More

    ಸವಿತಾ ಸಮಾಜಕ್ಕೆ 1 ಎಕರೆ ಭೂಮಿ ಮಂಜೂರು: ಸವಿತಾ ಮಹರ್ಷಿ ಜಯಂತ್ಯುತ್ಸವದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಘೋಷಣೆ

    ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
    ವೃತ್ತಿಯ ಮೂಲಕ ಸಮಾಜದ ಪ್ರೀತಿಗೆ ಪಾತ್ರವಾಗಿರುವ ಸವಿತಾ ಸಮಾಜದ ಸಮುದಾಯ ಭವನ ನಿರ್ಮಾಣಕ್ಕಾಗಿ ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ಎಕರೆ ಭೂಮಿ ಗುರುತಿಸಿ, 15 ದಿನಗಳೊಳಗಾಗಿ ಆದೇಶಪತ್ರ ನೀಡುವಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಜಿಲ್ಲಾಧಿಕಾರಿಗೆ ಸೂಚಿಸಿದರು.
    ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತ್ಯುತ್ಸವದಲ್ಲಿ ಮಾತನಾಡಿದರು, ಅನಾದಿ ಕಾಲದಿಂದಲೂ ಶುಭ ಕಾರ್ಯಗಳಿಗೆ ಮಂಗಳವಾದ್ಯ ನುಡಿಸುವ ಮೂಲಕ ದೇವರ ಪ್ರೀತಿಗೂ ಈ ಸಮುದಾಯ ಪಾತ್ರವಾಗಿದೆ. ಇಂತಹ ಸಮುದಾಯದ ಪರವಾಗಿ ಸರ್ಕಾರ ಇದೆ ಎಂದು ಹೇಳಿದರು.
    ಸವಿತಾ ಬಂಧು, ನಾವೆಲ್ಲ ಒಂದು ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಆರಂಭಿಸಿದ ಸಚಿವರು, ಈ ಸಮುದಾಯದಲ್ಲಿ 27 ಉಪಜಾತಿಗಳಿವೆ. ಕ್ಷೌರಿಕ ವೃತ್ತಿ ಮಾಡುವ ಮತ್ತು ದೇವರಿಗೆ ಆರಾಧನೆ ಸೇರಿ ಶುಭ ಸಮಾರಂಭಗಳಲ್ಲಿ ಮಂಗಳವಾದ್ಯ ಇಲ್ಲದೆ ಯಾವುದೇ ಕಾರ್ಯಕ್ರಮ ನಡೆಯಲು ಸಾಧ್ಯವಿಲ್ಲ. ಇಂತಹ ಸಮುದಾಯಕ್ಕೆ ಅಗತ್ಯ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ ಎಂದರು.

    ಅಭಿವೃದ್ಧಿಗಾಗಿ ನಿಗಮ ಸ್ಥಾಪನೆ: ಸಮುದಾಯಕ್ಕೆ ವಿಶೇಷ ಸೌಲಭ್ಯ ನೀಡುವ ಉದ್ಧೇಶದಿಂದ ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಆರಂಭದಲ್ಲಿ ಕೇವಲ ಎರಡು ಕೋಟಿ ರೂ.ಮಾತ್ರ ಈ ನಿಗಮಕ್ಕೆ ನೀಡಲಾಗುತ್ತಿತ್ತು. ಆದರೆ ಈಗ 10 ಕೋಟಿ ರೂ.ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
    ಸಾಮವೇದ ರಚಿಸಿ ಮಹರ್ಷಿ:
    ನಾಲ್ಕು ವೇದಗಳಲ್ಲಿ ಸಂಗೀತಕ್ಕಾಗಿಯೇ ಇರುವ ವೇದ ಸಾಮವೇದ. ಇದರಲ್ಲಿ 1,540 ಶ್ಲೋಕಗಳಿವೆ, ಅರ್ಥಗರ್ಭಿತವಾಗಿ ಸಾಮವೇದರಚಿಸಿದವರು ಸವಿತಾ ಮಹರ್ಷಿಗಳು. ಸಾವಿರಾರು ವರ್ಷದಿಂದ ಈ ಸಮುದಾಯ ಸಮಾಜದ ಪ್ರೀತಿ ಮತ್ತು ವಿಶ್ವಾಸ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಸಚಿವರು ಹೇಳಿದರು.

    ಅದ್ದೂರಿ ಕಾರ್ಯಕ್ರಮ ಮಾಡುತ್ತಿದ್ದೆವು: ರಾಜ್ಯಮಟ್ಟದ ಸವಿತಾ ಮಹರ್ಷಿ ಜಯಂತಿ ಆಚರಣೆ ಮಾಡುತ್ತಿದ್ದರೂ ಇದು ಸಾಧಾರಣ ಕಾರ್ಯಕ್ರಮದಂತಿದೆ ನಾವು ತಾಲೂಕು ಮಟ್ಟದ ಕಾರ್ಯಕ್ರಮವನ್ನು ಇದಕ್ಕಿಂತ ಅದ್ದೂರಿಯಾಗಿ ಮಾಡುತ್ತಿದ್ದೆವು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು. ಶೀಘ್ರದಲ್ಲಿ ತಾಲೂಕು ಮಟ್ಟದ ತ್ಯಾಗರಾಜರ ಜಯಂತಿ ಆಚರಿಸಲು ನಾನು ಪೂರ್ಣ ಸಹಕಾರ ನೀಡುತ್ತೇನೆ. ಸವಿತಾ ಸಮಾಜದ ಅಭಿವೃದ್ಧಿ ನಿಗಮಕ್ಕೆ ಕೊಡುತ್ತಿರುವ ಅನುದಾನ ಏನೂ ಪ್ರಯೋಜವನಿಲ್ಲ ಇನ್ನೂ ಹೆಚ್ಚಿನ ಅನುದಾನ ನೀಡಬೇಕಿದೆ ಎಂದರು. ದೇವನಹಳ್ಳಿಯ ಯಾವುದೇ ಒಂದು ವೃತ್ತಕ್ಕೆ ಸವಿತಾ ಮಹರ್ಷಿ ಹೆಸರನ್ನು ನಾಮಕರಣ ಮಾಡಲು ಪುರಸಭೆಗೆ ಪತ್ರ ಬರೆಯುತ್ತೇನೆ ಎಂದರು.

    ಭೂಮಿ ನೀಡುವ ಜವಾಬ್ದಾರಿ: ಸವಿತಾ ಸಮಾಜಕ್ಕೆ 15 ದಿನದಲ್ಲಿ 1ಎಕರೆ ಜಮೀನು ನೀಡಲು ನೀಡುವ ಕಾರ್ಯ ಮಾಡಲಾಗುವುದು, ಇದರ ಸಂಪೂರ್ಣ ಜವಾಬ್ದಾರಿ ಜಿಲ್ಲಾಡಳಿತ ವಹಿಸಿಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು. ಕೋಲಾರ ಸರ್ಕಾರಿ ಪದವಿಪೂರ್ವ ಕಾಲೆಜಿನ ಉಪನ್ಯಾಸಕ ಡಾ. ನಾಗಾನಂದ್ ಕೆಂಪರಾಜ್ ಸವಿತ ಮಹರ್ಷಿ ಬಗ್ಗೆ ಸವಿತಾ ಸಮಾಜದ ಬಗ್ಗೆ ಬೆಳಕು ಚೆಲ್ಲುವ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಕಿರು ನಾಟಕ ಪ್ರದರ್ಶ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts