More

    ಸರ್ಕಾರದ ಸೌಲಭ್ಯ ಸದ್ಬಳಕೆ ಆಗಲಿ; ಮೇಡಿಹಾಳದಲ್ಲಿ ಆಯೋಜಿಸಿದ್ದ ಗ್ರಾಮವಾಸ್ತವ್ಯದಲ್ಲಿ ಜಿಲ್ಲಾಧಿಕಾರಿ ವೆಂಕಟ್​ರಾಜಾ ಸಲಹೆ

    ಕೋಲಾರ: ಕೇಂದ್ರ, ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಜನರು ಅವುಗಳ ಮಾಹಿತಿ ಪಡೆದು ಸದ್ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್​ ರಾಜಾ ತಿಳಿಸಿದರು.
    ತಾಲೂಕಿನ ಮೇಡಿಹಾಳದಲ್ಲಿ ಕಂದಾಯ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಜಿಲ್ಲಾಡಳಿತ ಹಳ್ಳಿಯಲ್ಲಿ ವಾಸ್ತವ್ಯವಿದ್ದು, ಗ್ರಾಮಸ್ಥರು ಯಾವುದೇ ಸಮಸ್ಯೆಗಳಿದ್ದರೂ, ಅಹವಾಲು ನೀಡಿ ಅದನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ವಸ್ತು ಪ್ರದರ್ಶನದ ಮೂಲಕ ತಿಳಿಸಲಾಗುತ್ತಿದೆ. ಇದನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ಗ್ರಾಮದಲ್ಲಿ ಸ್ಮಶಾನಕ್ಕೆ ನಕಾಶೆ ಪ್ರಕಾರ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತದೆ. ಗ್ರಾಮದಲ್ಲಿ ಪ್ಲಾಸ್ಟಿಕ್​ ಅನ್ನು ಹೆಚ್ಚಾಗಿ ಬಳಸಬಾರದು. ಇದರಿಂದ ಪರಿಸರ ನಾಶವಾಗುವುದರ ಜತೆಗೆ ಹಲವು ರೋಗಗಳು ಬರಲು ಕಾರಣವಾಗುತ್ತದೆ. ಪರಿಸರ ನಾಶವಾಗುವುದನ್ನು ತಡೆಯುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ನಮ್ಮ ಮುಂದಿನ ಪೀಳಿಗೆಗೂ ಉತ್ತಮ ಪರಿಸರ ಇರುವಂತೆ ಜಾಗ್ರತೆವಹಿಸಬೇಕು. ಪ್ಲಾಸ್ಟಿಕ್​ಮುಕ್ತ ಗ್ರಾಮವನ್ನಾಗಿಸಿ, ಆರೋಗ್ಯ ಕಾಪಾಡಿಕೊಳ್ಳಬೇಕು. ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ನೀಟ್​, ಸಿಇಟಿ ಮುಂತಾದ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿ ನೀಡಿ ಅವರಿಗೆ ಸಿಎಸ್​ಆರ್​ ಯೋಜನೆಯಲ್ಲಿ ಲ್ಯಾಪ್​ಟಾಪ್​ ಸೌಲಭ್ಯವಿದ್ದು, ಅವರು ಲ್ಯಾಪ್​ಟಾಪ್​ ಪಡೆದುಕೊಳ್ಳಬಹುದು ಎಂದರು.

    ಸರ್ಕಾರದ ಸೌಲಭ್ಯ ಸದ್ಬಳಕೆ ಆಗಲಿ; ಮೇಡಿಹಾಳದಲ್ಲಿ ಆಯೋಜಿಸಿದ್ದ ಗ್ರಾಮವಾಸ್ತವ್ಯದಲ್ಲಿ ಜಿಲ್ಲಾಧಿಕಾರಿ ವೆಂಕಟ್​ರಾಜಾ ಸಲಹೆ
    ಜಿಲ್ಲಾಧಿಕಾರಿ ವೆಂಕಟ್​ರಾಜಾ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್​ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳಲು ಎಲ್ಲರೂ ಆದ್ಯತೆ ನೀಡಬೇಕು. ಕೇಂದ್ರವು ಆಯುಷ್ಮಾನ್​ ಭಾರತ್​ ಆರೋಗ್ಯ ಯೋಜನೆ ಜಾರಿಗೆ ತಂದಿದ್ದು, ಈ ಕಾರ್ಡ್​ ಅನ್ನು ಪ್ರತಿಯೊಬ್ಬರೂ ಗ್ರಾಮ ಒನ್​ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದು. ಆರೋಗ್ಯದಲ್ಲಿ ಏರುಪೇರಾದಾಗ ಕಾರ್ಡ್​ ಇದ್ದರೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಜಿಲ್ಲೆಯಲ್ಲಿ ಜನವರಿಯಿಂದ ಈತನಕ 47 ಡೆಂ ಪ್ರಕರಣಗಳು ದಾಖಲಾಗಿದ್ದು, ಇವು ಹೆಚ್ಚು ಹರಡದಂತೆ ತಡೆಗಟ್ಟಬೇಕು. ರಾಜ್ಯದಲ್ಲಿ ಕರೊನಾ ಲಸಿಕೆ ನೀಡುವುದರಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ ಎಂದು ತಿಳಿಸಿದರು.

    ಡಿಡಿಎಲ್​ಆರ್​ ಭಾಗ್ಯಮ್ಮ, ಉಪನಿರ್ದೇಶಕರಾದ ಆಹಾರ ಇಲಾಖೆಯ ಸೋಮಶಂಕರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಮುದ್ದಣ್ಣ, ರೇಷ್ಮೆ ಇಲಾಖೆಯ ಕಾಳಪ್ಪ, ಪಶುಸಂಗೋಪನೆಯ ಡಾ.ಸುಭಾನ್​, ತಹಸೀಲ್ದಾರ್​ ಕೆ.ಆರ್​.ನಾಗರಾಜ್​, ತಾಲೂಕು ಆರೋಗ್ಯಾಧಿಕಾರಿ ಡಾ. ನಾರಾಯಣಸ್ವಾಮಿ ಇದ್ದರು.

    ಅನ್ನಪ್ರಾಶನ ಕಾರ್ಯಕ್ರಮ ನೆರವೇರಿಸಿದ ಡಿಸಿ: ಜಿಲ್ಲಾಧಿಕಾರಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಗರ್ಭಿಣಿಯರಿಗೆ ಮಾತೃವಂದನಾ ಯೋಜನೆಯಡಿ ಸೀಮಂತ ಮತ್ತು ಮಗುವಿಗೆ ಅನ್ನಪ್ರಾಶನ ಕಾರ್ಯಕ್ರಮ ನೆರವೇರಿಸಿದರು. ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಬಿತ್ತನೆ ಬೀಜ ಕಿಟ್​ ವಿತರಿಸಲಾಯಿತು. ಗ್ರಾಮದಲ್ಲಿ ಪ್ರೌಢಶಾಲೆ ನಿಮಾರ್ಣಕ್ಕೆ ಸರ್ವೇ ನಂ. 82ರಲ್ಲಿ 4 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಕುರಿತು ಗ್ರಾಮಸ್ಥರಿಗೆ ವಿವರವಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts