More

    ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೈಟೆಕ್ ಸ್ಪರ್ಶ, ಶಾಸಕ ನಿಸರ್ಗ ನಾರಾಯಣಸ್ವಾಮಿ ಭರವಸೆ, 9 ಕೋಟಿ ರೂ. ಅನುದಾನಕ್ಕೆ ಬೇಡಿಕೆ

    ವಿಜಯಪುರ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರವನ್ನು ಹೈಟೆಕ್ ಆಸ್ಪತ್ರೆಯಾಗಿ ಪರಿವರ್ತಿಸಲಾಗುವುದು. ಇದಕ್ಕಾಗಿ ಸರ್ಕಾರಕ್ಕೆ 9 ಕೋಟಿ ರೂ. ಅನುದಾನ ನೀಡುವಂತೆ ಬೇಡಿಕೆ ಇಡಲಾಗಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

    ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಮೀಪದ ವಿದ್ಯಾರ್ಥಿನಿಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಮುದಾಯ ಆರೋಗ್ಯ ಕೇಂದ್ರದ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.

    ಆರೋಗ್ಯ ಕೇಂದ್ರಕ್ಕೆ ನೀರಿನ ಕೊರತೆಯಾಗದಂತೆ ಕೊಳವೆಬಾವಿ ಕೊರೆಸಲು ಕ್ರಿಯಾಯೋಜನೆ ತಯಾರಿಸಲು ನೀರಾವರಿ ವಿಭಾಗದ ಎಇಇ ಸೋಮಶೇಖರ್ ಅವರಿಗೆ ಸೂಚಿಸಿದರು.
    15ನೇ ಹಣಕಾಸು ಯೋಜನೆಯಡಿ ಆಸ್ಪತ್ರೆಯಲ್ಲಿನ ವಿದ್ಯುತ್ ವೈರಿಂಗ್ ಬದಲಾವಣೆ, ಆಸ್ಪತ್ರೆಯ ಆವರಣದಲ್ಲಿರುವ ಶವಾಗಾರಕ್ಕೆ ರಸ್ತೆ ನಿರ್ಮಾಣವಾಗಬೇಕು. ಆಸ್ಪತ್ರೆಯಿಂದ ಬಸ್ ನಿಲ್ದಾಣದವರೆಗೆ ವಿದ್ಯುತ್‌ದೀಪಗಳನ್ನು ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
    ಶವಾಗಾರದ ಬಳಿ ಶೆಡ್ ನಿರ್ಮಾಣಕ್ಕಾಗಿ ಸಂಸದರ ನಿಧಿಯಿಂದ 10 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಆದರೂ ಈವರೆಗೆ ಕಾಮಗಾರಿ ಆರಂಭವಾಗಿಲ್ಲ ಏಕೆ ಎಂದು ದೂರವಾಣಿ ಮೂಲಕ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

    ಆಸ್ಪತ್ರೆಯನ್ನು ವಾರಕ್ಕೊಮ್ಮೆ ಪುರಸಭೆಯ ಸಫಾಯಿ ಕರ್ಮಚಾರಿಗಳಿಂದ ಸ್ವಚ್ಛಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿ ಎ.ಬಿ. ಪ್ರದೀಪ್‌ಕುಮಾರ್ ಅವರಿಗೆ ಸೂಚಿಸಿದರು.

    ಔಷಧ ಕಾರ್ಖಾನೆ ಒತ್ತಡಕ್ಕೆ ಮಣಿಯಲಿಲ್ಲ: ಹೋಬಳಿಯ ಬೈರಾಪುರ ಔಷಧ ಕಾರ್ಖಾನೆಯ ಪುನರಾರಂಭಕ್ಕೆ ಕಾರ್ಖಾನೆಯ ಮಾಲೀಕರಿಂದ ಸಾಕಷ್ಟು ಒತ್ತಡ ಬಂದಿತ್ತು. ಸ್ವತಃ ಎಚ್.ಡಿ. ದೇವೇಗೌಡ ಅವರೇ ಕರೆದು ಮಾತನಾಡಿ, ಕ್ಷೇತ್ರದ ಜನತೆಗೆ ಉಪಯೋಗವಿಲ್ಲದೆ ಯಾವುದೇ ಕೆಲಸಕ್ಕೂ ಒಪ್ಪಿಕೊಳ್ಳಬೇಡಿ ಎಂದು ಹೇಳಿದ್ದರು. ಅವರ ಸೂಚನೆಯಂತೆ ಈ ವಿಷಯದಲ್ಲಿ ಸ್ಪಷ್ಟ ನಿಲುವು ತೆಳೆದಿದ್ದೇನೆ. ಬೆಂಗಳೂರಿನ ಪಂಚತಾರಾ ಹೋಟೆಲ್‌ಗೆ ನನ್ನನ್ನು ಕರೆಯಿಸಿಕೊಂಡಿದ್ದ ಕಾರ್ಖಾನೆಯ ಮಾಲೀಕ, ಏನು ಕೇಳಿದರೂ ಕೊಡುವುದಾಗಿ ಹೇಳಿದರು. ಅದಕ್ಕೆ ನಾನು ಒಪ್ಪಲಿಲ್ಲ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

    ಸರ್ಕಾರದಿಂದ ಆಸ್ಪತ್ರೆಗೆ ಬಂದಿರುವ ಅನುದಾನಗಳ ಕುರಿತು ಆಡಳಿತಾಧಿಕಾರಿ ಡಾ. ಶ್ಯಾಂಸುಂದರ್ ಲೆಕ್ಕಪತ್ರ ವರದಿ ಮಂಡಿಸಿದರು.
    ಸಮುದಾಯ ಆರೋಗ್ಯ ಕೇಂದ್ರದ ಡಾ. ಉದಯ್ ಕುಮಾರ್, ಸಹಾಯಕರಾದ ರೂಪಾ, ವೀಣಾ, ಸುಮಾ, ಜಿಪಂ ಇಂಜಿನಿಯರಿಂಗ್ ವಿಭಾಗದ ಎಇಇ ಸಂಗ್ರಾಮ್ ಹಲಬುರ್ಗಿ, ನೀರಾವರಿ ವಿಭಾಗದ ಎಇಇ ಸೋಮಶೇಖರಯ್ಯ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್. ಭಾಸ್ಕರ್, ಮುಖಂಡರಾದ ಬೈರಾಪುರ ರಾಜಣ್ಣ, ಎಂ.ಡಿ. ರಾಮಚಂದ್ರಪ್ಪ, ಅಶ್ವತ್ಥಪ್ಪ, ವಿರೂಪಾಕ್ಷಪ್ಪ, ಪುರಸಭಾ ಸದಸ್ಯೆ ವಿಮಲಾ, ಬೆಸ್ಕಾಂ ಎಇಇ ಶ್ರೀನಿವಾಸ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts