More

    ಸವನಳ್ಳಿ-ಹೊನಗನಳ್ಳಿ ವಿಜಯಪುರಕ್ಕೆ ಸೇರ್ಪಡೆ – ಶಾಸಕ ಡಾ.ಎಂ.ಬಿ. ಪಾಟೀಲ ಹರ್ಷ

    ವಿಜಯಪುರ: ನೂತನವಾಗಿ ರಚನೆಯಾದ ಬಬಲೇಶ್ವರ ತಾಲೂಕಿಗೆ ಸೇರ್ಪಡೆಗೊಂಡಿದ್ದ ಸವನಳ್ಳಿ ಹಾಗೂ ಹೊನಗನಳ್ಳಿ ಗ್ರಾಮಗಳನ್ನು ಪುನಃ ವಿಜಯಪುರ ತಾಲೂಕಿಗೆ ಸೇರ್ಪಡೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಸರ್ಕಾರದ ಕ್ರಮಕ್ಕೆ ಶಾಸಕ ಡಾ.ಎಂ.ಬಿ. ಪಾಟೀಲ ಸಂತಸ ವ್ಯಕ್ತಪಡಿಸಿದ್ದಾರೆ.
    ಮಂಗಳವಾರ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸುತ್ತಿದ್ದಂತೆ ಗೋವಾದಿಂದ ವಿಡಿಯೋ ಸಂದೇಶ ಕಳುಹಿಸಿದ ಶಾಸಕ ಎಂ.ಬಿ. ಪಾಟೀಲ, ಹೊನಗನಹಳ್ಳಿ ಹಾಗೂ ಸವನಳ್ಳಿ ಗ್ರಾಮಗಳನ್ನು ವಿಜಯಪುರಕ್ಕೆ ಸೇರ್ಪಡೆ ಮಾಡಬೇಕೆಂಬುದು ಆ ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿತ್ತು. ವಿಜಯಪುರ ತೀರ ಹತ್ತಿರವಾದುದ್ದರಿಂದ ಆಡಳಿತಾತ್ಮಕ ದೃಷ್ಟಿಯಿಂದ ಅನುಕೂಲವಾಗಲಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿತ್ತು. ಆ ನಿಟ್ಟಿನಲ್ಲಿ ಸರ್ಕಾರದ ಗಮನಕ್ಕೆ ತಂದಿದ್ದೆ. ಇದೀಗ ಸರ್ಕಾರದ ಆದೇಶ ಖುಷಿ ತಂದಿದೆ ಎಂದಿದ್ದಾರೆ.
    ಈ ಎರಡೂ ಗ್ರಾಮಗಳನ್ನು ವಿಜಯಪುರ ತಾಲೂಕಿಗೆ ಸೇರ್ಪಡೆಗೊಳಿಸುವಂತೆ 2021 ಸೆ.30ರಂದು ಕಂದಾಯ ಸಚಿವ ಆರ್.ಅಶೋಕ ಅವರಿಗೆ ಮನವಿ ಸಲ್ಲಿಸಿದ್ದರು. ಸವನಳ್ಳಿ ಹಾಗೂ ಹೊನಗನಳ್ಳಿ ಗ್ರಾಮಗಳು ಹೊನಗನಳ್ಳಿ ಗ್ರಾಮ ಪಂಚಾಯಿತಿಗೆ ಬರುತ್ತವೆ. ಎರಡೂ ಗ್ರಾಮಗಳು ಅಕ್ಕಪಕ್ಕದಲ್ಲಿವೆ. ಅಂದಾಜು ಎಂಟು ಸಾವಿರ ಜನಸಂಖ್ಯೆ ಇದ್ದು ವಿಜಯಪುರ ನಗರದಿಂದ 17 ಕಿಮೀ ಅಂತರದಲ್ಲಿವೆ. ನೂತನ ತಾಲೂಕು ರಚನೆ ವೇಳೆ ಈ ಎರಡೂ ಗ್ರಾಮಗಳು ಬಬಲೇಶ್ವರಕ್ಕೆ ಸೇರ್ಪಡೆಯಾಗಿದ್ದವು. ಆದರೆ, ಆಡಳಿತಾತ್ಮಕ ದೃಷ್ಟಿಯಿಂದ ಮೊದಲಿನಂತೆ ವಿಜಯಪುರ ತಾಲೂಕಿಗೇ ಸೇರ್ಪಡೆಗೊಳಿಸಬೇಕೆಂದು ಶಾಸಕ ಎಂ.ಬಿ. ಪಾಟೀಲ ಮನವಿ ಮಾಡಿದ್ದರು. ಇದೀಗ ಬೇಡಿಕೆ ಈಡೇರಿದ್ದಕ್ಕೆ ಶಾಸಕರು ಸಂತಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts