More

    ಸಾಗರದ ಯುವಕ ಸೇರಿ ಇಬ್ಬರಿಗೆ ಕರೊನಾ ಪಾಸಿಟಿವ್

    ಶಿವಮೊಗ್ಗ: ಜಿಲ್ಲೆಯಲ್ಲಿ ಕರೊನಾ ವೈರಸ್ ಹಾವಳಿ ಮುಂದುವರಿದಿದ್ದು ಭಾನುವಾರವೂ ಮತ್ತೆರಡು ಪ್ರಕರಣ ದೃಢಪಟ್ಟಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆ ಆಗಿದೆ. ನಗರದ ಸ್ವಾಮಿ ವಿವೇಕಾನಂದ ಬಡಾವಣೆ ‘ಎ’ ಬ್ಲಾಕ್​ನ 35 ವರ್ಷದ ವ್ಯಕ್ತಿ ಹಾಗೂ ಸಾಗರ ತಾಲೂಕಿನ 25 ವರ್ಷದ ಯುವಕನಿಗೆ ಸೋಂಕು ತಗುಲಿದೆ.

    ಮಹಾರಾಷ್ಟ್ರದಿಂದ ಬಂದು ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ಸ್ವಾಬ್ ಟೆಸ್ಟ್​ಗೆ ಒಳಗಾಗಿದ್ದ 25 ವರ್ಷದ ಯುವಕ ಸಾಗರ ತಾಲೂಕಿನ ಬಿಳಿಗಾರು ಗ್ರಾಮದ ಮನೆಯಲ್ಲಿ ಕ್ವಾರಂಟೈನ್​ನಲ್ಲಿದ್ದ. 35 ವರ್ಷದ ವ್ಯಕ್ತಿ ಹೊರಗಡೆ ಎಲ್ಲೂ ಪ್ರಯಾಣ ಮಾಡಲ್ಲಿದ ಕಾರಣ ಐಎಲ್​ಐ(ಇನ್​ಫ್ಲುಯೆಂಜಾ ಲೈಕ್ ಇಲ್​ನೆಸ್) ಲಕ್ಷಣ ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದು ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕ್ವಾರಟೈನ್​ಗೆ ಸ್ಥಳಾಂತರಿಸಲಾಗಿದೆ.

    ವಿವೇಕಾನಂದ ಬಡಾವಣೆ ಸೀಲ್​ಡೌನ್: ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ‘ಎ’ ಬ್ಲಾಕ್​ನ 6ನೇ ತಿರುವಿನಲ್ಲಿ 100 ಮೀಟರ್ ಸುತ್ತಮುತ್ತ ಕಂಟೇನ್ಮೆಂಟ್ ಜೋನ್ ಆಗಿ ಪರಿವರ್ತಿಸಲಾಯಿತು. ಶೀತ ಕೆಮ್ಮಿಗಾಗಿ ಕಳೆದ ಮೂರು ದಿನಗಳ ಹಿಂದೆ ಮೆಗ್ಗಾನ್​ಗೆ ತೆರಳಿದ್ದ ವ್ಯಕ್ತಿಗೆ ಸ್ವಾ್ಯಬ್ ಪರೀಕ್ಷೆ ಮಾಡಿಸಲಾಗಿತ್ತು. ಆದರೆ ಶನಿವಾರ ಭಾನುವಾರ ಬೆಳಗ್ಗೆ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೋರೂಂವೊಂದರಲ್ಲಿ ಕೆಲಸ ಮಾಡುತ್ತಿದ್ದ ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲಾಗಿದ್ದು ಅವರನ್ನು ಹೋಮ್ ಕ್ವಾರಂಟೈನ್​ಗೆ ಸೂಚಿಸಲಾಗುತ್ತಿದೆ. ಮಧ್ಯಾಹ್ನ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಆಟೋ ಮೂಲಕ ಕಂಟೇನ್ಮೆಂಟ್ ಜೋನ್ ಬಗ್ಗೆ ಪ್ರಚುರಪಡಿಸಲಾಯಿತು. ‘ಎ‘ ಬ್ಲಾಕ್​ನ ಕೆಲವೆಡೆ ಸ್ಯಾನಿಟೈಸ್ ಕೂಡ ಮಾಡಲಾಯಿತು. ಕಂಟೇನ್ಮೆಂಟ್ ಜೋನ್ ಮಾಡಲಾಗುತ್ತಿರುವ ಪ್ರದೇಶದಲ್ಲಿ ಮಹಾನಗರ ಪಾಲಿಕೆಯಿಂದಲೇ ಆಹಾರ ಮತ್ತು ದಿನಸಿ ವಿತರಿಸಲು ನಿರ್ಧರಿಸಲಾಗಿದೆ.

    ಮೊಬೈಲ್ ಸ್ವಿಚ್​ಆಫ್ ಮಾಡಿ ಆತಂಕ ಸೃಷ್ಟಿ: ಮೂರು ದಿನಗಳ ಹಿಂದೆ ಸ್ವಾ್ಯಬ್ ಪರೀಕ್ಷೆಗೆ ಸ್ಯಾಂಪಲ್ಸ್ ನೀಡಿ ಹೋಗಿದ್ದ ಆತನ ಮೊಬೈಲ್ ಸ್ವಿಚ್​ಆಫ್ ಆಗಿದ್ದು ಶನಿವಾರ ರಾತ್ರಿಯಿಂದ ಅಧಿಕಾರಿಗಳು ಹಾಗೂ ವೈದ್ಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಆದರೆ ಸ್ವಿಚ್​ಆಫ್ ಮಾಡಿಕೊಂಡು ಮನೆಯಲ್ಲಿಯೇ ಇದ್ದ ಕಾರಣ ಆತನನ್ನು ಪತ್ತೆ ಮಾಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಮೆಗ್ಗಾನ್​ಗೆ ಕರೆತಂದಿದ್ದಾರೆ.

    ಈ ನಡುವೆ ಕರೊನಾ ಸೋಂಕಿತ ಮೆಗ್ಗಾನ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ ಎಂಬ ಗಾಳಿ ಸುದ್ದಿ ಎಲ್ಲೆಡೆ ಹರಡಿತ್ತು. ಈ ಬಗ್ಗೆ ಡಿಸಿ ಕೆ.ವಿ.ಶಿವಕುಮಾರ್ ಅವರೇ ಸ್ಪಷ್ಟನೆ ನೀಡಿದ್ದು, ಆತ ಎಲ್ಲೂ ಪರಾರಿಯಾಗಿಲ್ಲ. ಮನೆಯಲ್ಲಿದ್ದ ಸೋಂಕಿತನನ್ನು ಪತ್ತೆ ಮಾಡಿ ಮೆಗ್ಗಾನ್ ಆಸ್ಪತ್ರೆಗೆ ಕರೆತಂದಿರುವುದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts