More

    ಸಪ್ತರ್ಷಿಗಳ ತ್ಯಾಗದಿಂದ ಕೆಎಲ್‌ಇಗೆ ಜಾಗತಿಕ ಖ್ಯಾತಿ

    ಬೆಳಗಾವಿ: ಕೆಎಲ್‌ಇ ಸಂಸ್ಥೆಯು ಕೇವಲ ಅಂಕಿ-ಸಂಖ್ಯೆಗಳನ್ನು ಹೆಚ್ಚು ಮಾಡುತ್ತಿಲ್ಲ. ಗುಣಾತ್ಮಕವಾದ ಶಿಕ್ಷಣ ನೀಡುತ್ತಿದೆ. ಸಂಸ್ಥೆಯು ಇಂದು ಜಾಗತಿಕವಾಗಿ ವಿಸ್ತರಿಸಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಬೆಳಗಾವಿ ಲೋಕಸಭಾ ಸದಸ್ಯೆ ಮಂಗಲ ಸುರೇಶ ಅಂಗಡಿ ಹೇಳಿದರು.

    ನಗರದ ಜೆಎನ್‌ಎಂಸಿ ಜೀರಗೆ ಕೇಂದ್ರ ಸಭಾಗೃಹದಲ್ಲಿ ಶನಿವಾರ ಆಯೋಜಿಸಿದ್ದ ಕೆಎಲ್‌ಇ ಸಂಸ್ಥೆಯ 107ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಕೆಎಲ್‌ಇ ಸಂಸ್ಥಾಪಕರು ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಹಾಗೆಯೇ ಸಂಸ್ಥೆಯ ಅಷ್ಟಮ ಋಷಿ ಡಾ.ಪ್ರಭಾಕರ ಕೋರೆ ಅವರು ಸಂಸ್ಥೆಯನ್ನು ಜಾಗತಿಕವಾಗಿ ವಿಸ್ತರಿಸಿದ್ದಾರೆ. ಸಂಸ್ಥೆಯು ತನ್ನ ಗುಣಾತ್ಮಕ ಶಿಕ್ಷಣದಿಂದ ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಿ ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸಿದೆ. ಅದರಲ್ಲಿ ಡಾ.ಪ್ರಭಾಕರ ಕೋರೆ ಕೊಡುಗೆ ಅನನ್ಯ ಎಂದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಉತ್ತರ ಕರ್ನಾಟಕದಲ್ಲಿ ಶತಮಾನಗಳ ಶೈಕ್ಷಣಿಕ ಹಸಿವು ನೀಗಿಸಿದವರು ಕೆಎಲ್‌ಇ ಸಪ್ತರ್ಷಿಗಳು. ಅಕ್ಷರ ದಾಸೋಹದ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಿದರು. ಇಂದಿಗೂ ಸಂಸ್ಥೆಯು ಧರ್ಮಾತೀತ ಹಾಗೂ ಜಾತ್ಯತೀತ ಮೌಲ್ಯದ ಮೇಲೆ ಮುನ್ನಡೆದು, ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದೆ. ಸಂಸ್ಥೆಯು ದೇಶಾದ್ಯಂತ ಸುಮಾರು 300ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿದೆ. 1.38 ಲಕ್ಷ ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಿದ್ದಾರೆ. ಶಿಕ್ಷಣದೊಂದಿಗೆ ಆರೋಗ್ಯ ಕ್ಷೇತ್ರದಲ್ಲಿಯೂ ಮೌಲಿಕ ಸೇವೆಯನ್ನು ಕೆಎಲ್‌ಇ ಸಂಸ್ಥೆಯು ನೀಡಿದೆ ಎಂದರು.

    ಪುಣೆಯಲ್ಲಿ 300 ಹಾಸಿಗೆಗಳ ಆಸ್ಪತ್ರೆಯನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದ್ದು, ಹುಬ್ಬಳ್ಳಿಯಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಗೊಂಡಿದೆ. ಸದ್ಯದಲ್ಲಿಯೇ ಬೆಳಗಾವಿಯಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸಲಾಗುತ್ತಿದೆ. 4,500ಕ್ಕೂ ಅಧಿಕ ಹಾಸಿಗೆಗಳ ಆರೋಗ್ಯ ಸೇವೆಯು ಕೆಎಲ್‌ಇ ಸಂಸ್ಥೆಯದಾಗಿದೆ. ಅದರಲ್ಲಿ 1,200 ಹಾಸಿಗೆಗಳನ್ನು ಬಡರೋಗಿಗಳಿಗೆ ಉಚಿತವಾಗಿ ಮೀಸಲಿಟ್ಟಿದೆ. ವಿದೇಶಗಳಲ್ಲಿ ದೊರೆಯುವ ಎಲ್ಲ ಚಿಕಿತ್ಸೆಯ ಸೌಲಭ್ಯಗಳನ್ನು ಕೆಎಲ್‌ಇ ಆಸ್ಪತ್ರೆಗಳು ನೀಡುತ್ತಿವೆ ಎಂದರು.

    ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ವಿಶ್ವಾದ್ಯಂತ ಹೆಸರು ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಡಾ. ಸುಧಾಮೂರ್ತಿ, ಅನಂತಕುಮಾರ, ಬಿ. ಶಂಕರಾನಂದ, ಜಗದೀಶ ಶೆಟ್ಟರ್ ಸೇರಿ ಅನೇಕರು ನಮ್ಮ ವಿದ್ಯಾರ್ಥಿಗಳು ಎಂಬುದು ಹೆಮ್ಮೆಯ ಸಂಗತಿಯಾಗಿದೆ. ನಮ್ಮ ವಿದ್ಯಾರ್ಥಿಗಳೇ ನಮಗೆ ರಾಯಭಾರಿಗಳು. ಅವರಿಂದ ಕೆಎಲ್‌ಇ ಸಂಸ್ಥೆಯು ಮಿನುಗುತ್ತಿದೆ ಎಂದರು.

    ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ 80 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 64 ಬೆಳ್ಳಿ ಪದಕ ಹಾಗೂ 8 ಪಾರಿತೋಷಕ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 7 ಜನ ಸಿಬ್ಬಂದಿ ಸತ್ಕರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಕೆಎಲ್‌ಇ ಸಂಗೀತ ಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಡಾ.ಮಹೇಶ ಗುರನಗೌಡರ, ಡಾ.ನೇಹಾ ದಡೇದ ಮತ್ತು ಡಾ.ಆದಿತ್ಯ ಆಚಾರ್ಯ ನಿರೂಪಿಸಿದರು. ಕೆಎಲ್‌ಇ ಸಂಸ್ಥೆಯ ಆಜೀವ ಸದಸ್ಯ ಮಂಡಳಿ ಕಾರ್ಯಾಧ್ಯಕ್ಷ ಮಹಾದೇವ ಬಳಿಗಾರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts