More

    ಸಾಮರಸ್ಯ ಜೀವನ ಕನ್ನಡ ನಾಡಿನ ಶ್ರೇಷ್ಠತೆ


    ಶಾಸಕ ಬಿ.ಹರ್ಷವರ್ಧನ್ ಬಣ್ಣನೆ


    ನಂಜನಗೂಡು: ಗಡಿ ಹಾಗೂ ನೀರು ಹಂಚಿಕೆ ವಿಚಾರವಾಗಿ ನೆರೆ ರಾಜ್ಯಗಳೊಂದಿಗೆ ಸಮಸ್ಯೆ ಇದ್ದರೂ ಆ ರಾಜ್ಯದವರಿಗೆ ಆಶ್ರಯ ನೀಡಿ ಸಾಮರಸ್ಯ ಜೀವನ ನಡೆಸುವ ಉದಾರತೆ ಕನ್ನಡ ನಾಡಿನ ವೈಶಿಷ್ಟೃತೆ ಎಂದು ಶಾಸಕ ಬಿ.ಹರ್ಷವರ್ಧನ್ ಬಣ್ಣಿಸಿದರು.

    ನಗರದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಗಡಿ ವಿವಾದ, ನೀರು ಹಂಚಿಕೆ ವಿಚಾರದಲ್ಲಿ ನೆರೆ ರಾಜ್ಯಗಳೊಂದಿಗೆ ಕೆಲವು ತೊಡಕುಗಳಿದ್ದರೂ ಆ ರಾಜ್ಯದವರಿಗೆ ನಾವು ಆಶ್ರಯ ನೀಡಿದ್ದೇವೆ. ಪುಣ್ಯಕೋಟಿ ಕಥೆಯಿಂದ ಪ್ರೇರಣೆಗೊಂಡಿರುವ ರಾಜ್ಯ ನಮ್ಮದು. ಹೊರಗಿನವರನ್ನೂ ನಮ್ಮವರೆಂಬ ಭಾವದಿಂದ ಕಾಣುವ ಮೂಲಕ ನಾಡಿನ ಶ್ರೇಷ್ಠತೆಯನ್ನು ಎಲ್ಲೆಡೆ ಪಸರಿಸಿದ್ದೇವೆ ಎಂದರು.

    ಕನ್ನಡ ಭಾಷೆಯನ್ನು ಹೆಚ್ಚು ಬಳಸುವ ಮೂಲಕ ಮುಂದಿನ ಪೀಳಿಗೆಗೆ ಇದರ ಮಹತ್ವವನ್ನು ಅರ್ಥ ಮಾಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶ್ರೀಕಂಠೇಶ್ವರಸ್ವಾಮಿ ದೇಗುಲದ ಸಮೀಪದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಬಸವಣ್ಣನ ಪ್ರತಿಮೆ ನಿರ್ಮಾಣ ಮಾಡುವ ಜತೆಗೆ ಅವರ ಸಂದೇಶವನ್ನು ಸಾರುವ ಯೋಜನೆ ಕೈಗೆತ್ತುಕೊಳ್ಳಲಾಗಿದೆ ಎಂದು ತಿಳಿಸಿದರು.

    ಇದಕ್ಕೂ ಮುನ್ನ ರಾಷ್ಟ್ರಧ್ವಜ ಹಾಗೂ ನಾಡಧ್ವಜಾರೋಹಣವನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಎಂ.ಶಿವಮೂರ್ತಿ ನೆರವೇರಿಸಿದರು. ನಂತರ ಪೊಲೀಸ್ ಸಿಬ್ಬಂದಿ ಹಾಗೂ ವಿವಿಧ ಶಾಲಾ ಮಕ್ಕಳು ಪಥಸಂಚಲನ ನಡೆಸಿದರು. ಕನ್ನಡ ಉಪನ್ಯಾಸಕ ಇ.ಕೆ.ರಾಮಮೋಹನ್ ಮುಖ್ಯಭಾಷಣ ಮಾಡಿದರು. ವಿವಿಧ ಶಾಲೆಗಳ ಮಕ್ಕಳು ಕನ್ನಡ ನಾಡು ನುಡಿ, ನೆಲ, ಜಲ ಕುರಿತ ಹಾಡುಗಳಿಗೆ ಸಾಮೂಹಿಕ ನೃತ್ಯ ಪ್ರದರ್ಶನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ 35 ಸಾಧಕರನ್ನು ಗೌರವಿಸಲಾಯಿತು.

    ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ನಗರಸಭಾಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ, ಉಪಾಧ್ಯಕ್ಷೆ ನಾಗಮಣಿ, ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಡಿವೈಎಸ್ಪಿ ಗೋವಿಂದರಾಜು, ಕಸಾಪ ತಾಲೂಕು ಅಧ್ಯಕ್ಷೆ ಲತಾಮುದ್ದುಮೋಹನ್, ನಗರಸಭಾ ಪೌರಾಯುಕ್ತ ರಾಜಣ್ಣ, ಸದಸ್ಯರಾದ ಕಪಿಲೇಶ್, ಮಹದೇವಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts