More

    ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

    ಶಿರಹಟ್ಟಿ: ನೀರಾವರಿ ಬೆಳೆ ಆಶ್ರಿತ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ತಾಲೂಕಿನ ವಡವಿ ಹೊಸೂರ, ರಣತೂರ, ಮಾಚೇನಹಳ್ಳಿ, ಹೆಬ್ಬಾಳ, ಬೆಳ್ಳಟ್ಟಿ, ದೇವಿಹಾಳ ಗ್ರಾಮದ ರೈತರು ಮಂಗಳವಾರ ಬೆಳ್ಳಟ್ಟಿ ವಿದ್ಯುತ್ ಪ್ರಸರಣ ಘಟಕದ ಎದುರು ಪ್ರತಿಭಟನೆ ನಡೆಸಿದರು.

    ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ರ್ಚಚಿಸಲು ಹೆಸ್ಕಾಂ ಕಚೇರಿಗೆ ಆಗಮಿಸಿದ್ದ ರೈತರು, ಕಾರ್ಯಾಲಯದಲ್ಲಿ ಯಾವೊಬ್ಬ ಸಿಬ್ಬಂದಿಯೂ ಇಲ್ಲದಿರುವುದನ್ನು ಖಂಡಿಸಿ ಪ್ರತಿಭಟನೆ ಕೈಗೊಂಡರು. ಈ ವೇಳೆ ಸ್ಥಳಕ್ಕಾಗಮಿಸಿದ ಪಿಎಸ್​ಐ ನವೀನ ಜಕ್ಕಲಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು. ಹೆಸ್ಕಾಂ ಎಇಇ ಮಹೇಶ ದೊಡ್ಡಮನಿ ಸ್ಥಳಕ್ಕಾಗಮಿಸಿ ರೈತರೊಂದಿಗೆ ರ್ಚಚಿಸಿದರು.

    ರಾಜೀವ ಬಮ್ಮನಕಟ್ಟಿ, ಹನುಮಂತಪ್ಪ ಕರೆಯತ್ತಿನ, ಮಲ್ಲೇಶ ಸಿದ್ದಾಪುರ, ಮುತ್ತಣ್ಣ ಕಲಕೇರಿ ಮಾತನಾಡಿ, ‘ದಿನವಿಡೀ ಪದೇಪದೆ ವಿದ್ಯುತ್ ಕಡಿತಗೊಳಿಸುವುದರಿಂದ ಬೆಳ್ಳಟ್ಟಿ ಸುತ್ತಲಿನ ವಡವಿ ಹೊಸೂರ, ರಣತೂರ, ಮಾಚೇನಹಳ್ಳಿ, ಹೆಬ್ಬಾಳ, ಬೆಳಗಟ್ಟಿ, ದೇವಿಹಾಳ ಗ್ರಾಮದ ರೈತರು ಬೆಳೆಗಳಿಗೆ ನೀರು ಹಾಯಿಸುವುದು ಕಷ್ಟವಾಗಿದೆ. ಸಮರ್ಪಕ ನೀರಿಲ್ಲದ ಕಾರಣ ಬಿಸಿಲ ಬೇಗೆಗೆ ಬೆಳೆಗಳು ಒಣಗುತ್ತಿವೆ. ಇದರಿಂದ ಬೆಳೆಗಾಗಿ ಮಾಡಿದ ಖರ್ಚು ಕೂಡ ವಾಪಸ್ ಬರುತ್ತದೋ ಇಲ್ಲವೋ ಎನ್ನುವ ಆತಂಕ ಎದುರಾಗಿದೆ. ಆದ್ದರಿಂದ ಹಗಲಲ್ಲಿ ಕನಿಷ್ಠ 3 ರಿಂದ 6 ತಾಸು ಹಾಗೂ ರಾತ್ರಿ 9ರಿಂದ ಬೆಳಗಿನ 6 ಗಂಟೆವರೆಗೆ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

    ಎಇಇ ಮಹೇಶ ಪ್ರತಿಕ್ರಿಯಿಸಿ, ‘ಈ ಭಾಗದಲ್ಲಿ ಬಹುತೇಕ ರೈತರು ನೀರಾವರಿ ಬೆಳೆಯಾಶ್ರಿತರಾಗಿದ್ದರಿಂದ ವಿದ್ಯುತ್ ಪ್ರಸರಣ ಘಟಕಕ್ಕೆ ಹೆಚ್ಚಿನ ಲೋಡ್ ಬೀಳುತ್ತದೆ. ಹೀಗಾಗಿ ವಿದ್ಯುತ್ ಕಡಿತ ಅನಿವಾರ್ಯವಾಗಿದೆ. ಹೀಗಾಗಿ ಹೆಬ್ಬಾಳ, ತಂಗೋಡ ಮಧ್ಯದಲ್ಲಿ ಮತ್ತೊಂದು 110 ಕೆವಿ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಪ್ರಸರಣ ಘಟಕ ಸ್ಥಾಪಿಸುವ ಸಂಬಂಧ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕೆ ಸೂಕ್ತ ಜಮೀನಿನ ಅವಶ್ಯಕತೆಯಿದೆ. ಯಾರಾದರೂ ರೈತರು ಜಮೀನು ಕೊಡಲು ಸಿದ್ಧರಾದರೆ ಸರ್ಕಾರ ನಿಗದಿ ಪಡಿಸಿದ ಮಾನದಂಡದಂತೆ ಜಮೀನು ಖರೀದಿಸಲಾಗುವುದು. ಹಿರಿಯ ಅಧಿಕಾರಿಯೊಂದಿಗೆ ಮಾತನಾಡಿ ಇನ್ನೆರಡು ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು’ ಎಂದರು.

    ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಬೆಳ್ಳಟ್ಟಿ ವಿದ್ಯುತ್ ಪ್ರಸರಣ ಘಟಕಕ್ಕೆ ಬೀಗ ಜಡಿದು ತೀವ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು. ಅಶೋಕರಡ್ಡಿ ಹುಲ್ಲೂರ, ಸುಭಾಸ ಕೊಂಚಿಗೇರಿ, ಸುರೇಶ ಹುಲ್ಲೂರ, ಮೃತ್ಯುಂಜಯ ಕಲಕೇರಿ, ನಾಗರಾಜ ವಡ್ಡಟ್ಟಿ, ಹನುಮಂತ ಬಾಲೇಹೊಸೂರ, ನಾಗಪ್ಪ ಹೊನ್ನಪ್ಪನವರ, ಮಂಜುನಾಥ ರಡ್ಡೇರ, ಹೇಮಣ್ಣ, ಮಹ್ಮದಸಾಬ್ ಸನದಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts