More

    ಸಹಕಾರಿ ಸಂಸ್ಥೆಗಳಲ್ಲಿ ಆರ್ಥಿಕ ಶಿಸ್ತು ಮುಖ್ಯ

    ಸಾಗರ: ನಂಬಿಕೆ ಮೇಲೆ ಆರ್ಥಿಕ ವಹಿವಾಟು ನಡೆಸುವ ಸಹಕಾರಿ ಸಂಸ್ಥೆಗಳಲ್ಲಿ ಶಿಸ್ತು ಬಹಳ ಮುಖ್ಯ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.

    ನಗರದ ಕಾಗೋಡು ತಿಮ್ಮಪ್ಪ ಬಡಾವಣೆಯಲ್ಲಿ ಶುಕ್ರವಾರ ವರದಾ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿ, ವಿದ್ಯಾವಂತರ ಕೈನಲ್ಲಿ ಹಣಕಾಸು ಸಂಸ್ಥೆ ಸಿಕ್ಕರೆ ಅದು ಉನ್ನತ ಮಟ್ಟಕ್ಕೆ ಬೆಳೆಯುತ್ತದೆ ಎಂಬುದಕ್ಕೆ ವರದಾ ಪತ್ತಿನ ಸಹಕಾರ ಸಂಘವೇ ನಿದರ್ಶನ ಎಂದರು.

    ಇಂದು ಸಹಕಾರ ಸಂಸ್ಥೆ ಕಟ್ಟುವುದು ಸವಾಲಿನ ಕೆಲಸ. ಕಾನೂನಿನ ಕಟ್ಟುಪಾಡು ಜತೆಗೆ ಆರ್ಥಿಕ ವಹಿವಾಟುಗಳ ಬಗ್ಗೆ ಗಮನಹರಿಸುವ ತುರ್ತು ಸಂದರ್ಭದಲ್ಲಿ ನಾವಿದ್ದೇವೆ. 25 ವರ್ಷಗಳ ಹಿಂದೆ ಸಮಾನ ಮನಸ್ಕರು ಸೇರಿ ಕಟ್ಟಿರುವ ಸಹಕಾರಿ ಸಂಸ್ಥೆ ಇದೀಗ ಕೋಟ್ಯಂತರ ರೂ. ವಹಿವಾಟು ನಡೆಸುತ್ತಿರುವುದರ ಹಿಂದೆ ಆಡಳಿತ ಮಂಡಳಿ, ಷೇರುದಾರರ ಶ್ರಮ ಮತ್ತು ನಿಸ್ವಾರ್ಥ ಸೇವೆ ಇದೆ ಎಂದು ಹೇಳಿದರು.

    ಸಂಸ್ಥೆಯ ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಡಾ. ರಾಮಪ್ಪ, ಸಹಕಾರಿ ಸಂಸ್ಥೆಗಳು ಶ್ರೀಮಂತರಿಗಿಂತ ಬಡವರ ಬಗ್ಗೆ ಗಮನಹರಿಸಬೇಕು. ಶ್ರೀಮಂತರಿಗೆ ಹಣ ನೀಡಿ ಅವರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವ ಬದಲು ಬಡವರಿಗೆ ಸಾಲಸೌಲಭ್ಯ ನೀಡಿ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡಬೇಕೆಂದರು.

    ಸಂಸ್ಥೆಯ ಅಧ್ಯಕ್ಷ ಕೆ.ಈಶ್ವರ ನಾಯ್್ಕ ಮಾತನಾಡಿ, 1995ರಲ್ಲಿ ಕಾಗೋಡು ಅಣ್ಣಪ್ಪ ಅವರು ಮುಖ್ಯಪ್ರವರ್ತಕರಾಗಿ ವರದಾಪತ್ತಿನ ಸಹಕಾರ ಸಂಘವನ್ನು ಆರಂಭಿಸಿದರು. ಇದೀಗ ಸಂಸ್ಥೆಯಲ್ಲಿ 1522 ಜನ ಷೇರುದಾರರಿದ್ದು 2.50 ಕೋಟಿ ರೂ. ಠೇವಣಿ ಇರಿಸಲಾಗಿದೆ. ಜತೆಗೆ 2.25 ಕೋಟಿ ರೂ. ಸಾಲ ನೀಡಲಾಗಿದೆ ಎಂದರು.

    ನಿರ್ದೇಶಕ ಮಂಡಳಿಯ ಕೆ.ಹೊಳೆಯಪ್ಪ, ಕೆ.ಡಿ.ವೀರರಾಜ ಜೈನ್, ಬಿ.ಎಂ.ಮಂಜಪ್ಪ, ಎಚ್.ಚಂದ್ರಶೇಖರ್, ಎಂ.ಹುಚ್ಚಪ್ಪ, ಗಣಾಧೀಶ್, ಕಾರ್ಯದರ್ಶಿ ಕೆ.ಶಿವಾನಂದ, ರಾಧಾ ನಿಂಗಪ್ಪ, ಶಶಿಕಲಾ ಕನ್ನಪ್ಪ, ಕೊಲ್ಲೂರಯ್ಯ, ಟಿ.ರಘುಪತಿ, ಬಿ.ನಾಗರಾಜ್, ಪರಶುರಾಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts