More

    ಸಮಸ್ಯೆ ಬಗೆಹರಿಸದಿದ್ದರೆ ಸಿಎಂ ಮನೆಗೆ ಜಾಥಾ, ದಲಿತ ಸಂಘಟನೆಯ ಮುಖ್ಯಸ್ಥ ಬಿ.ಆರ್. ಭಾಸ್ಕರ್ ಪ್ರಸಾದ್ ಎಚ್ಚರಿಕೆ

    ನೆಲಮಂಗಲ: ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಸೇರಿದ ಸಾಕಷ್ಟು ಸಮಸ್ಯೆಗಳು ಹಲವು ವರ್ಷಗಳಿಂದ ಪರಿಹಾರ ಕಾಣದೆ ನನೆಗುದಿಗೆ ಬಿದ್ದಿವೆ. ಅವುಗಳನ್ನು ಮಾ.14ರೊಳಗೆ ಪರಿಹರಿಸಬೇಕು. ಇಲ್ಲವಾದರೆ, ತಾಲೂಕು ಕಚೇರಿಯಿಂದ ಸಿಎಂ ಮನೆಯವರೆಗೆ ಅರೆಬೆತ್ತಲೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳುವುದಾಗಿ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಆರ್. ಭಾಸ್ಕರ್ ಪ್ರಸಾದ್ ಎಚ್ಚರಿಕೆ ನೀಡಿದರು.

    ಇತ್ತೀಚೆಗೆ ನಿಗದಿಯಾಗಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆ ಸಭೆ ರದ್ದಾದ ಹಿನ್ನೆಲೆಯಲ್ಲಿ ಮಂಗಳವಾರ ತಾಲೂಕು ಕಚೇರಿಗೆ ಭೇಟಿ ನೀಡಿದ್ದ ಉಪವಿಭಾಗಾಧಿಕಾರಿ ಅರುಳ್ ಕುಮಾರ್ ಅವರಿಗೆ ಅಹವಾಲು ಸಲ್ಲಿಸಿ ಮಾತನಾಡಿದರು.

    ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಅವರು ಕೆಲ ಭ್ರಷ್ಟ ಅಧಿಕಾರಿಗಳೊಂದಿಗೆ ಶಾಮೀಲಾಗಿ ಪ್ರಭಾವಿ ವ್ಯಕ್ತಿಗಳ ಪರ ನಿಂತಿದ್ದಾರೆ. ಅಕ್ರಮದ ವಿರುದ್ಧ ಧ್ವನಿ ಎತ್ತುವ ದಲಿತ ಮುಖಂಡರಿಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ ಎಂದು ದೂರಿದರು. ಮುಖಂಡರಾದ ಬೊಮ್ಮನಹಳ್ಳಿ ನಾಗರಾಜು, ನಂದಕುಮಾರ್, ಮಹದೇವ್, ಗಂಗಾಧರ್, ಪೂಜಾ ವೆಂಕಟಪ್ಪ, ಛಲವಾದಿ ನಾಗೇಂದ್ರ, ಬ್ಯಾಡರಹಳ್ಳಿ ಲೋಕೇಶ್ ಮತ್ತಿತರರು ಇದ್ದರು.

    ಸಮುದಾಯದ ಬೇಡಿಕೆಗಳು: ನಗರಸಭೆ ವ್ಯಾಪ್ತಿಯಲ್ಲಿ ಸರ್ವೇ ನಂ.246ರ 1 ಎಕರೆ 2 ಗುಂಟೆ ಬಂಡಿಮಾರ್ಗ ಜಾಗವನ್ನು ಡಾ. ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ ಮಂಜೂರು ಮಾಡಬೇಕು. ನಗರದ ಜಯನಗರದ ಪರಿಶಿಷ್ಟ ಜಾತಿ ಜನರು ವಾಸಿಸುತ್ತಿದ್ದ ಪ್ರದೇಶದಲ್ಲಿ ಬಾರ್ ಮಳಿಗೆಗಳ ತೆರವು, ಸರ್ವೇ ನಂ.29ರಲ್ಲಿರುವ 5 ಎಕರೆ ಜಾಗದ ರಕ್ಷಣೆ ಸೇರಿ ಹಲವು ಬೇಡಿಕೆ ಪಟ್ಟಿಯನ್ನು ಉಪವಿಭಾಗಾಧಿಕಾರಿ ಅವರಿಗೆ ಸಲ್ಲಿಸಲಾಯಿತು.

    ಜಿಲ್ಲಾಧಿಕಾರಿ ನಿರ್ದೇಶನದಂತೆ ಅಹವಾಲು ಆಲಿಸಲು ಸಭೆ ಆಯೋಜಿಸಲಾಗಿದೆ. ದಲಿತ ಮುಖಂಡರ ಬೇಡಿಕೆಗಳನ್ನು ಪಟ್ಟಿಮಾಡಲಾಗಿದೆ. ಡಿಸಿ ಅವರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಕುಂದುಕೊರತೆ ಸಭೆಗೆ ಹಾಜರಾಗದ ಅಧಿಕಾರಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದು, ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು.
    ಅರುಳ್‌ಕುಮಾರ್, ಉಪವಿಭಾಗಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts