More

    ಸರ್ಕಾರಿ ಕಚೇರಿಗಳಿಗೆ ಪ್ರವೇಶ ನಿರ್ಬಂಧ

    ಕಾರವಾರ: ಕರೊನಾ ಸೋಂಕು ತಡೆಯುವ ಹಿನ್ನೆಲೆಯಲ್ಲಿ ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ.ಗುರುವಾರ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಕಚೇರಿಗಳಿಗೆ ತುರ್ತು ಸಂದರ್ಭ ಇದ್ದರೆ ಮಾತ್ರ ಬನ್ನಿ ಎಂದು ಈ ಹಿಂದೆ ಜಿಪಂ ಸಿಇಒ ವಿನಂತಿಸಿದ್ದರು. ಆದರೂ ವಿವಿಧ ಸಂಘ ಸಂಸ್ಥೆಗಳು ಹಾಗೂ ಜನರು ಕಚೇರಿಗಳಿಗೆ ಬರುವ ಪ್ರಮಾಣ ಕಡಿಮೆಯಾಗದ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ತುರ್ತು ಕೆಲಸಗಳನ್ನು ಹೊರತುಪಡಿಸಿ ಸರ್ಕಾರಿ, ಅರೆ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಸಂಘ ಸಂಸ್ಥೆಗಳಿಗೆ ಯಾರೂ ಬರಬಾರದು. ತುರ್ತು ಕಾರ್ಯ ಯಾವುದು ಎಂಬುದನ್ನು ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು ನಿರ್ಣಯಿಸಬೇಕು ಎಂದು ಆದೇಶದಲ್ಲಿ ಅವರು ತಿಳಿಸಿದ್ದಾರೆ.

    ಲೈಸನ್ಸ್ ಸಿಗದು: ನಗರಸಭೆಯಲ್ಲಿ ನೀಡುತ್ತಿದ್ದ ಜನನ, ಮರಣ ಪ್ರಮಾಣಪತ್ರ, ನಮೂನೆ 3(ಇ ಆಸ್ತಿ), ಹಕ್ಕು ಬದಲಾವಣೆ, ಉದ್ದಿಮೆ ಹಾಗೂ ಕಟ್ಟಡ ಪರವಾನಗಿ ಸೇವೆಗಳನ್ನು ತಕ್ಷಣದಿಂದ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಿ ಕಾರವಾರ ನಗರಸಭೆ ಪೌರಾಯುಕ್ತರು ಆದೇಶಿಸಿದ್ದಾರೆ.

    ಅಬಕಾರಿ ಲೈಸನ್ಸ್ ಬಂದ್: ಅಬಕಾರಿ ಇಲಾಖೆಯಿಂದ ಮುಂದಿನ ಆದೇಶದವರೆಗೆ ಮದ್ಯ ಮಾರಾಟಕ್ಕೆ ಸಾಂರ್ದಭಿಕ ಲೈಸೆನ್ಸ್ (ಸಿಎಲ್-5 )ನೀಡುವುದನ್ನು ಬಂದ್ ಮಾಡಲಾಗಿದೆ. ಮದ್ಯದಂಗಡಿಗಳು ಸಿಎಲ್9 ಲೈಸನ್ಸ್ ಪಡೆದು, ಸುತ್ತ ಟೇಬಲ್ ಹಾಕಿ ಕುಡಿಯುವ ವ್ಯವಸ್ಥೆ ಮಾಡಿದ್ದರೆ ಅದನ್ನು ತಕ್ಷಣದಿಂದ ಬಂದ್ ಮಾಡಬೇಕು. ಇನ್ನು ಬಾರ್​ಗಳಲ್ಲಿ ಆಸನ ವ್ಯವಸ್ಥೆ ಇದ್ದಷ್ಟೇ ಜನರಿಗೆ ಅವಕಾಶ ನೀಡಬೇಕು. ಜನಸಂದಣಿ ಆಗದಂತೆ ಕ್ರಮ ವಹಿಸಬೇಕು. ಇನ್ನು ಹವಾ ನಿಯಂತ್ರಣ (ಎಸಿ) ಬಳಸದಂತೆ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿ ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಮತ್ತೆರಡು ರೈಲು ಬಂದ್: ಕೊಂಕಣ ರೈಲ್ವೆ ಮಾರ್ಗದಲ್ಲಿ ಓಡಾಡುತ್ತಿದ್ದ ಎರಡು ರೈಲುಗಳನ್ನು ಮಂಗಳವಾರದಿಂದ ರದ್ದು ಮಾಡಲಾಗಿತ್ತು. ಗುರುವಾರ ಮತ್ತೆರಡು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಮಾರ್ಚ್ 22 ಹಾಗೂ 29 ರ ಮಡಗಾಂವ ಜಂಕ್ಷನ್ ಎರ್ನಾಕುಲಂ(ರೈಲು ಸಂಖ್ಯೆ-10215), 23 ಹಾಗೂ 30 ರ ಎರ್ನಾಕುಲಂ -ಮಡಗಾಂವ ರೈಲು ಸಂಚಾರವನ್ನು ರದ್ದು ಮಾಡಲಾಗಿದೆ.

    ಜೈಲುಗಳಿಗೆ ಪ್ರವೇಶವಿಲ್ಲ: ಕರೊನಾ ಬೀತಿಯ ಹಿನ್ನೆಲೆಯಲ್ಲಿ ಕಾರವಾರದ ಜಿಲ್ಲಾ ಕಾರಾಗೃಹದಲ್ಲಿ ಸಾರ್ವಜನಿಕರ ಭೇಟಿಯನ್ನು ರದ್ದು ಮಾಡಲಾಗಿದೆ. ಇಲ್ಲಿ ವಿಚಾರಣಾಧೀನ ಕೈದಿಗಳಿದ್ದಾರೆ. ಯಾವುದೇ ಅನಾರೋಗ್ಯದ ಸಮಸ್ಯೆ ಇರುವವರನ್ನು ಬೇರೆ ಸೆಲ್​ನಲ್ಲಿ ಇರಿಸಲಾಗಿದೆ. ಕೈದಿಗಳ ಭೇಟಿಗೆ ಅವರ ಸಂಬಂಧಿಕರಿಗೆ ಅವಕಾಶ ನೀಡಲಾಗುತ್ತಿತ್ತು. ಅದನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ಕಾರಾಗೃಹ ಇಲಾಖೆ ಮೂಲಗಳು ತಿಳಿಸಿವೆ.

    ಸಾರಿಗೆ ಸಂಕಟ: ಕರೊನಾ ಭೀತಿ ಕರ್ನಾಟಕ ಸಾರಿಗೆ ಸಂಸ್ಥೆಯ ಚಾಲಕ ನಿರ್ವಾಹಕರನ್ನು ಕಾಡಿದೆ. ಬಸ್​ನಲ್ಲಿ ಊರಿಂದ ಊರಿಗೆ ತೆರಳಬೇಕಾದ ಅವರು ಅಲ್ಲಿ ಎಲ್ಲೆಂದರಲ್ಲಿ ಆಹಾರ ಸೇವಿಸಬೇಕು. ವಾಸ್ತವ್ಯ ಮಾಡಬೇಕಿದೆ. ಇನ್ನು ಪ್ರತಿನಿತ್ಯ ಸಾವಿರಾರು ಜನರ ಸಂಪರ್ಕಕ್ಕೆ ಬರುವುದರಿಂದ ಅವರಲ್ಲಿ ಭೀತಿ ಹೆಚ್ಚಿದೆ. ತಮಗೂ ಮಾಸ್ಕ್ ಮುಂತಾದ ಸೌಲಭ್ಯ ನೀಡಬೇಕು ಎಂದು ಎನ್​ಡಬ್ಲ್ಯುಕೆಆರ್​ಟಿಸಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮನವಿ ಮಾಡಿದ್ದಾರೆ. ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದ್ದರಿಂದ ಕೆಲವು ಬಸ್​ಗಳನ್ನು ರದ್ದು ಮಾಡಲಾಗಿದೆ. ಆ ಬಸ್​ಗಳ ಚಾಲಕ, ನಿರ್ವಾಹಕರಿಗೆ ಯಾವುದೇ ಪ್ರತ್ಯೇಕ ಕರ್ತವ್ಯಕ್ಕೆ ನಿಯೋಜಿಸಿಲ್ಲ. ಅಂಥವರಿಗೆ ಇಲಾಖೆ ವೇತನ ಕಡಿತ ಮಾಡುವ ಆತಂಕ ಎದುರಾಗಿದೆ. ಕರ್ತವ್ಯಕ್ಕೆ ತೆರಳಿದರೆ ಮಾತ್ರ ಡಿಪೊಗಳ ಹಾಜರಾತಿ ಪುಸ್ತಕದಲ್ಲಿ ಹಾಜರಾತಿ ಹಾಕುವ ವ್ಯವಸ್ಥೆ ಇದೆ. ಇಲಾಖೆಯೇ ನಮಗೆ ಕರ್ತವ್ಯಕ್ಕೆ ನಿಯೋಜಿಸಿಲ್ಲ ಇದರಿಂದ ತೆರಳುವ ಪ್ರಶ್ನೆಯೇ ಬರುವುದಿಲ್ಲ. ಹಾಗಾಗಿ ನಮ್ಮ ಹಾಜರಾತಿಯನ್ನು ಗೈರು ಎಂದು ತೋರಿಸಲಾಗುತ್ತಿದೆ. ನಮ್ಮದಲ್ಲದ ತಪ್ಪಿಗೆ ನಾವು ಸಮಸ್ಯೆ ಎದುರಿಸಬೇಕಿದೆ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ‘ವಿಜಯವಾಣಿ’ ಜತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಡಿಎಲ್ ಇಲ್ಲ: ಆರ್​ಟಿಒ ಕಚೇರಿಗಳಲ್ಲಿ ಚಾಲನಾ ಹಾಗೂ ಕಲಿಕಾ ಪರವಾನಗಿ(ಎಲ್​ಎಲ್ ಮತ್ತು ಡಿಎಲ್)ಗಳನ್ನು ನೀಡುವುದನ್ನು ಮಾ.20 ರಿಂದ ನಿಲ್ಲಿಸಲಾಗುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ತಿಳಿಸಿದ್ದಾರೆ. ಏಪ್ರಿಲ್ 15 ರೊಳಗೆ ಚಾಲನಾ ಪರವಾನಗಿ ರದ್ದಾಗುವವರು ಬಂದು ಪರವಾನಗಿ ಪಡೆಯಬಹುದು ಎಂದಿದ್ದಾರೆ. ವಾಹನ ನೋಂದಣಿ ಮತ್ತು ಪಾಸಿಂಗ್ ಎಂದಿನಂತೆ ಇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಬಸ್​ಗಳು ಬಂದ್ : ಕಾರವಾರದಿಂದ ಗೋವಾಕ್ಕೆ ತೆರಳುತ್ತಿದ್ದ ಬಸ್ ಸಂಚಾರವನ್ನು ಎನ್​ಡಬ್ಲ್ಯುಕೆಆರ್​ಟಿಸಿ ಗುರುವಾರದಿಂದ ಬಂದ್ ಮಾಡಿದೆ. ಬೇರೆ ಡಿಪೊಗಳಿಂದ ಕಾರವಾರ ಮಾರ್ಗವಾಗಿ ಗೋವಾಕ್ಕೆ ತೆರಳುತ್ತಿರುವ ಬಸ್​ಗಳು ಎಂದಿನಂತೆ ಸಂಚರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಕಲಬುರಗಿ, ಠಾಣೆ ಮಾರ್ಗಗಳನ್ನೂ ಜನರಿಲ್ಲದೆ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಪ್ರವಾಸಿಗರು ಬರಲು ತಡೆ: ಜಿಲ್ಲೆಗೆ ಹೊರ ಜಿಲ್ಲೆ, ರಾಜ್ಯ, ದೇಶಗಳ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಆದೇಶಿಸಿದ್ದಾರೆ. ಕರೊನಾ ವೈರಸ್ ಸೋಂಕು ಹರಡುವಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಈ ಕ್ರಮ ವಹಿಸಲಾಗಿದೆ. ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು ಚೆಕ್​ಪೋಸ್ಟ್​ಗಳನ್ನು ನಿರ್ವಿುಸಿ, ವಾಹನ ಹಾಗೂ ಪ್ರಯಾಣಿಕರ ಮಾಹಿತಿಯನ್ನು ಸಂಗ್ರಹಿಸಿ ನೀಡಬೇಕು. ಆದೇಶವನ್ನು ಉಲ್ಲಂಘಿಸಿದರೆ ದಂಡನೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

    ಕಲಾಪದಿಂದ ದೂರ ಇರಲು ನಿರ್ಧಾರ: ಕರೊನಾ ಸೋಂಕಿನಿಂದ ಬಚಾವಾಗಲು ಮಾರ್ಚ್ 31 ರವರೆಗೆ ತುರ್ತು ಪ್ರಕರಣಗಳನ್ನು ಹೊರತುಪಡಿಸಿ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗದೇ ಇರಲು ಜಿಲ್ಲಾ ವಕೀಲರ ಸಂಘ ನಿರ್ಧರಿಸಿದೆ. ಗುರುವಾರ ನಡೆದ ಸಂಘದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಯಾವುದೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣದಲ್ಲಿ ಸಂಬಂಧಪಟ್ಟ ಆರೋಪಿಗಳು ಹಾಜರಾಗದೇ ಇದ್ದಲ್ಲಿ ದಸ್ತಗಿರಿ ವಾರಂಟ್ ಆನ್ನು ಆರೋಪಿಗಳ ವಿರುದ್ಧ ಹೊರಡಿಸಬಾರದು ಎಂದು, ಆರೋಪಿಯ ಗೈರನ್ನು ಮಾನ್ಯ ಮಾಡುವ ಸಂಬಂಧ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬೇಕು. ವಕೀಲರು ಕಕ್ಷಿದಾರರನ್ನು ಕೋರ್ಟ್​ಗೆ ಕರೆಯಬಾರದು ಕಚೇರಿಯಲ್ಲೂ ಭೇಟಿಯಾಗಬಾರದು ಎಂದು ನಿರ್ಣಯಿಸಲಾಯಿತು ಎಂದು ಸಂಘದ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts