More

    ಸಮಸ್ಯೆಗಳ ಸರಮಾಲೆ ತೆರೆದಿಟ್ಟ ಕೆಡಿಪಿ

    ಬೆಳಗಾವಿ: ಕ್ಷೇತ್ರದಲ್ಲಿ ಕುಡಿಯುವ ನೀರು, ವಿದ್ಯುತ್, ರಸಗೊಬ್ಬರ ಸಮಸ್ಯೆ ಹೆಚ್ಚಿದೆ. ಅತಿವೃಷ್ಟಿಯಿಂದ ಹಾನಿಯಾಗಿರುವ ಮನೆಗಳಿಗೆ ಸೂಕ್ತ ಪರಿಹಾರವೂ ಸಿಗುತ್ತಿಲ್ಲ. ಬೆಳೆ ಹಾನಿ ಪರಿಹಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕೋವಿಡ್-19ನಿಂದ ಮೃತಪಟ್ಟವರಿಗೆ ಮರಣ ಪ್ರಮಾಣ ಪತ್ರವೂ ಸಿಗುತ್ತಿಲ್ಲ ಎಂದು ಸಚಿವರು, ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಗರದ ಸುವರ್ಣ ವಿಧಾನಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಗುರುವಾರ ಜರುಗಿದ 2021-22ನೇ ಸಾಲಿನ ಕೆಡಿಪಿ ಮೊದಲನೇ ತ್ರೈಮಾಸಿಕ ಸಭೆಯಲ್ಲಿ ಜನಪ್ರತಿನಿಧಿಗಳು ಅಸಮಾಧಾನ ಹೊರಹಾಕಿದರು.

    2019-20ರಲ್ಲಿ ಸಂಭವಿಸಿದ್ದ ಅತಿವೃಷ್ಟಿಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆಹಾನಿಯಾಗಿದ್ದರೂ ಪರಿಹಾರ ಸಿಕ್ಕಿಲ್ಲ. ಎರಡು ವರ್ಷ ಕಳೆದರೂ
    ಮನೆ ಕಳೆದುಕೊಂಡವರಿಗೆ ಪರಿಹಾರ ಸಿಗುತ್ತಿಲ್ಲ. ವಿದ್ಯುತ್ ಪರಿವರ್ತಕ (ಟಿಸಿ) ಹಾಳಾದರೆ ತಿಂಗಳು ಕಳೆದರೂ ಅಳವಡಿಸದೆ ರೈತರು ಪರದಾಡುತ್ತಿದ್ದಾರೆ. ಹಾಳಾಗಿರುವ ಸೇತುವೆಗಳ ದುರಸ್ತಿ ಕಾಮಗಾರಿಯನ್ನೂ ಕೈಗೊಂಡಿಲ್ಲ ಎಂದು ಜಿಲ್ಲೆಯ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

    ಯೋಜನೆ ಪೂರ್ಣಗೊಳಿಸಿ: ಶಾಸಕರುಗಳು ಸಮಸ್ಯೆಗಳ ಸರಮಾಲೆ ಬಿಚ್ಚಿದ ಬಳಿಕ ಮಾತನಾಡಿದ ಡಿಸಿಎಂ, ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರಿಗೂ ಕುಡಿಯುವ ನೀರು ಲಭಿಸುವಂತಾಗಲು ಜಲಜೀವನ ಮಿಷನ್ ಯೋಜನೆಯಡಿ ರಾಜ್ಯಕ್ಕೆ 5 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಹೀಗಾಗಿ ಕುಡಿಯುವ ನೀರು ಒದಗಿಸುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಅಲ್ಲದೆ, 2022ರ ಮಾರ್ಚ್ 30ರ ಒಳಗಾಗಿ ಈ ಯೋಜನೆ ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

    ಗೊಬ್ಬರ ದಾಸ್ತಾನು: ಗೊಬ್ಬರ ಮಾರಾಟಕ್ಕೆ ಸಹಕಾರಿ ಸಂಸ್ಥೆಗಳಿಗೆ ಮುಕ್ತವಾಗಿ ಲೈಸೆನ್ಸ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 85 ಸಾವಿರ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ. ಸಮರ್ಪಕ ಪೂರೈಕೆಗೆ ಅನುಕೂಲವಾಗುವಂತೆ ರೈತರ ನೇತೃತ್ವದ ಪಿಕೆಪಿಎಸ್‌ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಲೈಸೆನ್ಸ್ ನೀಡಲು ಕ್ರಮ ವಹಿಸಲಾಗಿದೆ. ಸಹಕಾರಿ ಸಂಘಗಳಿಗೆ ಗೊಬ್ಬರ ಮಾರಾಟಕ್ಕೆ ಲೈಸೆನ್ಸ್ ನೀಡುವಾಗ ಯಾವುದೇ ರೀತಿಯ ಷರತ್ತು ಹಾಕಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ವಿದ್ಯುತ್ ಪೂರೈಕೆಗೆ ಕ್ರಮ: ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆಗೆ ಸಂಬಂಧಿಸಿದಂತೆ ಸೂಕ್ತ ಜಾಗ ಗುರುತಿಸಬೇಕು. ಸರ್ಕಾರಿ ಜಾಗ ಲಭ್ಯವಿದ್ದರೆ ಜಿಲ್ಲಾಧಿಕಾರಿಗಳು ತಕ್ಷಣವೇ ಮಂಜೂರು ಮಾಡುತ್ತಾರೆ. ಒಂದು ಖಾಸಗಿ ಜಾಗ ಗುರುತಿಸಿದರೂ ಖರೀದಿಗೆ ಅನುಮತಿ ನೀಡಲಾಗುವುದು. 33 ಕೆ.ವಿ. ವಿದ್ಯುತ್ ಸ್ಟೇಷನ್‌ಗಳನ್ನು 110 ಕೆ.ವಿ.ಗೆ ಉನ್ನತೀಕರಿಸಲು ಶಾಸಕರು ಜಾಗ ಒದಗಿಸಿಕೊಟ್ಟರೆ ಕ್ರಮ
    ಕೈಗೊಳ್ಳಲಾಗುವುದು ಎಂದು ಸಚಿವ ಕಾರಜೊಳ ಭರವಸೆ ನೀಡಿದರು.

    ನೀರಿನ ಸಮಸ್ಯೆ ಪರಿಹರಿಸಿ: ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಹೆಸ್ಕಾಂ ಮತ್ತು ಗ್ರಾಮೀಣ ಕುಡಿಯುವ ನೀರು ವಿಭಾಗ ಇಂಜಿನಿಯರ್‌ಗಳ ನಡುವೆ ಸಮನ್ವಯ ಕೊರತೆ ಹಾಗೂ ನಿರ್ಲಕ್ಷೃದಿಂದಾಗಿ ಮುರಗೋಡ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ಪದೇಪದೆ ವ್ಯತ್ಯಯವಾಗುತ್ತಿದೆ. ಕ್ಷೇತ್ರದಲ್ಲಿ ಕೋವಿಡ್-19 ಸೋಂಕಿನಿಂದ ಮನೆಗಳಲ್ಲಿಯೇ ಮೃತರಾದವರ ಕುಟುಂಬಗಳಿಗೂ ಸರ್ಕಾರದ ಪರಿಹಾರ ಧನ ದೊರಕಿಸಲು ನಿಯಮಾವಳಿಗಳಲ್ಲಿ ಪರಿಷ್ಕರಣೆ ಮಾಡಬೇಕು. ಅಲ್ಲದೆ, ತ್ವರಿತವಾಗಿ ಪ್ರಮಾಣ ಪತ್ರ ನೀಡಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕಾರಜೋಳ, ಮುರಗೋಡ ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ನಿರಂತರ ವಿದ್ಯುತ್ ಒದಗಿಸಲು ಅಗತ್ಯವಿರುವ ಎಕ್ಸ್‌ಪ್ರೆಸ್ ಫೀಡರ್ ಲೈನ್ ನಿರ್ಮಿಸಿ ಕೊಡಬೇಕು. ಇದಕ್ಕಾಗಿ 35 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೆಸ್ಕಾಂ ಮತ್ತು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

    ಸಂಸದೆ ಮಂಗಲ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಸತೀಶ ಜಾರಕಿಹೊಳಿ, ದುರ್ಯೋಧನ ಐಹೊಳೆ, ಶಾಸಕ ಪಿ.ರಾಜೀವ, ಅಭಯ ಪಾಟೀಲ, ಮಹಾಂತೇಶ ದೊಡ್ಡಗೌಡರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಯೋಜನೆ ಅನುಷ್ಠಾನಗೊಳಿಸಿ

    ಖಾನಾಪುರ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ ಅನುಕೂಲ ಕಲ್ಪಿಸಬೇಕು. ನೈಸರ್ಗಿಕವಾಗಿ ಹರಿಯುವ ನೀರು ಸಂಗ್ರಹಕ್ಕೆ ಸಣ್ಣ ಪ್ರಮಾಣದ ಜಲಾಶಯ ನಿರ್ಮಿಸಬೇಕು. ವರ್ಷ ಕಳೆದರೂ ಖಾನಾಪುರದಲ್ಲಿ ಒಂದೇಒಂದು ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನ ಆಗಿಲ್ಲ. ಬೀಡಿ ಗ್ರಾಮವೂ ಸೇರಿದಂತೆ ಮೂರು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಮಂಜೂರಾತಿ ನೀಡಬೇಕು ಎಂದು ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ವಿನಂತಿಸಿದರು.

    ನೀರು ಪೂರೈಕೆಯಲ್ಲಿ ವ್ಯತ್ಯಯ ಸಲ್ಲದು

    ಧಾರವಾಡ ಜಿಲ್ಲೆಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯ ಗ್ರಾಮಗಳ ರೈತರಿಗೆ ಬೆಳೆವಿಮೆ ಪರಿಹಾರ ನಿಗದಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಈ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರೂ ಪ್ರಯೋಜನವಾಗುತ್ತಿಲ್ಲ. ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಯರಗಟ್ಟಿ ಗ್ರಾಮಕ್ಕೆ ನೀರು ಪೂರೈಕೆಯಲ್ಲಿ ಪದೇಪದೆ ವ್ಯತ್ಯಯವಾಗುತ್ತಿದೆ. ಪಂಪ್‌ಸೆಟ್‌ಗಳ ದುರಸ್ತಿ, ನಿರ್ವಹಣೆ ಸಮಸ್ಯೆಯಿಂದ ನೀರು ಪೂರೈಕೆಯಲ್ಲಿ ವ್ಯತ್ಯಯಾಗುತ್ತಿದೆ ಎಂದು ಅಧಿಕಾರಿಗಳು ಉತ್ತರ ನೀಡುತ್ತಿದ್ದಾರೆ. ತಕ್ಷಣವೇ ಈ ಸಮಸ್ಯೆ ಪರಿಹರಿಸಬೇಕು. ಮತ್ತೆ ಇದು ಮರುಕಳಿಸದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಸೂಚಿಸಿದರು.

    ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾದರೆ ಪ್ರತಿ ರೈತರಿಗೂ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸಮರ್ಪಕವಾಗಿ ಸಮೀಕ್ಷೆ ಕಾರ್ಯ ನಡೆಸಬೇಕು. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಬೆಳೆಹಾನಿ ಪ್ರದೇಶಬಿಟ್ಟು ಬೇರೆ ಕಡೆ ಸಮೀಕ್ಷೆ ನಡೆಸಬೇಡಿ. ಹಾನಿಯಾದ ಪ್ರದೇಶಗಳಿಗೆ ಖುದ್ದು ಭೇಟಿ ನೀಡಬೇಕು.
    | ಶ್ರೀಮಂತ ಪಾಟೀಲ ಕೈಮಗ್ಗ, ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ

    ಕ್ಷೇತ್ರದಲ್ಲಿ ಕೋವಿಡ್-19ನಿಂದ ಮೃತಪಟ್ಟವರಿಗೆ ಮರಣ ಪ್ರಮಾಣ ಪತ್ರ, ಪರಿಹಾರ ಸಿಗುತ್ತಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕಳೆದ ವರ್ಷ ಅತಿವೃಷ್ಟಿಯಿಂದ ಹಾನಿಯಾಗಿರುವ 3 ಸೇತುವೆ ದುರಸ್ತಿಯಾಗಿಲ್ಲ. ಎಲ್ಲರಿಗೂ ಲಸಿಕೆ ನೀಡಲು ಕ್ರಮ ವಹಿಸಬೇಕು.
    | ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕಿ, ಬೆಳಗಾವಿ ಗ್ರಾಮೀಣ

    ಕೇಂದ್ರ ಸರ್ಕಾರದ ಜಲಜೀವನ ಮಿಷನ್ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಹೀಗಾಗಿ ಎಲ್ಲ ತಾಂತ್ರಿಕ ಅಂಶ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕು. ಯೋಜನೆ ಪೂರ್ಣಗೊಂಡ ಬಳಿಕ ನಿರ್ವಹಣೆ ಬಗ್ಗೆಯೂ ಗಮನದಲ್ಲಿಟ್ಟುಕೊಂಡು ಅನುಷ್ಠಾನಗೊಳಿಸಬೇಕು.
    | ಮಹಾಂತೇಶ ಕವಟಗಿಮಠ, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts