಂದೇಶಾಮೃತ’ ಕೃತಿ ಜ್ಞಾನ ವಿಕಾಸಕ್ಕೆ ಕೈಗನ್ನಡಿಯಾಗಿದೆ ಎಂದರು.


    ಬೇಲೂರು ಪುಷ್ಪಗಿರಿ ಸಂಸ್ಥಾನಮಠದ ಸೋಮಶೇಖರ ಶಿವಾಚಾರ್ಯರು ‘ಭಾವತರಂಗ’ ಕೃತಿ ಬಿಡುಗಡೆ ಮಾಡಿದರು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಗೌರವ ಅಧ್ಯಕ್ಷ ಎಡೆಯೂರು ಕ್ಷೇತ್ರದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ರೇಣುಕ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ತೆಂಡೇಕೆರೆ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ನಾಂದಿ ನುಡಿ ಸೇವೆ ಸಲ್ಲಿಸಿದರು. ವೇದಿಕೆಯಲ್ಲಿ ದೊಡ್ಡಗುಣಿ, ಹುಲಿಕೆರೆ, ಕಾರ್ಜುವಳ್ಳಿ, ಹಾರನಹಳ್ಳಿ, ಕೊಟ್ಟೂರು, ಮಳಲಿ, ಸಿದ್ಧರಬೆಟ್ಟ, ದನಗೂರು, ಶಿವನಸಮುದ್ರ, ರೌಡಕುಂದ ಮತ್ತು ಗಂವ್ಹಾರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.


    ಮುಖ್ಯ ಅತಿಥಿಗಳಾಗಿ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಶಾಸಕರಾದ ಬೇಲೂರಿನ ಕೆ.ಎಸ್.ಲಿಂಗೇಶ್, ಕಡೂರಿನ ಬೆಳ್ಳಿ ಪ್ರಕಾಶ ಮತ್ತು ತರೀಕೆರೆಯ ಡಿ.ವಿ. ಸುರೇಶ, ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಜಿಪಂ ಸಿಇಒ ಕಾಂತರಾಜ್ ಹಾಜರಿದ್ದರು.


    ಲಕ್ಷ್ಮೇಶ್ವರದ ಡಾ. ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ ನವರಾತ್ರಿಯಲ್ಲಿ ಶಕ್ತಿ ಆರಾಧನೆಯ ಮಹತ್ವ ಕುರಿತು ಉಪನ್ಯಾಸ ನೀಡಿದರು. ಕಡೇನಂದಿಹಳ್ಳಿ-ದುಗ್ಲಿ ಕ್ಷೇತ್ರ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಕುವೆಂಪು ವಿವಿ ಉಪ ಕುಲಪತಿ ಡಾ. ಬಿ.ಪಿ. ವೀರಭದ್ರಪ್ಪ, ಕೆ.ಆರ್.ರಾಜು ಶಿವಮೊಗ್ಗ, ಬೆಂಗಳೂರಿನ ಲೆಕ್ಕ ಪರಿಶೋಧಕ ಡಾ. ಗಿರೀಶ್ ಕೆ.ನಾಶಿ, ಶ್ರೀ ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರ, ರುದ್ರಯ್ಯ ಆಸಂದಿ, ಚಿಕ್ಕಮಗಳೂರು ಉಪ್ಪಳ್ಳಿ ಬಸವರಾಜ್ ಅವರಿಗೆ ಗುರು ರಕ್ಷೆ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.


    ದಸರಾ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೊರಟೀಕೆರೆ ಪ್ರಕಾಶ್ ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ ಕಾರ್ಯಕ್ರಮ ನಿರೂಪಿಸಿದರು. ಶಿವಮೊಗ್ಗದ ಜಿ.ಜಿ.ರಕ್ಷಿತಾ ಅವರಿಂದ ಭರತ ನಾಟ್ಯ, ಬಾಳೆಹೊನ್ನೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗದಗಿನ ಗಾನಭೂಷಣ ವೀರೇಶ ಕಿತ್ತೂರ ಅವರಿಂದ ಸಂಗೀತ ಕಾರ್ಯಕ್ರಮ ನಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts