More

    ಸಹಾಯಕ ಕೃಷಿ ಅಧಿಕಾರಿ ಹುದ್ದೆ ಖಾಲಿ!

    ಬೆಳಗಾವಿ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆಯಾಗಿದ್ದು, ರೈತರು ಹರ್ಷಗೊಂಡಿದ್ದಾರೆ. ಆದರೆ, ರೈತರಿಗೆ ಅಗತ್ಯ ಮಾಹಿತಿ, ಸರ್ಕಾರಿ ಯೋಜನೆ ಮುಟ್ಟಿಸಬೇಕಾದ ಕೃಷಿ ಇಲಾಖೆಯು, ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ!.


    ಜಿಲ್ಲೆಯಲ್ಲಿ ಸಹಾಯಕ ಕೃಷಿ ಅಧಿಕಾರಿಗಳ 167 ಹುದ್ದೆಗಳು ಖಾಲಿ ಇದ್ದು, ಕೃಷಿ ಇಲಾಖೆ ಅಗತ್ಯ ಸಿಬ್ಬಂದಿ ಇಲ್ಲದೆ ಸೊರಗಿದೆ. ಜಿಲ್ಲೆಯಲ್ಲಿ ಒಟ್ಟು 214 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳಿವೆ. ಈ ಪೈಕಿ ಕೇವಲ 47 ಹುದ್ದೆಗಳು ಮಾತ್ರ ಭರ್ತಿ ಇವೆ. ಇದ್ದ ಅಧಿಕಾರಿಗಳೇ ಜಿಲ್ಲೆಯ 489 ಗ್ರಾಪಂಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕಾರ್ಯಭಾರದ ಮಧ್ಯೆಯೇ ಈ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ.

    ಅಲ್ಲದೆ ಜಿಲ್ಲೆಯಲ್ಲಿ 35 ರೈತ ಸಂಪರ್ಕ ಕೇಂದ್ರಗಳಲ್ಲಿನ 17 ಕೃಷಿ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಹೋಬಳಿಗಳಲ್ಲಿರುವ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಈ ಅಧಿಕಾರಿಗಳು ಸಕಾಲಕ್ಕೆ ರೈತರಿಗೆ ಅಗತ್ಯವಿರುವ ತಾಂತ್ರಿಕ ಮಾಹಿತಿ ನೀಡಬೇಕಾಗುತ್ತದೆ. ಆದರೆ, ಈ ಅಧಿಕಾರಿಗಳ ಹುದ್ದೆಗಳು ಖಾಲಿ ಇರುವುದರಿಂದ ರೈತರಿಗೆ ಸಕಾಲಕ್ಕೆ ಮಾಹಿತಿ ತಲುಪುತ್ತಿಲ್ಲ. ಬೆಳಗಾವಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ 2 ಹುದ್ದೆಗಳು ಖಾಲಿ ಇವೆ. ಇರುವ ಸಿಬ್ಬಂದಿಯೇ ಕಾರ್ಯಭಾರ ಹೊತ್ತಿದ್ದಾರೆ. ಇನ್ನು ಕೃಷಿಕರಿಗೆ ಮಾಹಿತಿ, ಗ್ರಾಮ ಸಭೆ, ಪ್ರಗತಿ ಪರಿಶೀಲನೆ ಸಭೆ, ಇಲಾಖೆ ಸಭೆ ಇತ್ಯಾದಿಗಳಿಗೆ ತೆರಳಿದರೆ ಕಚೇರಿಯೇ ಭಣಭಣ ಎನ್ನುತ್ತದೆ.

    ಮೂರು ವರ್ಷದಿಂದ ಕೊರತೆ: ರಾಜ್ಯದಲ್ಲಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಕೃಷಿ ಇಲಾಖೆಯಲ್ಲಿ ಕಳೆದ ಮೂರು ವರ್ಷದಿಂದ ಸಿಬ್ಬಂದಿ ಕೊರತೆ ಕಾಡುತ್ತಿದೆ. ಆದರೆ, ಸರ್ಕಾರ ಅಗತ್ಯ ಸಿಬ್ಬಂದಿ ನೀಡದೆ ಸತಾಯಿಸುತ್ತಿದೆ. ಮೂರು ವರ್ಷದಿಂದ ನಿವೃತ್ತಿ ಆಗಿ ಹೋದ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ಇಲಾಖೆ ಸಿಬ್ಬಂದಿ ಕೊರತೆ ಬಿಸಿ ಅನುಭವಿಸುತ್ತಿದೆ. ಸಿಬ್ಬಂದಿ ಕೊರತೆಯಿಂದಾಗಿ ರೈತರಿಗೂ ಸಮಸ್ಯೆಯಾಗಿದೆ.

    ಇದೀಗ ಮುಂಗಾರು ಆರಂಭಗೊಂಡಿದ್ದರಿಂದ ಕೃಷಿಗೆ ಸಂಬಂಧಪಟ್ಟ ಸಲಹೆ, ಸೂಚನೆ, ಸರ್ಕಾರದ ಯೋಜನೆ ತಿಳಿಸಲು ರೈತರ ಮನೆ ಬಾಗಿಲಿಗೆ ಹೋಗಬೇಕೆನ್ನುವ ನಿಯಮವಿದೆ. ಆದರೆ, ರೈತರೇ ಕಚೇರಿ ಬಾಗಿಲಿಗೆ ಬಂದರೂ ಯೋಜನೆ ಬಗ್ಗೆ ಸಮರ್ಪಕವಾಗಿ ಮಾಹಿತಿ ನೀಡುವವರೇ ಇಲ್ಲವಾಗಿದೆ. ಕೂಡಲೇ ಸರ್ಕಾರ ಖಾಲಿ ಹುದ್ದೆಗಳಿಗೆ ಸಿಬ್ಬಂದಿ ನೇಮಿಸುವ ಮೂಲಕ ರೈತರ ಕಷ್ಟಗಳನ್ನು ನಿವಾರಿಸಬೇಕು ಎಂಬುವುದು ರೈತರ ಆಗ್ರಹವಾಗಿದೆ.

    ರೈತರಿಗೆ ಹಿನ್ನಡೆ: ಸಹಾಯಕ ಕೃಷಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ಹಾಗೂ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಹಳ್ಳಿಗಳಲ್ಲಿ ಸಂಚರಿಸಿ ರೈತರಿಗೆ ಅಗತ್ಯ ಸಹಾಯ ಮಾಡುತ್ತಾರೆ. ಬೀಜ&ಗೊಬ್ಬರ ವಿತರಣೆ, ಫಲಾನುಭವಿಗಳನ್ನು ಗುರುತಿಸುವುದು, ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು, ರೈತರಿಗೆ ತಾಂತ್ರಿಕ ತರಬೇತಿ, ಸಲಹೆ, ಸೂಚನೆ ನೀಡುವುದು. ಪ್ರಯೋಗಗಳು, ಬೆಳೆ ಸಮೀಕ್ಷೆ, ಬೆಳೆ ವಿಮೆ ಬಗ್ಗೆ ಪ್ರಚಾರ ಹೀಗೆ ಗ್ರಾಮೀಣ ಭಾಗದಲ್ಲಿ ಹತ್ತು ಹಲವು ಕಾರ್ಯಗಳ ಹೊಣೆಯನ್ನು ಸಹಾಯಕ ಕೃಷಿ ಅಧಿಕಾರಿಗಳು ನಿರ್ವಹಿಸುತ್ತಿರುತ್ತಾರೆ. ಆದರೆ, ಜಿಲ್ಲೆಯಲ್ಲಿ ಈ ಹುದ್ದೆಗಳು ಖಾಲಿ ಇರುವುದರಿಂದ ರೈತರಿಗೆ ಹಿನ್ನೆಡೆಯಾಗಿದೆ.

    | ಜಗದೀಶ ಹೊಂಬಳಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts