More

    ಸಹಕಾರ ಸಚಿವಾಲಯ ಸ್ಥಾಪನೆ ಶ್ಲಾಘನೀಯ – ಜಗದೀಶ ಕವಟಗಿಮಠ

    ಬೆಳಗಾವಿ: ದೇಶದಲ್ಲಿ ಸಹಕಾರಿ ಚಳವಳಿ ಗಟ್ಟಿಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸದಾಗಿ ಸಹಕಾರ ಸಚಿವಾಲಯ ( ಸಹಕಾರ ಸೇ ಸಮೃದ್ಧಿ) ಸ್ಥಾಪನೆ ಮಾಡಿದ್ದಾರೆ. ಅವರಿಗೆ ರಾಷ್ಟ್ರೀಯ ಹಾಗೂ ರಾಜ್ಯ ಸಹಕಾರ ಭಾರತಿ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ಉಪಾಧ್ಯಕ್ಷ ಜಗದೀಶ ಕವಟಗಿಮಠ ಹೇಳಿದರು.

    ನಗರದ ವಾರ್ತಾ ಭವನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಹಕಾರಿ ಕ್ಷೇತ್ರ ಬೃಹದಾಕಾರವಾಗಿ ಬೆಳೆದು, ಅನೇಕ ಸಾಧನೆ ಮಾಡಿದ್ದರೂ ಈ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಲು ಕೇಂದ್ರದಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಸಹಕಾರಿ ಸಚಿವಾಲಯ ಸ್ಥಾಪನೆಗಾಗಿ ರಾಷ್ಟ್ರದ ಸಹಕಾರ ಭಾರತಿ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಜಂಟಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಪ್ರಧಾನಿ ಮನವಿಗೆ ಸ್ಪಂದಿಸಿ ಸಚಿವಾಲಯ ಸ್ಥಾಪನೆ ಮಾಡಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.

    ದೇಶದ ಸಹಕಾರಿ ಚಳವಳಿಗೆ 117 ವರ್ಷಗಳ ಇತಿಹಾಸ ಹೊಂದಿದ್ದು, ಸದ್ಯ 8.5 ಲಕ್ಷ ವಿವಿಧ ರೀತಿಯ ಸಹಕಾರ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ಚಳವಳಿಯಲ್ಲಿ 30 ಕೋಟಿ ಗಿಂತ ಹೆಚ್ಚು ಜನರು ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವುಗಳಲ್ಲಿ 1255 ರಾಜ್ಯ ಸಹಕಾರಿ ಸಂಸ್ಥೆಗಳು, 1560 ಪಟ್ಟಣ ಸಹಕಾರಿ ಬ್ಯಾಂಕ್, 91000 ಕೃಷಿ ಪತ್ತಿನ ಸಹಕಾರ ಸಂಘ ಒಳಗೊಂಡಿದೆ ಎಂದರು.

    ದೇಶದಲ್ಲಿ ಸಹಕಾರಿ ಕ್ಷೇತ್ರ ಜನರ ಜೀವನ ಪದ್ಧತಿಯಾಗಿ ಬೆಳೆದಿದ್ದು, ಆರ್ಥಿಕ ವ್ಯವಸ್ಥೆಯಲ್ಲಿ ಶೇ. 40ರಷ್ಟು ಪಾಲನ್ನು ಸಹಕಾರಿ ಕ್ಷೇತ್ರದ ಮೂಲಕವೇ ನಿರ್ವಹಿಸಲಾಗುತ್ತಿದೆ. 3,83,285 ಮಿಲಿಯನ್‌ನಷ್ಟು ಷೇರು ಬಂಡವಾಳ ಸಹಕಾರಿ ಕ್ಷೇತ್ರ ಹೊಂದಿದೆ. ದೇಶದಲ್ಲಿ 6.30 ಲಕ್ಷ ಗ್ರಾಮಗಳಲ್ಲಿ ಸಹಕಾರಿ ಕ್ಷೇತ್ರ ವ್ಯಾಪಿಸಿದೆ. ಇದೀಗ ಸಹಕಾರಿ ಸಮಸ್ಯೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪರಿಹರಿಸಲು ಕೇಂದ್ರ ಸಹಕಾರಿ ಸಚಿವಾಲಯ ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕೇಂದ್ರ ಸರ್ಕಾರವು ಪ್ರತ್ಯೇಕವಾಗಿ ಸ್ಥಾಪಿಸಿರುವ ಸಹಕಾರಿ ಸಚಿವಾಲಯವು ಸಹಕಾರಿ ಆಂದೋಲನವನ್ನು ಬಲಪಡಿಸಲು ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿ ಚೌಕಟ್ಟು ಒದಗಿಸುತ್ತದೆ. ಈ ಸಚಿವಾಲಯವು ಸಹಕಾರಿ ಆರ್ಥಿಕ ಲಾಭಗೊಳಿಸುವ ಪ್ರಕ್ರಿಯೆ ಸುಗಮಗೊಳಿಸಲು ಮತ್ತು ರಾಜ್ಯ ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೊಳಿಸಲು ಕೆಲಸ ಮಾಡಲಿದೆ ಎಂದು ಹೇಳಿದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ಪ್ರಾಂತೀಯ ವ್ಯವಸ್ಥಾಪಕ ಶ್ರೀಕಾಂತ ಬರುವೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts