More

    ಕನಕ ಜಯಂತಿಗೆ ಕೋಟೆನಾಡು ಸಿಂಗಾರ

    ಚಿತ್ರದುರ್ಗ: ಸಂತ ಶ್ರೇಷ್ಠ ಕನಕದಾಸ ಜಯಂತ್ಯುತ್ಸವವನ್ನು ನ. 30ರಂದು ಅದ್ದೂರಿಯಾಗಿ ಆಚರಿಸಲು ಕೋಟೆನಗರಿಯಲ್ಲಿ ಬುಧವಾರವೂ ಸಿದ್ಧತೆ ಭರದಿಂದ ಸಾಗಿತು. ಬಿ.ಡಿ.ರಸ್ತೆ ವಿದ್ಯುತ್ ದೀಪಾಲಂಕಾರ, ಹಳದಿ ಬಣ್ಣದ ಬಾವುಟ, ಬಂಟಿಂಗ್ಸ್‌ಗಳಿಂದ ಮದುವಣಗಿತ್ತಿಯಂತೆ ಸಿಂಗಾರಗೊಂಡು ಜಗಮಗಿಸುತ್ತಿದೆ.

    ವಿಶೇಷವಾಗಿ ಹೊಳಲ್ಕೆರೆ ರಸ್ತೆಯ ಕನಕ ವೃತ್ತ ಅಲಂಕೃತಗೊಂಡಿದ್ದು, ಅಲ್ಲಿಂದ ಮದಕರಿನಾಯಕ ವೃತ್ತದವರೆಗೂ ಮನೆಗಳು, ಅಂಗಡಿ-ಮುಂಗಟ್ಟುಗಳ ಮುಂಭಾಗ ವೈವಿಧ್ಯಮಯ ವಿದ್ಯುದ್ದೀಪಾಲಂಕಾರ ಆಕರ್ಷಿಸುತ್ತಿದೆ. ನೂರಾರು ಬಾವುಟಗಳೊಳಗೆ ಕನಕದಾಸರ ಭಾವಚಿತ್ರ ರಾರಾಜಿಸುತ್ತಿದೆ.

    ಜಿಲ್ಲಾ ಹಾಗೂ ತಾಲೂಕು ಕುರುಬರ ಸಂಘದಿಂದ ಜಯಂತಿಗೂ ಮುನ್ನ ಬುಧವಾರ ನಗರದಲ್ಲಿ ಆಯೋಜಿಸಿದ್ದ ಬೈಕ್ ರ್ಯಾಲಿಯಲ್ಲಿ ನೂರಾರು ಮಂದಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

    ಕನಕ ವೃತ್ತದ ಮುಂಭಾಗ ಕಾಂಗ್ರೆಸ್ ಮುಖಂಡ ಕೆ.ಸಿ.ನಾಗರಾಜ್, ಕೆಪಿಸಿಸಿ ಸದಸ್ಯ ಡಾ.ಬಿ.ತಿಪ್ಪೇಸ್ವಾಮಿ ಜೆ.ಜೆ.ಹಟ್ಟಿ ಕನಕದಾಸ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ರ್ಯಾಲಿಗೆ ಚಾಲನೆ ನೀಡಿದರು.

    ರ್ಯಾಲಿಯಲ್ಲಿ ಸಂಘದ ಪದಾಧಿಕಾರಿಗಳು, ಸಮುದಾಯದ ಮುಖಂಡರು, ಯುವಕರು ಬೈಕ್‌ಗಳ ಮುಂಭಾಗ ಕನಕದಾಸರ ಭಾವಚಿತ್ರವುಳ್ಳ ಹಳದಿ ವರ್ಣದ ಬಾವುಟಗಳನ್ನು ಕಟ್ಟಿಕೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು.

    ಕುರುಬರ ಜಿಲ್ಲಾ ಸಂಘದ ಅಧ್ಯಕ್ಷ ಎಸ್.ಶ್ರೀರಾಮ್, ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್, ಖಜಾಂಚಿ ಆರ್.ಮೃತ್ಯುಂಜಯ, ತಾಲೂಕು ಅಧ್ಯಕ್ಷ ಕೆ.ಓಂಕಾರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ, ಮಾಜಿ ಸದಸ್ಯ ಎಸ್‌ಬಿಎಲ್ ಮಲ್ಲಿಕಾರ್ಜುನ್, ಮಾಳೇಶ್, ಟಿ.ಆನಂದ್ ಸೇರಿ ಸಂಘದ ಪದಾಧಿಕಾರಿಗಳು, ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

    ಸ್ವಾಮೀಜಿ ಚಾಲನೆ: ವಿಶೇಷವಾಗಿ ಸಿಂಗಾರಗೊಳ್ಳುತ್ತಿರುವ ಕನಕ ವೃತ್ತದೊಳಗಿನ ಕನಕದಾಸರ ಪ್ರತಿಮೆ ವಿಶೇಷ ಅಲಂಕಾರಕ್ಕೆ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಚಾಲನೆ ನೀಡಿದರು. ಡಾ.ಬಿ.ತಿಪ್ಪೇಸ್ವಾಮಿ, ಎಚ್.ಮಂಜಪ್ಪ, ಎಸ್.ಶ್ರೀರಾಮ್, ಕೆ.ಓಂಕಾರಪ್ಪ, ಬಿ.ಟಿ.ಜಗದೀಶ್, ನಿಶಾನಿ ಶಂಕರ್, ಆರ್.ಮೃತ್ಯುಂಜಯ, ಓ.ಶಂಕರ್, ಮಲ್ಲಿಕಾರ್ಜುನ್ ಇತರರಿದ್ದರು.

    ಐವರಿಗೆ ಕನಕಶ್ರೀ ಪ್ರದಾನ: ನಾಯಕ, ಗೊಲ್ಲ, ಜೋಗಿ, ಮುಸ್ಲಿಂ, ಮಾದಿಗ ಸಮುದಾಯದ ಐವರಿಗೆ ಈ ಬಾರಿ ಕನಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಈ ಮೂಲಕ ಕುರುಬ ಸಮುದಾಯ ಮಾದರಿಯಾಗಿದೆ. ವಿವಿಧ ಕ್ಷೇತ್ರದ ಸಾಧಕರಾದ ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಡಿ.ದುರುಗೇಶಪ್ಪ, ಆರೋಗ್ಯ ಇಲಾಖೆಯ ಮಲ್ಲಣ್ಣ, ರಕ್ತದಾನಿ ಮಹ್ಮದ್ ನೂರುಲ್ಲಾ, ಪರಿಸರ ಪ್ರೇಮಿ ಸಿದ್ದರಾಜು ಜೋಗಿ, ನಗರಸಭೆ ಸದಸ್ಯ ದೀಪು ಪ್ರಶಸ್ತಿಗೆ ಭಾಜನರಾಗಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts