More

    ಸದಾಶಿವಗಡದಲ್ಲಿ ಪುತ್ಥಳಿ ರಾಜಕೀಯ!

    ಕಾರವಾರ: ಐತಿಹಾಸಿಕ ಸದಾಶಿವಗಡ ಕೋಟೆಯ ಮೇಲೆ ಶಿವಾಜಿ ಮಹಾರಾಜರ ಪುತ್ಥಳಿ ಹಾಗೂ ಮ್ಯೂಸಿಯಂ ಸ್ಥಾಪನೆಗೆ ಸರ್ಕಾರ 3 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.

    ಐತಿಹಾಸಿಕ ಸ್ಮಾರಕವೊಂದನ್ನು ಉಳಿಸಲು ಸರ್ಕಾರ ಕೈಗೊಂಡ ಉತ್ತಮ ಹೆಜ್ಜೆಯಾಗಿದೆ. ಆದರೆ, ಕೋಟೆಯ ಇತಿಹಾಸದ ಕುರಿತು ಚರ್ಚೆಯನ್ನು ಹುಟ್ಟು ಹಾಕಿದೆ. ಕೋಟೆಗೆ ಶಿವಾಜಿ ಮಹಾರಾಜರು ಭೇಟಿ ನೀಡಿದ್ದರು. ಆದರೆ, ಕೋಟೆಯನ್ನು ನಿರ್ಮಾಣ ಮಾಡಿದವರು, ಆಡಳಿತ ನಡೆಸಿದವರು ಸೋದೆ ಸದಾಶಿವರಾಯರು. ಶಿವಾಜಿ ಅವರ ಪುತ್ಥಳಿಯ ಜತೆ ಕೋಟೆ ನಿರ್ಮಾಣ ಮಾಡಿಸಿದ ಸೋದೆ ಅರಸ ಒಂದನೇ ಸದಾಶಿವರಾಯರ ಪುತ್ಥಳಿಯನ್ನೂ ನಿರ್ಮಾಣ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.

    ಬ್ರಿಟಿಷರನ್ನು ಓಡಿಸಿದ ಮೊದಲಿಗ: ಸುಮಾರು ಕ್ರಿಸ್ತಶಕ 1555 ರಿಂದ 1766ರವರೆಗೂ ಶಿರಸಿ ತಾಲೂಕಿನ ಸೋಂದಾವನ್ನು ಕೇಂದ್ರವಾಗಿರಿಸಿಕೊಂಡು ಗೋವಾವರೆಗೂ ಸೋದೆ ಅರಸ ಮನೆತನ ಅಧಿಕಾರ ನಡೆಸಿತ್ತು. ಆ ಮನೆತನದ ಅತಿ ಧೀರ ಆಡಳಿತಗಾರ ಮೊದಲನೇ ಸದಾಶಿವರಾಯರು. ತಮ್ಮ ಆಡಳಿತ, ವ್ಯಾಪಾರ ವಹಿವಾಟನ್ನು ಕರಾವಳಿಗೂ ವಿಸ್ತರಿಸಿದ್ದರು. ಕ್ರಿ.ಶ. 1705ರಲ್ಲಿ ಅರಬ್ಬಿ ಸಮುದ್ರದ ನಡುವೆ ಇರುವ ದ್ವೀಪ ಕೂರ್ಮಗಡದಲ್ಲಿ ಕೋಟೆಯನ್ನು, 1715ರ ಹೊತ್ತಿಗೆ ಸದಾಶಿವಗಡ ಗುಡ್ಡದ ಮೇಲೆ ಕೋಟೆಯನ್ನು ಕಟ್ಟಿಸಿದರು ಎಂಬ ಇತಿಹಾಸದ ಉಲ್ಲೇಖಗಳಿವೆ. ಆಗ ಕಡವಾಡದ ನಂದವಾಳವನ್ನು ಕೇಂದ್ರವಾಗಿಸಿಕೊಂಡು ಕಾಳಿ ನದಿಯನ್ನು ಉಪಯೋಗಿಸಿ ಸಾಂಬಾರು ಪದಾರ್ಥ ಸಾಗಣೆ ಹಾಗೂ ಸಂಸ್ಕರಣೆಯ ಕಾರ್ಖಾನೆಯನ್ನು ಬ್ರಿಟಿಷರು ತೆರೆದಿದ್ದರು. ಅವರ ಜತೆ ಕಾಳಗ ಮಾಡಿ 1725ರ ಫೆಬ್ರವರಿಯಲ್ಲಿ ಕಾರ್ಖಾನೆ ಮುಚ್ಚಿಸಿ, ಬ್ರಿಟಿಷರು ಮುಂಬೈಗೆ ಕಾಲ್ಕೀಳುವಂತೆ ಮಾಡಿದ ಕೀರ್ತಿ ಸೋದೆ ಸದಾಶಿವರಾಯರದ್ದು. ಸ್ಥಳೀಯ ಹೆಂಜಾ ನಾಯ್ಕ ಎಂಬ ಸೇನಾ ನಾಯಕ ಬೆಂಬಲವಾಗಿ ನಿಂತಿದ್ದರು ಎಂಬ ಉಲ್ಲೇಖಗಳು ‘ಸೋದೆ ಅರಸರು ಒಂದು ಅಧ್ಯಯನ’ ಎಂಬ ಪುಸ್ತಕದಲ್ಲಿವೆ. ಸೋದೆ ಅರಸರ ಅಧಿಕಾರಾವಧಿಯಲ್ಲಿ ಇಲ್ಲಿ ದಾಳಿ ನಡೆಸಿದವರು ಶಿವಾಜಿ ಮಹಾರಾಜರು. ಸದಾಶಿವಗಡ ಕೋಟೆಗೆ ಎರಡು ಬಾರಿ ಭೇಟಿ ನೀಡಿದ ಪ್ರಸ್ತಾಪವಿದೆ.

    ಸದಾಶಿವರಾಯರು ನಂದವಾಳ ಕೋಟೆಯಿಂದ ಬ್ರಿಟಿಷರನ್ನು ಓಡಿಸಿದ ದಿನವಾದ ಫೆ. 26ರಂದು ಸ್ಥಳೀಯ ಬಿಜೆಪಿ ಕೆಲ ವರ್ಷಗಳಿಂದ ವಿಜಯ ದಿವಸ ಆಚರಿಸುತ್ತಿದೆ. ಈ ರೋಚಕ ಇತಿಹಾಸ ಹೇಳಲು ಸದಾಶಿವಗಡದ ಕೋಟೆಯ ಸ್ವಲ್ಪ ಭಾಗ ಮಾತ್ರ ಉಳಿದಿದೆ. ಸರ್ಕಾರದಿಂದ ಕೋಟೆ ಜಾಗದಲ್ಲಿ ಅದನ್ನು ಕಟ್ಟಿಸಿದ ಸೋದೆ ಸದಾಶಿವರಾಯರನ್ನು ಬಿಟ್ಟು ಶಿವಾಜಿ ಮಹಾರಾಜರ ಪುತ್ಥಳಿಯೊಂದನ್ನೇ ಸ್ಥಾಪಿಸುವುದು ಸರಿಯಲ್ಲ. ಇತಿಹಾಸ ಮರೆಮಾಚಿದಂತಾಗುತ್ತದೆ. ಇಬ್ಬರ ಪುತ್ಥಳಿ ನಿರ್ಮಾಣ ಮಾಡಬೇಕು. ಮ್ಯೂಸಿಯಂನಲ್ಲಿಯೂ ಸೋದೆಯ ಇತಿಹಾಸವನ್ನೂ ವಿವರಿಸಬೇಕು ಎಂದು ಪ್ರಾಜ್ಞರು ಒತ್ತಾಯಿಸಿದ್ದಾರೆ.

    ಇತಿಹಾಸ ಮರೆಮಾಚುವ ಕೆಲಸವಾಗಬಾರದು. ಸದಾಶಿವಗಡ ಕೋಟೆಯ ಮೇಲೆ ಶಿವಾಜಿ ಮಹಾರಾಜರ ಪುತ್ಥಳಿ ನಿರ್ವಣವಾಗಲಿ. ಜತೆಗೆ ಆ ಕೋಟೆ ಕಟ್ಟಿದವರ ಪುತ್ಥಳಿಯೂ ನಿರ್ವಣವಾಗಲಿ. | ಎನ್.ದತ್ತಾ , ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ

    ಇತಿಹಾಸ ಮರೆಮಾಚುವ ಯಾವುದೇ ಕೆಲಸ ಮಾಡುವುದಿಲ್ಲ. ತಜ್ಞರ ಅಭಿಪ್ರಾಯ ಪಡೆದು ಸದಾಶಿವಗಡ ಕೋಟೆಯಲ್ಲಿ ಮ್ಯೂಸಿಯಂ ಹಾಗೂ ಪುತ್ಥಳಿ ನಿರ್ಮಾಣ ಮಾಡುತ್ತೇವೆ. | ರೂಪಾಲಿ ನಾಯ್ಕ ಶಾಸಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts