More

    ಸಹಕಾರಿ ರಂಗದಲ್ಲೂ ರಾಜಕೀಯ ಸಲ್ಲದು

    ಹುಕ್ಕೇರಿ: ಸಹಕಾರಿ ಕ್ಷೇತ್ರದ ಅಳಿವು-ಉಳಿವು ಯುವ ಜನಾಂಗದ ಕೈಯಲ್ಲಿದ್ದು, ಯುವಕರು ಸಹಕಾರಿ ಕ್ಷೇತ್ರದಿಂದ ವಿಮುಖರಾಗುತ್ತಿರುವುದು ಖೇದಕರ ಸಂಗತಿ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಬೇಸರ ವ್ಯಕ್ತಪಡಿಸಿದರು.
    ತಾಲೂಕಿನ ಮದಿಹಳ್ಳಿ ಗ್ರಾಮದ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘದ 2024-25 ರಿಂದ 2026-27ರ ಸಾಲಿನ ಪತ್ತು (ಸಾಲ) ವಿತರಣೆ ಕಾರ್ಯಕ್ರಮದಲ್ಲಿ ಬುಧವಾರ ಸತ್ಕಾರ ಸ್ವೀಕರಿಸಿ ಮಾತನಾಡಿದರು.

    ಸಹಕಾರಿ ಕ್ಷೇತ್ರದ ಹಿರಿಯರ ನಂತರ ಈ ಕ್ಷೇತ್ರದ ಉಳಿವು ಹೇಗೆ ಎಂಬ ಜಿಜ್ಞಾಸೆ ಕಾಡುತ್ತಿದೆ. ಹಿರಿಯರ ಮಾರ್ಗದರ್ಶನದಲ್ಲಿ ಯುವ ಜನಾಂಗ ಸಹಕಾರಿ ಕ್ಷೇತ್ರವನ್ನು ಉಳಿಸಿ ಬೆಳೆಸಬೇಕೆಂದರು. ಸ್ವಾರ್ಥ ರಾಜಕಾರಣದಿಂದ ಬೇಸತ್ತ ಯುವಕರು ಸಹಕಾರಿ ಮತ್ತು ರಾಜಕಾರಣ ಕಂಡರೆ ಅಸಹ್ಯ ಪಟ್ಟುಕೊಳ್ಳುತ್ತಿದ್ದಾರೆ. ಸಹಕಾರಿ ಕ್ಷೇತ್ರವನ್ನು ರಾಜಕೀಯ ರಹಿತವಾಗಿ ಬೆಳೆಸಬೇಕು ಎಂದರು.

    12 ವರ್ಷಗಳ ಹಿಂದೆ ಪ್ರಾರಂಭಗೊಂಡ ಮದಿಹಳ್ಳಿ ಪಿಕೆಪಿಎಸ್‌ನ 580 ಸದಸ್ಯರಿಗೆ 4 ಕೋಟಿ 76 ಲಕ್ಷ 80 ಸಾವಿರ ರೂ. ಸಾಲ ಮಂಜೂರಾಗಿದೆ. 2017 ಮತ್ತು 2018ರಲ್ಲಿ ಸಂಘದ 335 ರೈತ ಸದಸ್ಯರಿಗೆ 1 ಕೋಟಿ 35 ಲಕ್ಷ 67 ಸಾವಿರ ರೂ. ಸಾಲಮನ್ನಾ ಭಾಗ್ಯ ದೊರಕಿದೆ ಎಂದರು. 3 ಕೋಟಿ 94 ಲಕ್ಷ ರೂ.ದುಡಿಯುವ ಬಂಡವಾಳ ಹೊಂದಿರುವ ಸಂಘ 2023ರ ಮಾರ್ಚ್ ಅಂತ್ಯಕ್ಕೆ 4 ಲಕ್ಷ 68 ಸಾವಿರ ರೂ. ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

    ಸಂಘದ ಅಧ್ಯಕ್ಷ, ವಕೀಲ ಕೆ.ಎಲ್.ಜಿನರಾಳಿ ಮಾತನಾಡಿ, ಕತ್ತಿ ಸಹೋದರರ ನಿಸ್ವಾರ್ಥ ಮತ್ತು ಪ್ರಾಮಾಣಿಕತೆಯಿಂದ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಉಳಿದು ಬೆಳೆದಿದೆ. 35 ವರ್ಷಗಳ ಹಿಂದೆ ಮುಚ್ಚುವ ಹಂತದಲ್ಲಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ರಮೇಶ ಕತ್ತಿ ಅವರು ಅಧ್ಯಕ್ಷರಾದ ಬಳಿಕ ರಾಜ್ಯದಲ್ಲಿ ಮೊದಲ ಹಾಗೂ ದೇಶದಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಇದರಿಂದ ರಮೇಶ ಕತ್ತಿ ಅವರನ್ನು ಸಹಕಾರಿ ಭೀಷ್ಮ ಎನ್ನುತ್ತಾರೆ ಎಂದರು.

    ರಮೇಶ ಕತ್ತಿ ಮತ್ತು ವಕೀಲರ ಸಂಘದ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು. ಹಿರಾ ಶುಗರ್ಸ್‌ ನಿರ್ದೇಶಕರಾದ ಬಸವರಾಜ ಮರಡಿ, ಸುರೇಶ ದೊಡ್ಡಲಿಂಗನವರ, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಜಿನರಾಳಿ, ಹಿರಿಯರಾದ ಮಹಾದೇವ ಜಿನರಾಳಿ, ಸಂಘದ ಉಪಾಧ್ಯಕ್ಷ ಭೀಮಸೇನ ಬಾಗಿ, ನಿರ್ದೇಶಕರಾದ ಕೆ.ಬಿ.ಕುರಬೇಟ, ಶಿವಾಜಿ ಮುತಗಿ, ಸುಲ್ತಾನಸಾಬ ಸನದಿ, ಸದಾನಂದ ಬಾಗಿ, ಮಾರುತಿ ಸನದಿ, ವಿಠ್ಠಲ ಗಾಡಿವಡ್ಡರ, ಬ್ಯಾಂಕ್ ನಿರೀಕ್ಷಕ ನಾಗರಾಜ ಕರಗುಪ್ಪಿ ಇತರರಿದ್ದರು. ವಕೀಲ ಭೀಮಸೇನ ಬಾಗಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ಎಂ.ಬಿ.ಮಾನಗಾವಿ ನಿರೂಪಿಸಿದರು. ಸಚಿನ್ ನೆಳ್ಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts