More

    ಸಾಮರಸ್ಯ, ಜಾತ್ಯತೀತದ ರೂಪಕ ಕನಕದಾಸ

    ಮೈಸೂರು: ದಾಸಶ್ರೇಷ್ಠ ಕನಕದಾಸರು ಸಾಮರಸ್ಯ ಮತ್ತು ಜಾತ್ಯತೀತದ ರೂಪಕ ಎಂದು ಸಾಹಿತಿ ಮತ್ತು ಪ್ರಾಧ್ಯಾಪಕ ಚಿಕ್ಕಮಗಳೂರು ಗಣೇಶ್ ಬಣ್ಣಿಸಿದರು.


    ಜಿಲ್ಲಾಡಳಿತದ ವತಿಯಿಂದ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು. ಇಂದು ಜಾತಿ-ಧರ್ಮಗಳ ನಡುವೆ ಹಿಂಸೆ, ಸಂಘರ್ಷವನ್ನು ಹುಟ್ಟುಹಾಕಲಾಗುತ್ತಿದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಂತಹ ಸಂದರ್ಭದಲ್ಲಿ ಕನಕದಾಸರು ಸಾಮರಸ್ಯ, ಜಾತ್ಯತೀತ ರೂಪಕವಾಗಿ ಜನರ ಮುಂದೆ ನಿಂತಿದ್ದಾರೆ ಎಂದರು.


    ಈಗಿನಂತೆ ಕನಕದಾಸರು ಸಹ ಪ್ರಭುತ್ವ ಮತ್ತು ಧರ್ಮ ಸಂಘರ್ಷದ ಕಾಲಘಟ್ಟದಲ್ಲಿ ಉದಯಿಸಿದ ಚೇತನ. ಈಗಲೂ ಚರಿತ್ರೆ ಎಂದರೆ ಪುರಾಣ, ಕಥೆ ಹೇಳುತ್ತಾರೆ. ವರ್ತಮಾನದಲ್ಲಿ ಭೂತಕಾಲದ ಕತ್ತಲು ಲೋಕಕ್ಕೆ ಕರೆದೊಯ್ಯುಲಾಗುತ್ತಿದೆ. ಭೂತಕಾಲದ ಗಾಯಕ್ಕೆ ಪ್ರಸ್ತುತ ಕಾಲದಲ್ಲಿ ನೋವು, ಹಿಂಸೆ ಅನುಭವಿಸುವಂತಾಗಿದೆ. ಹಿಂದಿನ ನಕಾರಾತ್ಮಕ ಸಂಗತಿಗಳಲ್ಲೇ ಕಳೆದುಹೋಗುವ ಅಗತ್ಯ ಇಲ್ಲ. ಸ್ಫೂರ್ತಿ ಸೆಲೆಯಾದ ಕನಕದಾಸರು ವರ್ತಮಾನದಲ್ಲೇ ಬೆಳಕಾದರು. ಅವರ ದಾರಿಯಲ್ಲಿ ನಾವು ಸಾಗಬೇಕಿದೆ ಎಂದರು.


    ಕನಕದಾಸರು ಜನಸಂಸ್ಕೃತಿಯ ಪ್ರತೀಕ. ಖಾಸಗಿ ಆಗಿರುವ ಭಕ್ತಿಯನ್ನು ಸಮಾಜ ಬದಲಾವಣೆಯ ಅಸ್ತ್ರವಾಗಿ ಬಳಕೆ ಮಾಡಿದರು. ಜೀವಪ್ರೀತಿ, ನಿಸರ್ಗಪ್ರೇಮ, ಆತ್ಮಸಾಕ್ಷಿ, ನಂಬಿಕೆ ಮೇಲೆ ಅವರ ಚಿಂತನೆಗಳು ಅಡಗಿವೆ. ಅವರ ಅಂಕಿತನಾಮ ಆದಿಕೇಶ್ವರ ಎಂದರೆ ಸಾಕ್ಷಿಪ್ರಜ್ಞೆ ಮತ್ತು ಆತ್ಮಸಾಕ್ಷಿ. ಇದೇ ರೀತಿ ಬದುಕಿದರು ಮತ್ತು ನುಡಿದರು ಎಂದು ಹೇಳಿದರು.


    ಸಮಾಜದ ರೋಗಗಳಿಗೆ ಮದ್ದಾಗಿ ಭಕ್ತಿ ಮಾರ್ಗವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿದರು. ಭಕ್ತಿ ಮತ್ತು ಭಗವಂತನ ನಡುವೆ ದಲ್ಲಾಳಿಗಳು ಅಗತ್ಯವಿಲ್ಲ. ಅದೇ ರೀತಿ ಕನಕರು ಸಹ ಭಕ್ತಿ ಮತ್ತು ಸಾಂಸ್ಕೃತಿಕ ರಾಯಬಾರಿ. ಈಗಿನ ಸಮಾಜಕ್ಕೂ ಇಂತಹ ರಾಯಭಾರಿಗಳ ಅಗತ್ಯವಿದೆಯೇ ಹೊರತು, ದಲ್ಲಾಳಿಗಳು ಅಥವಾ ಮಧ್ಯವರ್ತಿಗಳಲ್ಲ ಎಂದು ವಿಶ್ಲೇಷಿಸಿದರು.


    ಒಂದು-ಎರಡು ಕೃತಿ ಬರೆದ ಪಂಡಿತರನ್ನು ಮಹಾನ್ ಸಾಹಿತಿ ಎಂದು ಬಿಂಬಿಸಲಾಯಿತು. ಆದರೆ, ಕನಕದಾಸರನ್ನು ನಿರ್ಲಕ್ಷೃ ಮಾಡಲಾಯಿತು. ಅವರಿಗೆ ಸಿಗಬೇಕಾದ ಗೌರವವನ್ನೂ ಕೊಡಲಿಲ್ಲ. ದಾಸ ಮತ್ತು ಭಕ್ತಿ ಸಾಹಿತ್ಯದಿಂದ ಅವರನ್ನು ದೂರ ಇಡಲಾಗಿತ್ತು. ಆದರೆ, 1970ರ ದಶಕದ ಬಳಿಕ ಕನಕ ಸಾಹಿತ್ಯ ಅಧ್ಯಯನ ಶುರುವಾಯಿತು. ಕನಕದಾಸರು ಶೋಷಿತ, ನಿರ್ಲಕ್ಷೃಕ್ಕೆ ಒಳಗಾದ ಸಮುದಾಯದ ಪ್ರತಿನಿಧಿ. ಬಸವ, ಕುವೆಂಪು ಅವರಂತೆ ಇವರನ್ನೂ ಎದೆಗೆ ಅಪ್ಪಿಕೊಳ್ಳಬೇಕು ಎಂದರು.


    ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಅನೇಕ ಸಂತರು, ಚಿಂತಕರು ಜಾತಿಯನ್ನು ತೊಡೆದುಹಾಕಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಆದರೆ, ಜಾತಿ ಗೋಡೆಗಳು ಇನ್ನಷ್ಟು ಗಟ್ಟಿಯಾಗುತ್ತಿವೆ. ಜನರಲ್ಲಿ ವೈಚಾರಿಕ ಚಿಂತನೆ ಮಾಯವಾಗಿದೆ. ತಪ್ಪು ಮತ್ತು ಅನ್ಯಾಯವನ್ನು ಪ್ರಶ್ನಿಸುವ ಕೆಲಸವನ್ನು ಬುದ್ಧ, ಕನಕದಾಸರು ಸೇರಿದಂತೆ ಬಹಳಷ್ಟು ಮಹನೀಯರು ಮಾಡಿದ್ದರು. ಈಗ ಈ ಪ್ರವೃತ್ತಿಯೇ ಇಲ್ಲವಾಗಿದೆ. ಸತ್ಯದ ಬದಲಿಗೆ ಸುಳ್ಳುಗಳನ್ನು ಬಿತ್ತಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.


    ವಿದ್ಯಾವಂತರಲ್ಲೇ ಹೆಚ್ಚಿನ ಮೌಢ್ಯ, ಮೂಢನಂಬಿಕೆ ತುಂಬಿದೆ. ಗ್ರಹಣ, ಅವಮಾಸ್ಯೆಯನ್ನು ಈಗಲೂ ಆಚರಣೆ ಮಾಡುತ್ತಿದ್ದಾರೆ. ಇದು ಜನರ ಆತ್ಮಶಕ್ತಿಯನ್ನು ಕುಗ್ಗಿಸುತ್ತಿದೆ. ದೇವರ ಹೆಸರಿನಲ್ಲಿ ಶೋಷಣೆ, ಮೋಸ ಮಾಡಲಾಗುತ್ತಿದೆ. ವೈಚಾರಿಕೆ ಚಿಂತನೆ ಇನ್ನೂ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಅಂಬೇಡ್ಕರ್ ಅವರು ಜನಪರವಾದ ಸಂವಿಧಾನವನ್ನು ಕೊಡದಿದ್ದರೆ ಏನು ಆಗುತ್ತಿತ್ತೋ ಎಂಬ ಭಯ ಈಗಲೂ ಕಾಡುತ್ತದೆ. ತಕ್ಕ ಮಟ್ಟಿಗೆ ಉಜ್ವಲ ಭವಿಷ್ಯ ರೂಪಿಸಲು ಸಂವಿಧಾನ ನೆರವಾಗಿದೆ. ಈಗಲೂ ಜನರು ಮೌಢ್ಯದ ಕತ್ತಲು ಲೋಕದಲ್ಲಿ ಕಳೆದುಹೋಗಬಾರದು. ಅದರಿಂದ ಹೊರಬಂದು ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.


    ವಿಧಾನಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮರಿತಿಬ್ಬೇಗೌಡ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಉಪಮೇಯರ್ ಜಿ.ರೂಪಾ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಇನ್ನಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts