More

    ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

    ರಾಯಬಾಗ: ಮೇಘಾಲಯದ ತುರಾದಲ್ಲಿ ಸೆ.8ರಂದು ಹೃದಯಾಘಾತದಿಂದ ಮೃತಪಟ್ಟಿದ್ದ ಬಿಎಸ್‌ಎಫ್ ಪ್ಲಟೂನ್ ಕಮಾಂಡರ್ ವಿಷ್ಣು ಕಾಂಬಳೆ (58) ಅವರ ಅಂತ್ಯಸಂಸ್ಕಾರ ಪಟ್ಟಣದಲ್ಲಿ ಶನಿವಾರ ಸರ್ಕಾರಿ ಗೌರವದೊಂದಿಗೆ ನೆರವೇರಿತು.

    ಪಟ್ಟಣದ ನಿವಾಸಿ ವಿಷ್ಣು ಕಾಂಬಳೆ 37 ವರ್ಷಗಳಿಂದ ಜಮ್ಮುಕಾಶ್ಮೀರ ಸೇರಿ ವಿವಿಧೆಡೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಈಚೆಗೆ ರಜೆ ಮುಗಿಸಿ ಮರಳಿ ಸೇವೆಗೆ ಹಾಜರಾಗಿದ್ದ ಅವರು, ಸೆ.8 ರಂದು ಮಧ್ಯಾಹ್ನ ಮಲಗಿದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದರು. ಯೋಧ ವಿಷ್ಣು ಕಾಂಬಳೆ ಅವರ ಪಾರ್ಥಿವ ಶರೀರವನ್ನು ಮೇಘಾಲಯದಿಂದ ದೆಹಲಿ ಮೂಲಕ ವಾಯುಮಾರ್ಗವಾಗಿ ಬೆಂಗಳೂರಿನ ಬಿಎಸ್‌ಎಫ್ ಯುನಿಟ್‌ಗೆ ತರಲಾಗಿತ್ತು. ಅಲ್ಲಿಂದ ಸಬ್ ಇನ್ಸ್‌ಪೆಕ್ಟರ್ ಎಂ.ಡಿ. ಅಕ್ರಂ ನೇತೃತ್ವದ 13 ಯೋಧರು ರಸ್ತೆ ಮೂಲಕ ಶನಿವಾರ ರಾಯಬಾಗ ಪಟ್ಟಣಕ್ಕೆ ಶವವನ್ನು ಕರೆತಂದರು. ಪಟ್ಟಣದ ಕೇಂದ್ರ ಶಾಲೆಯಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ತಾಲೂಕಾಡಳಿತ ಹಾಗೂ ಜನಪ್ರತಿನಿಧಿಗಳು ಗೌರವ ವಂದನೆ ಸಲ್ಲಿಸಿದರು.

    ನಂತರ ಪಟ್ಟಣದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ, ಅಂತ್ಯಕ್ರಿಯೆ ನೆರವೇರಿಸಲಾಯಿತು. ಶಾಸಕ ಡಿ.ಎಂ.ಐಹೊಳೆ, ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ, ಕಾಂಗ್ರೆಸ್ ಮುಖಂಡ ಮಹಾವೀರ ಮೋಹಿತೆ ಸೇರಿ ಗಣ್ಯರು ಅಂತಿಮ ದರ್ಶನ ಪಡೆದರು. ಯೋಧನಿಗೆ ಪತ್ನಿ, ನಾಲ್ವರು ಪುತ್ರಿಯರು ಮತ್ತು ಪುತ್ರ ಇದ್ದಾರೆ. ಯೋಧನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತಹಸೀಲ್ದಾರ್ ಆರ್.ಎಚ್. ಬಾಗವಾನ, ಸಿಪಿಐ ಎಚ್.ಡಿ.ಮುಲ್ಲಾ, ಪಪಂ ಅಧ್ಯಕ್ಷ ಸಂತೋಷ ಮೇತ್ರಿ, ನಾಮದೇವ ಕಾಂಬಳೆ, ಸದಾಶಿವ ಘೋರ್ಪಡೆ ಹಾಗೂ
    ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts