More

    ಸಮೀಕ್ಷೆ ಮುಗಿಸಿ ಪರಿಹಾರ ನೀಡಿ

    ಬೆಳಗಾವಿ: ಈಚೆಗೆ ಅತಿವೃಷ್ಟಿಯಿಂದ ಬೆಳೆಹಾನಿಯಾಗಿರುವ ಕುರಿತು ಜಂಟಿ ಸಮೀಕ್ಷೆ ಪೂರ್ಣಗೊಂಡ ತಕ್ಷಣವೇ ಪರಿಹಾರ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು. ಸುವರ್ಣ ವಿಧಾನ ಸೌಧದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೃಷಿ ಇಲಾಖೆಯ ಬೆಳಗಾವಿ ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಸಿಬ್ಬಂದಿ ಕೊರತೆ, ಮತ್ತಿತರ ನೆಪ ಹೇಳಿ ಬೆಳೆಹಾನಿ ಪರಿಹಾರ ನೀಡುವ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಈಗಾಗಲೇ ನಿರ್ದೇಶನ ನೀಡಿರುವಂತೆ ಎಲ್ಲ ಜಿಲ್ಲೆಗಳಲ್ಲಿ ಹೆಸರು, ಉದ್ದು ಖರೀದಿ ಕೇಂದ್ರಗಳನ್ನು ಆರಂಭಿಸಿ ರೈತರ ನೋಂದಣಿ ಜತೆ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದೂ ಸೂಚನೆ ನೀಡಿದರು.
    ರೈತರ ಮೂಲಕ ಸಮೀಕ್ಷೆಗೆ ಸೂಚನೆ: ಇಲಾಖೆ ಅಭಿವೃದ್ಧಿಪಡಿಸಿರುವ ಆಪ್ ಮೂಲಕ ರೈತರೇ ಸ್ವತಃ ಬೆಳೆಸಮೀಕ್ಷೆ ಮಾಡಲು ಪ್ರೋತ್ಸಾಹ ನೀಡಬೇಕು. ಬೆಳೆವಿಮೆ ಪರಿಹಾರ ಕ್ಲೇಮು ಪ್ರಕರಣ ಇತ್ಯರ್ಥಪಡಿಸಬೇಕು. ವಿಮೆ ಕಂಪನಿ ಜತೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು. ಬೆಳೆಹಾನಿ ಸಂಭವಿಸಿದ ಪ್ರದೇಶಗಳಲ್ಲಿ ಪ್ರತಿ ರೈತನಿಗೂ ಸೂಕ್ತ ಪರಿಹಾರ ದೊರಕಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದರು.

    ಪಿಎಂ- ಕಿಸಾನ್ ಯೋಜನೆಯಡಿ ರೈತರ ಇ-ಕೆವೈಸಿ ಜೋಡಣೆಗೆ ಎಲ್ಲ ಅಧಿಕಾರಿಗಳು ಪ್ರಯತ್ನಿಸಬೇಕು. ಸೆ.7 ಕೊನೆಯ ದಿನವಾಗಿರುವುದರಿಂದ ಬಾಕಿ ಉಳಿದ ರೈತರ ಇ-ಕೆವೈಸಿ ಮಾಡಬೇಕು ಎಂದು ತಿಳಿಸಿದರು. ಇ-ಕೆವೈಸಿ ಜೋಡಣೆಯಲ್ಲಿ ಬೆಳಗಾವಿ ಜಿಲ್ಲೆ ಅತ್ಯುತ್ತಮ ಸಾಧನೆ ಮಾಡಿದೆ. ಇದನ್ನೇ ಮಾದರಿಯಾಗಿಟ್ಟುಕೊಂಡು ಉಳಿದ ಜಿಲ್ಲೆಯವರು ಕೆವೈಸಿ ಮಾಡಿಸಬೇಕು. ನಿರೀಕ್ಷಿತ ಪ್ರಗತಿ ಸಾಧಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
    ರಸಗೊಬ್ಬರ ದಾಸ್ತಾನು ಇರುವುದರಿಂದ ನಿಗದಿತ ಅವಧಿಯಲ್ಲಿ ಪಿಓಎಸ್ ಮೂಲಕ ರೈತರಿಗೆ ವಿತರಣೆ ಮಾಡಬೇಕು. ರಸಗೊಬ್ಬರ ಸಮರ್ಪಕವಾಗಿ ಸರಬರಾಜು ಮಾಡದ ಪಿಓಎಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

    ರಸಗೊಬ್ಬರ ಗುಣ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆಯಾ ಜಿಲ್ಲೆಗಳಿಗೆ ನೀಡಲಾಗಿರುವ ವಾರ್ಷಿಕ ಗುರಿ ಪ್ರಕಾರ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಬೇಕು. ರಸಗೊಬ್ಬರ ಗುಣ ನಿಯಂತ್ರಣ, ಬೆಳೆಹಾನಿ ಸಮೀಕ್ಷೆ, ಪರಿಹಾರ ವಿತರಣೆ ಸೇರಿ ಬಹುತೇಕ ಕೆಲಸಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ ಜಿಲ್ಲೆಯ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ತಿಳಿಸಿದರು. 4-5 ದಿನಗಳಲ್ಲಿ ಸಮೀಕ್ಷೆ ಮುಗಿಸಿ: ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಕಳಸದ ಮಾತನಾಡಿ, ಅನೇಕ ಜಿಲ್ಲೆಗಳಲ್ಲಿನ ಬೆಳೆಹಾನಿ ವಿವರವನ್ನು ಈಗಾಗಲೇ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿರುವುದರಿಂದ ಪರಿಹಾರ ಅನುಮೋದನೆ ನೀಡುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಅವರಿಂದ ಶೀಘ್ರದಲ್ಲೇ ಚಾಲನೆ ಕೊಡಿಸಲಾಗುವುದು.

    ಬೆಳೆಹಾನಿ ಜಂಟಿ ಸಮೀಕ್ಷೆಗೆ ಆದ್ಯತೆ ನೀಡಬೇಕು. 4-5 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಿ ಆದಷ್ಟು ಬೇಗ ರೈತರಿಗೆ ಪರಿಹಾರ ತಲುಪಿಸಬೇಕು. ಎಸ್.ಡಿ.ಆರ್.ಎಫ್. ಪ್ರಕಾರ ಪರಿಹಾರವನ್ನು ದ್ವಿಗುಣಗೊಳಿಸಲಾಗಿದೆ. ಆ ಪ್ರಕಾರವೇ ಡೇಟಾ ಅಪ್‌ಲೋಡ್ ಮಾಡಬೇಕು ಎಂದರು.ಕೃಷಿ ಇಲಾಖೆ ನಿರ್ದೇಶಕರಾದ ನಂದಿನಿಕುಮಾರಿ ಮಾತನಾಡಿ, ರಾಜ್ಯಾದ್ಯಂತ ವಾಡಿಕೆ ಮಳೆಗಿಂತ ಅಧಿಕ ಮಳೆಯಾಗಿದೆ. ನಿಗದಿತ ಕೃಷಿ ಕ್ಷೇತ್ರದಲ್ಲಿ ಶೇ.90ರಷ್ಟು ಬಿತ್ತನೆಯಾಗಿದೆ. ಇತ್ತೀಚಿನ ಅತಿವೃಷ್ಟಿಯಿಂದ ರಾಜ್ಯದಲ್ಲಿ ಒಟ್ಟಾರೆ 5 ಲಕ್ಷಕ್ಕೂ ಅಧಿಕ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ಜಂಟಿ ಸಮೀಕ್ಷೆ ಬಹುತೇಕ ಪೂರ್ಣಗೊಂಡಿದೆ ಎಂದು ವಿವರಿಸಿದರು.

    ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಜಂಟಿ ಸಮೀಕ್ಷೆ ಪೂರ್ಣಗೊಂಡಿದೆ. ಪರಿಹಾರ ಪೋರ್ಟಲ್‌ನಲ್ಲಿ ಈಗಾಗಲೇ ಮಾಹಿತಿ ಅಪ್‌ಲೋಡ್ ಮಾಡಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳ ಜತೆಗೆ ಸಹಾಯಕ ಕೃಷಿ ಅಧಿಕಾರಿಗಳಿಗೂ ಲಾಗಿನ್ ಐಡಿ ಒದಗಿಸಿದರೆ ಪರಿಹಾರ ಪ್ರಕ್ರಿಯೆ ಚುರುಕುಗೊಳಿಸಬಹುದು ಎಂದು ಸಲಹೆ ನೀಡಿದರು. ಜಿಪಂ ಸಿಇಒ ಎಚ್.ವಿ. ದರ್ಶನ್ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts