More

    ಸರ್ಕಾರದ ಜತೆ ಭಕ್ತರೂ ಕೈಜೋಡಿಸಿ

    ತೀರ್ಥಹಳ್ಳಿ: ದೇವಾಲಯ ಸೇರಿ ಧಾರ್ವಿುಕ ಕೇಂದ್ರಗಳ ಅಭಿವೃದ್ಧಿಗೆ ಸಮುದಾಯದ ಸಹಕಾರ ಅಗತ್ಯ. ದೇಗುಲ ನಿರ್ವಣದಲ್ಲಿ ಭಕ್ತರ ನೆರವು ಇಲ್ಲವಾದರೆ ಅದು ಸರ್ಕಾರಿ ದೇವಸ್ಥಾನ ಎಂದಾಗುತ್ತದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಭಾನುವಾರ ಶರಾವತಿ ನದಿಯ ಉಗಮ ಸ್ಥಾನವಾದ ಪುರಾಣ ಪ್ರಸಿದ್ಧ ಅಂಬುತೀರ್ಥ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಧಾರ್ವಿುಕ ಕೇಂದ್ರಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿದೆ. ಆದರೆ ಎಲ್ಲವನ್ನೂ ಸರ್ಕಾರದಿಂದಲೇ ನಿರೀಕ್ಷಿಸಬಾರದು. ಭಕ್ತರು ಕೂಡ ದೇಣಿಗೆ ನೀಡಬೇಕು ಎಂದರು.

    ತಿರುಪತಿಯಲ್ಲಿರುವ ಕರ್ನಾಟಕ ಸರ್ಕಾರದ ವಸತಿ ಸಂಕೀರ್ಣ ಶಿಥಿಲಗೊಂಡಿದ್ದು ಇದರ ಅಭಿವೃದ್ಧಿಗೆ ಸರ್ಕಾರ 200 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ರಾಮಮಂದಿರದ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಹಿಂದುಗಳ ಪರವಾಗಿ ಬಂದಿದ್ದು ಇದರ ನಿರ್ವಣದಲ್ಲೂ ಎಲ್ಲ ಭಕ್ತರ ನೆರವು ಹಾಗೂ ಸಹಭಾಗಿತ್ವದ ಅಗತ್ಯವಿದೆ ಎಂದು ಹೇಳಿದರು.

    ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ನಾಡಿಗೆ ಬೆಳಕು ನೀಡುತ್ತಿರುವ ಈ ಕೇಂದ್ರವನ್ನು ತಲಕಾವೇರಿ ರೀತಿ ಅಭಿವೃದ್ಧಿಪಡಿಸಲು ತೀರ್ವನಿಸಲಾಗಿದೆ. ಕರೊನಾ ವೈರಸ್ ವಿಪತ್ತಿನ ನಡುವೆಯೂ ಈ ಕಾರ್ಯಕ್ಕೆ ಚಾಲನೆ ನೀಡಲು ವಿವಿಧ ಇಲಾಖೆಗಳ ಸಹಕಾರವೂ ಕಾರಣ. ಒಂದು ವರ್ಷದಲ್ಲಿ ನಿರ್ಮಾಣ ಕಾರ್ಯ ಪೂರ್ಣವಾಗಲಿದೆ ಎಂದು ತಿಳಿಸಿದರು.

    ಶಿವಮೊಗ್ಗ ಜಿಲ್ಲೆಗೆ ಅರ್ಧಪಾಲು ಅನುದಾನ: ರಾಜ್ಯ ಸರ್ಕಾರದ ಅನುದಾನದಲ್ಲಿ ಅರ್ಧ ಪಾಲು ಹಣ ಶಿವಮೊಗ್ಗ ಜಿಲ್ಲೆ ಒಂದಕ್ಕೆ ಸಂದಾಯವಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು. ಜಿಲ್ಲೆಯ ಪ್ರವಾಸೋದ್ಯಮ ಮತ್ತು ಧಾರ್ವಿುಕ ಕೇಂದ್ರಗಳಿಗೆ 28 ಕೋಟಿ ರೂ. ನೀಡಿದ್ದೇನೆ. ಇದರಲ್ಲಿ ಅಂಬುತೀರ್ಥಕ್ಕೆ 1.81 ಕೋಟಿ, ಅಕ್ಕಮಹಾದೇವಿ ಸ್ಥಳಕ್ಕೆ 5 ಕೋಟಿ, ಉಡುತಡಿಗೆ 3 ಕೋಟಿ, ಕವಲೇದುರ್ಗಕ್ಕೆ 2 ಕೋಟಿ, ಹೊಸನಗರ ಮತ್ತು ನಗರ ಕೋಟೆ ಅಭಿವೃದ್ಧಿಗೆ ತಲಾ 1 ಕೋಟಿ ರೂ. ನೀಡಿರುವುದಾಗಿ ತಿಳಿಸಿದರು. ಮಲೆನಾಡಿನ ಜೀವವೈವಿಧ್ಯತೆಯನ್ನೇ ನಾಶಪಡಿಸುತ್ತಿರುವ ನೀಲಗಿರಿ ಮತ್ತು ಅಕೇಶಿಯಾ ಪ್ಲಾಂಟೇಶನ್ ವ್ಯವಸ್ಥೆಯನ್ನು ಬೇರುಸಹಿತ ಕಿತ್ತೊಗೆಯಬೇಕಿದೆ. ಬೀಜ ಬಿಸಾಕಿದರೆ ಮೊಳಕೆಯೊಡೆಯವ ಸತ್ವಯುತವಾದ ಈ ಮಣ್ಣಿನಲ್ಲಿ ಪರಿಸರಕ್ಕೆ ಮಾರಕವಾಗಿರುವ ಸಸ್ಯಗಳಿಗೆ ಅವಕಾಶ ಕಲ್ಪಿಸಬಾರದು ಎಂದರು.

    ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಬೆಳಕಿನ ನದಿಯ ಇತಿಹಾಸದಲ್ಲಿ ಇಂದು ನೆನಪಿಡುವ ದಿನವಾಗಿದ್ದು ನದಿಯ ಉಗಮ ಸ್ಥಾನದ ಕಾಯಕಲ್ಪಕ್ಕೆ ಚಾಲನೆ ದೊರೆತಿದೆ. ಅಂದಾಜು 25 ಕೋಟಿ ರೂಗಳ ವೆಚ್ಚದಲ್ಲಿ ನಿರ್ವಣಗೊಳ್ಳಲಿರುವ ಈ ಕಾಮಗಾರಿಯಲ್ಲಿ ಶಿಲಾಮಯವಾದ ದೇವಾಲಯ ನಿರ್ವಣಗೊಳ್ಳಲಿದೆ ಎಂದು ಹೇಳಿದರು. ಈ ಧಾರ್ವಿುಕ ಕೇಂದ್ರಕ್ಕೆ ಆಗಮಿಸುವ ಯಾತ್ರಾರ್ಥಿಗಳು ತಂಗಲು ಸಮುದಾಯ ಭವನ ನಿರ್ವಣ, ದೇವಸ್ಥಾನದ ಹಿಂಭಾಗದ ಬೆಟ್ಟಕ್ಕೆ ರಕ್ಷಣಾ ಗೋಡೆ ಹಾಗೂ ಕೆರೆಗಳ ಅಭಿವೃದ್ಧಿ ಕೂಡ ಆಗಬೇಕಿದೆ. ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಮಳೆಗಾಲ ಆರಂಭವಾಗಿರುವ ಕಾರಣ ಮಳೆ ನಿಲ್ಲುವವರೆಗೆ ಡಾಂಬರೀಕರಣ ಮಾಡದಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ಶರಾವತಿ ನದಿಯ ಮೂಲಸ್ಥಾನದ ಸಮೀಪದಲ್ಲಿರುವ ಮೊದಲ ಜಲಪಾತವಾದ ಅಚ್ಚಕನ್ಯೆ ಫಾಲ್ಸ್​ಗೆ ಪ್ರವಾಸೋದ್ಯಮ ಇಲಾಖೆಯಿಂದ 35 ಲಕ್ಷ ರೂ. ಮಂಜೂರಾಗಿದೆ ಎಂದು ತಿಳಿಸಿದರು.

    ಮಾಜಿ ಸಚಿವ ಜೀವಿಜಯ, ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಜಿಪಂ ಸದಸ್ಯೆ ಅಪೂರ್ವಾ ಶರಧಿ, ತಾಪಂ ಸದಸ್ಯೆ ಲಕ್ಷ್ಮೀ, ಗ್ರಾಪಂ ಅಧ್ಯಕ್ಷ ಧರಣೇಶ್, ಡಿಸಿ ಕೆ.ಬಿ.ಶಿವಕುಮಾರ್, ಜಿಪಂ ಸಿಇಒ ಎಂ.ಎಲ್.ವೈಶಾಲಿ, ಅ.ಪ.ರಾಮಭಟ್, ತಹಸೀಲ್ದಾರ್ ಡಾ. ಎಸ್.ಬಿ.ಶ್ರೀಪಾದ, ಇಒ ಆಶಾಲತಾ, ಡಾ. ಮುರಳೀಧರ ಕಿರಣಕೆರೆ ಇದ್ದರು.

    ಜನರ ಭಾವನೆಗಳಿಗೆ ಸ್ಪಂದಿಸುತ್ತಿರುವ ಕೇಂದ್ರ ಸರ್ಕಾರ ದುಡಿಯುವ ಕೈಗಳಿಗೆ ಒಂದು ಲಕ್ಷ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಳೆದ ಸಾಲಿನ ನೆರೆಯಿಂದ ಹಾಳಾದ ರಸ್ತೆ ದುರಸ್ತಿಗೆ 1,500 ಕೋಟಿ ರೂ., ಮನೆಹಾನಿ ಸಲುವಾಗಿ 10 ಸಾವಿರ ಕೋಟಿ ರೂ. ಕೂಡ ಬಿಡುಗಡೆ ಮಾಡಿದೆ.

    |ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts