More

    ಸರ್ಕಾರಿ ಭೂಮಿ ಬಲಾಢ್ಯರ ಪಾಲು, ಕಸಾಘಟ್ಟದಲ್ಲಿ ಜಾನುವಾರು ಮೇಯಿಸಲು ಸ್ಥಳದ ಕೊರತೆ ಒತ್ತುವರಿ ತೆರವಿಗೆ ಗ್ರಾಮಸ್ಥರ ಪಟ್ಟು

    ದೊಡ್ಡಬಳ್ಳಾಪುರ: ತಾಲೂಕಿನ ಕಸಾಘಟ್ಟ ಗ್ರಾಮದಲ್ಲಿ ಸರ್ಕಾರಿ ಭೂಮಿಯನ್ನು ಬಲಾಢ್ಯರು ಒತ್ತುವರಿ ಮಾಡಿಕೊಳ್ಳುತ್ತಿದ್ದು, ಇದರಿಂದ ಜಾನುವಾರುಗಳ ಮೇವಿಗೂ ಪರದಾಡುವಂತಾಗಿದೆ ಎಂದು ಆರೋಪಿಸಿದ ಗ್ರಾಮಸ್ಥರು ಬುಧವಾರ ಒತ್ತುವರಿ ಪ್ರದೇಶಗಳಿಗೆ ಜಾನುವಾರುಗಳನ್ನು ಕರೆತಂದು ಪ್ರತಿಭಟನೆ ನಡೆಸಿದರು.

    ಗ್ರಾಮದಲ್ಲಿ 4 ಎಕರೆ ಗುಂಡುತೋಪು, 184 ಎಕರೆ ಗೋಮಾಳ, 3 ಎಕರೆ ಗೋಕಟ್ಟೆ, 62 ಎಕರೆ ಕೆರೆಯಂಗಳ, 8 ಎಕರೆಯಷ್ಟು ಸರ್ಕಾರಿ ತೋಪು ಇತ್ತು. ಆದರೆ ಗ್ರಾಮದ ಬಲಾಢ್ಯರು ಸರ್ಕಾರಿ ಭೂಮಿಗಳನ್ನು ಹಂತ ಹಂತವಾಗಿ ಒತ್ತುವರಿ ಮಾಡಿಕೊಳ್ಳುವ ಮೂಲಕ ಸರ್ಕಾರಿ ಜಾಗ ಕಬಳಿಕೆಗೆ ಮುಂದಾಗಿದ್ದಾರೆ. ಇದರಿಂದ ರೈತಾಪಿ ವರ್ಗದ ಜನರು ಜಾನುವಾರು ಬಯಲಲ್ಲಿ ಮೇಯಿಸಲು ಜಾಗವೇ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಅಲವತ್ತುಕೊಂಡರು.

    ಗುಂಡುತೋಪು, ಗೋಕಟ್ಟೆ ಒತ್ತುವರಿಯಾಗಿದೆ. ಕೆರೆಯಂಗಳ ಮಾತ್ರ ಜಾನುವಾರುಗಳಿಗೆ ಮೇವಿನ ತಾಣವಾಗಿತ್ತು, ಈಗ ಕೆರೆಯಂಗಳಕ್ಕೂ ಕಾಲಿಟ್ಟಿರುವ ಭೂಗಳ್ಳರು ಕೆರೆಗೆ ಹೋಗಲು ದಾರಿ ಇಲ್ಲದಂತೆ ಒತ್ತುವರಿ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ 150 ಕುಟುಂಬಗಳಿದ್ದು, 200ಕ್ಕೂ ಹೆಚ್ಚು ಜಾನುವಾರುಗಳಿವೆ. ಸಾಕಷ್ಟು ಕುಟುಂಬ ಹೈನೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿವೆ. ಆದರೆ ಇಲ್ಲಿನ ಭೂ ಕಬಳಿಕೆಯಿಂದ ಜಾನುವಾರು ಮೇಯಿಸಲು ಜಾಗ ಇಲ್ಲದಂತಾಗಿದೆ ಎಂದು ಸ್ಥಳೀಯರು ಅಲವತ್ತುಕೊಂಡರು.

    ಕೆರೆಯಂಗಳದಲ್ಲೆ ಬೆಳೆ: ಕಸಾಘಟ್ಟದ ಸರ್ವೇ ನಂಬರ್ 36 ರಲ್ಲಿ 62 ಎಕರೆ ಕೆರೆ ಇದೆ. ಕೆರೆ ಅಂಚಿನಲ್ಲಿರುವ ರೈತರು ಒತ್ತುವರಿ ಮಾಡಿಕೊಂಡು ಅಡಕೆ, ಜೋಳ, ತರಕಾರಿ ಬೆಳೆಯುತ್ತಿದ್ದಾರೆ. ಬೆಳೆ ರಕ್ಷಣೆಗಾಗಿ ಮುಳ್ಳಿನ ಬೆಲೆ ಹಾಕಿದ್ದಾರೆ. ಇದರಿಂದ ಕೆರೆಗೆ ಬರಲು ದಾರಿಯೇ ಇಲ್ಲದಂತಾಗಿದೆ. ಈ ಕುರಿತು ಪ್ರಶ್ನೆ ಮಾಡಿದರೆ ಅವಾಚ್ಯವಆಗಿ ನಿಂದಿಸುತ್ತಾರೆ ಎಂದು ಗ್ರಾಮಸ್ಥರು ದೂರಿದರು.

    ನೊಟೀಸ್‌ಗೂ ಬೆಲೆ ಇಲ್ಲ: ಸರ್ವೇ ನಂಬರ್ 207ರಲ್ಲಿದ್ದ ಗೋಕಟ್ಟೆ ಒತ್ತುವರಿ ಮಾಡಿಕೊಂಡು ಮನೆ ಕಟ್ಟಲಾಗಿದೆ. ಕೆರೆಯಂಗಳ ಒತ್ತುವರಿ ಮಾಡಿಕೊಂಡು ತೋಟವನ್ನಾಗಿ ಪರಿವರ್ತಿಸಲಾಗಿದೆ. ಈ ಕುರಿತು ಒತ್ತುವರಿ ತೆರವು ಮಾಡುವಂತೆ ತಹಸೀೀಲ್ದಾರ್ ನೋಟಿಸ್ ನೀಡಿದರೂ ಒತ್ತುವರಿದಾರರೂ ಮಾತ್ರ ದಿನೆ ದಿನೇ ಒತ್ತುವರಿ ಮಾಡುವುದನ್ನು ಮುಂದುವರಿಸಿದ್ದಾರೆ. ಕೆರೆಯಂಗಳದಲ್ಲಿ ಕೊಳವೆಬಾವಿ ಕೊರೆದು ತೋಟಕ್ಕೆ ನೀರಿನ ಸೌಲಭ್ಯ ಕಲ್ಪಿಸಿಕೊಳ್ಳಲಾಗಿದೆ ಎಂದು ಗ್ರಾಪಂ ಸದಸ್ಯ ಅಂಜನ್‌ಕುಮಾರ್, ಗ್ರಾಮಸ್ಥರಾದ ಚಿಕ್ಕಹನುಮಕ್ಕ, ಶಾರದಮ್ಮ ಇತರರು ಆರೋಪಿಸಿದರು.

    ಒತ್ತುವರಿ ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಿದ್ದೆವು. ಈ ಕುರಿತು ರಾಜಸ್ವ ನಿರೀಕ್ಷಕರು, ಉಪ ತಹಸೀಲ್ದಾರ್ ಅವರನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದೇನೆ. ಮತ್ತೊಮ್ಮೆ ನೋಟಿಸ್ ಜಾರಿ ಮಾಡಿ ಅಂತಿಮ ಗಡುವು ನೀಡುತ್ತೇವೆ. ಅಲ್ಲಿಗೂ ತೆರವು ಮಾಡದೆ ಹೋದಲ್ಲಿ ನಾವೇ ಒತ್ತುವರಿ ತೆರವುಗೊಳಿಸುತ್ತೇವೆ.
    ಟಿ.ಎಸ್.ಶಿವರಾಜ್
    ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts