More

    ಎಸ್​​​ಸಿ ಎಂಬ ಕಾರಣಕ್ಕೆ ಗೂಳಿಹಟ್ಟಿ ಶೇಖರ್​​​ಗೆ RSS ಕಚೇರಿಗೆ ಪ್ರವೇಶ ನಿರಾಕರಣೆ: ಸ್ಪಷ್ಟನೆ ನೀಡುವಂತೆ ಬಿ.ಎಲ್.ಸಂತೋಷ್​​ಗೆ ಮನವಿ

    ಬೆಂಗಳೂರು: “ಪರಿಶಿಷ್ಠ ಜಾತಿಯವನು ಎಂಬ ಕಾರಣಕ್ಕೆ ನಾಗಪುರದ ಹೆಡಗೇವಾರ್ ವಸ್ತು ಸಂಗ್ರಹಾಲಯದ ಪ್ರವೇಶ ನಿರಾಕರಿಸಿದ್ದಾರೆ” ಎಂದು ಹೊಸದುರ್ಗ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ, ಆರ್‌ಎಸ್‌ಎಸ್‌ ಮುಖಂಡ ಬಿ.ಎಲ್. ಸಂತೋಷ್ ಅವರಲ್ಲಿ ಮನವಿ ಮಾಡಿಕೊಂಡಿರುವ ಆಡಿಯೋ ಸದ್ಯ ವೈರಲ್ ಆಗಿದೆ.

    ಬಿ.ಎಲ್. ಸಂತೋಷ್ ಅವರಿಗೆ ಗೂಳಿಹಟ್ಟಿ ಶೇಖರ್ ಆಡಿಯೋ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದ್ದು, ಆಡಿಯೋದಲ್ಲಿ ಶೇಖರ್, “ಚುನಾವಣೆ ಘೋಷಣೆಯಾಗುವುದಕ್ಕೂ ಎರಡು ತಿಂಗಳ ಮುಂಚೆ ಸ್ನೇಹಿತರ ಜತೆಗೆ ಬಹಳ ಸಂತೋಷದಿಂದ ಮಹಾರಾಷ್ಟ್ರದ ನಾಗಪುರದ ಆರೆಸ್ಸೆಸ್ ಹೆಡಗೇವಾರ್ ವಸ್ತುಸಂಗ್ರಾಹಲಯಕ್ಕೆ ಖುಷಿಯಿಂದ ಭೇಟಿ ನೀಡಿದ್ದೆ. ಪರಿಶಿಷ್ಟ ಜಾತಿಗೆ ಸೇರಿದವನಾದರೂ ಹಿಂದುತ್ವದ ಬಗ್ಗೆ ನನಗೆ ಹೆಮ್ಮೆ ಇದೆ. ಹೆಡಗೇವಾರ್ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯಿಂದ ವಸ್ತುಸಂಗ್ರಹಾಲಯಕ್ಕೆ ತೆರಳಿದಾಗ ನನ್ನನ್ನು ಪರಿಶಿಷ್ಟ ಜಾತಿಯವನಾ ಎಂದು ಕೇಳಿದರು, ನಾನು ಹೌದು ಎಂದಿದ್ದಕ್ಕೆ ಪ್ರವೇಶ ನಿರಾಕರಿಸಲಾಯಿತು. ಇದರಿಂದ ನನಗೆ ಬಹಳ ನೋವಾಗಿದೆ.

    ವಸ್ತುಸಂಗ್ರಹಾಲಯ ವೀಕ್ಷಣೆಗೆ ಬರುವವರ ಮಾಹಿತಿಯನ್ನು ಪ್ರವೇಶ ದ್ವಾರದಲ್ಲಿ ಸಂಗ್ರಹಿಸಲಾಗುತ್ತಿತ್ತು. ಪುಸ್ತಕದಲ್ಲಿ ಹೆಸರು ನೋಂದಾಯಿಸಿ ಒಳಗೆ ಹೆಜ್ಜೆ ಇಡುತ್ತಿದ್ದಾಗ ವ್ಯಕ್ತಿಯೊಬ್ಬರು ತಡೆದರು. ತಪ್ಪು ತಿಳಿಯಬೇಡಿ, ನೀವು ಮೀಸಲಾತಿ ಪಡೆದುಕೊಳ್ಳುವ ಜಾತಿಗೆ ಸೇರಿದ್ದೀರಾ ಎಂದು ಕೇಳಿದರು. ನಾನು ಹೌದು ಎಂದಿದ್ದಕ್ಕೆ ನನಗೆ ಪ್ರವೇಶ ನಿರಾಕರಿಸಿದರು. ನನ್ನೊಂದಿಗೆ ಇಬ್ಬರು ಸ್ನೇಹಿತರು ಬಂದಿದ್ದರು. ಅವರು ಮಾತ್ರ ಒಳಗೆ ಹೋದರು. ನಾನು, ಹೊರಗೆ ಕಾಯುತ್ತಾ ಕುಳಿತುಕೊಂಡೆ. ಗೋವಿಂದ ಕಾರಜೋಳ ಹಾಗೂ ಸಂಸದ ಆನೇಕಲ್ ನಾರಾಯಣಸ್ವಾಮಿ ಅವರಿಗೂ ಪ್ರವೇಶ ನಿರಾಕರಿಸಲಾಗಿತ್ತಾ? ಇದಕ್ಕೆ ಕಾರಣ ಏನು ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ಸಂತೋಷ್ ಅವರಲ್ಲಿ ಮನವಿ ಮಾಡಿದ್ದಾರೆ.

    ರಾಜೀನಾಮೆ ನೀಡಿದ್ದ ಗೂಳಿಹಟ್ಟಿ
    ಹೊಸದುರ್ಗ ಮೀಸಲು ಕ್ಷೇತ್ರದಿಂದ ಗೆದ್ದು ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದ ಗೂಳಿಹಟ್ಟಿ ಶೇಖರ್, 2023ರ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಪರಾಭವಗೊಂಡರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪವನ್ನೂ ಮಾಡಿದ್ದ ಗೂಳಿಹಟ್ಟಿ ಅವರು, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಲ್ಲಿ ಸುಮಾರು 23 ಸಾವಿರ ಕೋಟಿ ರೂ.ಅಕ್ರಮ ನಡೆದಿದೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು.

    ಅಂತರ ಕಾಯ್ದುಕೊಂಡ ಬಿಜೆಪಿ ನಾಯಕರು
    ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಮಹಾರಾಷ್ಟ್ರದಲ್ಲಿನ ನಾಗ್ಪುರದ ಆರ್‌ಎಸ್‌ಎಸ್ ಹೆಡಗೇವಾರ್ ವಸ್ತುಸಂಗ್ರಹಾಲಯಕ್ಕೆ ಪ್ರವೇಶ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಲು ಬಿಜೆಪಿ ನಾಯಕರು ಹಿಂದೇಟು ಕಾಕುತ್ತಿದ್ದಾರೆ.
    ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ‘ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದರ ಬಗ್ಗೆ ತಿಳಿದುಕೊಂಡು ಮಾತಾಡುತ್ತೇನೆ. ನಿಮ್ಮಷ್ಟು ಬುದ್ದಿವಂತ ನಾನಲ್ಲ’ ಎಂದರೆ, ಪ್ರತಿಪಕ್ಷ ನಾಯಕ ಆ‌ರ್ ಅಶೋಕ್ ಸುದ್ದಿಗಾರರು ಪ್ರಶ್ನೆ ಕೇಳುತ್ತಿದ್ದಂತೆ ಯಾವುದೇ ಪ್ರತಿಕ್ರಿಯೆ ನೀಡದೆ ಸ್ಥಳದಿಂದ ತೆರಳಿದ್ದಾರೆ ಎನ್ನಲಾಗಿದೆ.

    ಟ್ವೀಟ್ ಮಾಡಿದ ಪ್ರಿಯಾಂಕ್ ಖರ್ಗೆ

    ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಆರೆಸ್ಸೆಸ್ ವಸ್ತುಸಂಗ್ರಹಾಲಯದ ಪ್ರವೇಶ ನಿರಾಕರಣೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಆತ್ಮೀಯ ಬಿಎಲ್ ಸಂತೋಷ್ ಜಿ, ಮಹಾಪರಿನಿರ್ವಾಣದಿವಸ್ ದಿನದಂದು, ಬಿಜೆಪಿಯ ಮಾಜಿ ಸಚಿವ ಗೂಳಿಹಟ್ಟಿ ಶೇಖ‌ರ್ ಅವರು ಸರಳವಾದ ಸ್ಪಷ್ಟನೆಯನ್ನು ಕೇಳುತ್ತಿದ್ದಾರೆ, ಅವರು ದಲಿತ ಎಂಬ ಕಾರಣಕ್ಕಾಗಿ ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಅವರ ಮನೆಗೆ (ಈಗ ವಸ್ತುಸಂಗ್ರಹಾಲಯ) ಪ್ರವೇಶವನ್ನು ಏಕೆ ನಿರಾಕರಿಸಲಾಯಿತು? ಅಲ್ಲದೆ, ಕಳೆದ ವರ್ಷದ “ಚಡ್ಡಿ ಸಂಗ್ರಹ” ಅಭಿಯಾನವನ್ನು ಎಸ್ಸಿ ಮೋರ್ಚಾ ನಾಯಕರು ಮಾತ್ರ ಏಕೆ ಮಾಡಿದರು. ಬಿಜೆಪಿ ಅಥವಾ ಆರೆಸ್ಸೆಸ್ ನ ಇತರ ಯಾವುದೇ ನಾಯಕರು ಏಕೆ ಮಾಡಲಿಲ್ಲ ಎಂದು ನೀವು ಸ್ಪಷ್ಟಪಡಿಸುತ್ತೀರಾ? ಆರೆಸ್ಸೆಸ್ ಚಡ್ಡಿಗಳನ್ನು ಸುಟ್ಟಾಗ ನೀವೇಕೆ ಮುಂದಾಳತ್ವ ವಹಿಸಲಿಲ್ಲ?, ಆರೆಸ್ಸೆಸ್ ಯಾವತ್ತೂ ಎಸ್ಸಿ/ಎಸ್ಟಿ ವಿರೋಧಿಯಾಗಿಯೇ ಇತ್ತು. ನಿಮ್ಮ ಯುದ್ಧಗಳನ್ನು ಹೋರಾಡಲು ನೀವು ದಲಿತರು ಮತ್ತು ಹಿಂದುಳಿದವರನ್ನು ಬಳಸಿ, ನೀವು ಹಿಂದೆ ಕುಳಿತು ಪ್ರದರ್ಶನವನ್ನು ಆನಂದಿಸುತ್ತಿರುತ್ತೀರಿ. ಇದು ನಿಜವಲ್ಲವೇ, ಜೀ? ಎಂದು ಕೇಳಿದ್ದಾರೆ.

    ಅಬ್ಬಾ…ಚೆನ್ನೈನಲ್ಲಿ ಬಿರುಗಾಳಿ ಸಹಿತ ಮಳೆಯ ನಡುವೆ ರಸ್ತೆಯಲ್ಲಿ ದೊಡ್ಡ ಗಾತ್ರದ ಮೀನು ಹಿಡಿದ ವ್ಯಕ್ತಿ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts