More

    ಸರ್ಕಾರಿ ನೌಕರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗು ಸಾಂಸ್ಕೃತಿಕ ಸ್ಪರ್ಧೆಗೆ ಉದ್ಘಾಟನೆ

    ಹಾಸನ: ಸರ್ಕಾರಿ ನೌಕರರು ದಿನದ 24 ಗಂಟೆ ಒತ್ತಡದಲ್ಲೇ ಕೆಲಸ ಮಾಡುವ ಮೂಲಕ ಅವರ ಆರೋಗ್ಯ ಹದಗೆಡುತ್ತಿದೆ. ಆಯಸ್ಸು ಕಡಿಮೆಯಾಗುತ್ತಿದೆ ಎಂದು ವೈದ್ಯಕೀಯ ದಾಖಲೆಗಳು ಹೇಳುತ್ತವೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ.ಕೃಷ್ಣೇಗೌಡ ಅತಂಕ ವ್ಯಕ್ತಪಡಿಸಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕ್ರೀಡಾ ಮತ್ತು ಯುವ ಜನ ಸಬಲೀಕರಣ ಇಲಾಖೆ, ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿರುವ ಎರಡು ದಿನಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೃತ ಸರ್ಕಾರಿ ನೌಕರರ ಶವ ಸಂಸ್ಕಾರ ವೆಚ್ಚ ಏರಿಕೆ, ಕ್ಯಾನ್ಸರ್ ಪೀಡಿತ ನೌಕರರಿಗೆ ವಿಶೇಷ ಸೇವಾ ಭದ್ರತೆ, ಡಯಾಲಿಸಿಸ್ ರೋಗಿಗಳಿಗೆ ವಿಶೇಷ ಸೇವಾ ಭದ್ರತೆ, ಪಿಯುಸಿ ಹಾಗು ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ನೌಕರರ ಮಕ್ಕಳಿಗೆ ಸರ್ಕಾರದಿಂದ ಪ್ರತಿಭಾ ಪುರಸ್ಕಾರ ಹೀಗೆ ಅನೇಕ ಯೋಜನೆಗಳು ನಮ್ಮ ಆಡಳಿತಾವಧಿಯಲ್ಲಿ ಜಾರಿಗೆ ಬಂದಿವೆ ಎಂದು ತಿಳಿಸಿದರು.
    ನಾಲ್ಕು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಸರ್ಕಾರಿ ನೌಕರರ ಹಿತಕ್ಕಾಗಿ ಶಕ್ತಿಮೀರಿ ಶ್ರಮಿಸಿದ್ದೇನೆ, 5602 ನೌಕರರಿಗೆ ಸಂಬಂಧಿಸಿದ ಅರ್ಜಿಗಳನ್ನು ಸರ್ಕಾರಕ್ಕೆ ತಲುಪಿಸಿದ್ದೇನೆ. ಉದ್ಯೋಗಿಗಳ ಬೇಡಿಕೆಗೆ ಅನುಗುಣವಾಗಿ ನಮ್ಮ ಆಡಳಿತಾವಧಿಯಲ್ಲಿ ಸರ್ಕಾರ 25 ಸರ್ಕಾರಿ ಆದೇಶ ಹೊರಡಿಸಿದೆ ಎಂದು ಹೇಳಿದರು.
    ಜಿಲ್ಲೆಯ ಸರ್ಕಾರಿ ನೌಕರರ ಹಿತಕ್ಕಾಗಿ ನಾಲ್ಕು ವರ್ಷಗಳಿಂದ ಕೆಲಸ ಮಾಡಿದ್ದೇನೆ. ಏನೂ ಅರಿಯದೆ ನನ್ನ ಬಗ್ಗೆ ಕೆಲವರು ಅಪಪ್ರಚಾರ ಮಾಡಿರಬಹುದು. ಆದರೆ ಅದ್ಯಾವುದಕ್ಕು ತಲೆ ಕೆಡಿಸಿಕೊಳ್ಳುವುದಿಲ್ಲ. ಜಿಲ್ಲೆಯ 5602 ನೌಕರರ ಮನವಿ ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಿ ನ್ಯಾಯ ದೊರಕಿಸಿದ ತೃಪ್ತಿ ನನಗಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ನೌಕರರ ಏಳಿಗೆಗಾಗಿ ಹಗಲಿರುಳು ಕೆಲಸ ಮಾಡಿದ್ದಾರೆ. ಜುಲೈ 11ಕ್ಕೆ ನನ್ನ ಆಡಳಿತಾವಧಿ ಮುಗಿಯಲಿದ್ದು ಮುಂದೆಯೂ ಸಂಘ ಉತ್ತಮವಾಗಿ ಕೆಲಸ ಮಾಡಿಕೊಂಡಿರಲಿ ಎಂದು ಆಶಿಸಿದರು.
    ಜಿಲ್ಲಾ ಪಂಚಾಯಿತಿ ಆಡಳಿತ ಉಪಕಾರ್ಯದರ್ಶಿ ನಾಗೇಶ್ ಎ.ನಾಯಕ ಅವರು ಮಾತನಾಡಿ, ಸರ್ಕಾರಿ ಉದ್ಯೋಗಿಗಳು ನಿತ್ಯ ಸಭೆ, ಸಂವಾದ ಹಾಗು ಕಾರ್ಯಕ್ರಮಗಳಲ್ಲೇ ಕಾಲ ಕಳೆಯಬೇಕಾಗಿದೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಒತ್ತಡದಿಂದ ಹೊರಬರಲು ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಈ ರೀತಿಯ ಚಟುವಟಿಕೆಗಳು ನೆರವಾಗುತ್ತವೆ ಎಂದರು.
    ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜವರೇಗೌಡ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ಉಪನಿರ್ದೇಶಕ ಉದಯಕುಮಾರ್, ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಉಪನಿರ್ದೇಶಕ ಸಿ.ಕೆ.ಹರೀಶ್, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಅಣ್ಣಪ್ಪ, ಕುಮಾರಸ್ವಾಮಿ, ಎಂ.ಆರ್.ಕೃಷ್ಣಮೂರ್ತಿ, ವೈ.ಪಿ.ಶಂಕರ್, ಟಿ.ಮಂಜಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts