More

    ಗ್ರಾಮವಸ್ತು ಸಂಗ್ರಹಾಲಯ ವೀಕ್ಷಣೆ ಶೀಘ್ರ ಮುಕ್ತ

    ಶಿಗ್ಗಾಂವಿ: ಮರೆತು ಹೋದ ಗ್ರಾಮೀಣ ಸಂಪ್ರದಾಯ, ಜೀವನಶೈಲಿ, ಕೃಷಿ ಪರಿಕರಗಳನ್ನು ಮತ್ತೆ ವಿದ್ಯಾರ್ಥಿಗಳ ಮನಸಿನಲ್ಲಿ ಮೂಡುವಂತೆ ಮಾಡಬೇಕೆನ್ನುವ ಸದುದ್ದೇಶದೊಂದಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಮಹತ್ತರ ಹೆಜ್ಜೆ ಇಡುತ್ತಿದೆ.

    ಹಳ್ಳಿಗಳಲ್ಲಿ ಪರಂಪರಾಗತವಾಗಿ ಹಿರಿಕರು ಬಳಸಿದಂತಹ ಕೃಷಿ ಪರಿಕರಗಳು, ದೇವರ ಮೂರ್ತಿಗಳು ಸೇರಿ ಅಳಿದುಳಿದ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸುವ ಮೂಲಕ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಸ್ಥಾಪಿಸಿರುವ ಗ್ರಾಮವಸ್ತು ಸಂಗ್ರಹಾಲಯ ಶೀಘ್ರವೇ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ.

    ಈ ಭಾಗದಲ್ಲಿ ಮೊದಲು: ರಾಜ್ಯದಲ್ಲಿ ಗ್ರಾಮೀಣ ಪರಿಕರ ಪರಿಚಯಿಸುವ ವಸ್ತು ಸಂಗ್ರಹಾಲಯಗಳಿದ್ದರೂ, ಪೂರ್ವಜರು ಪರಂಪರಾಗತವಾಗಿ ಕೃಷಿಗೆ ಬಳಸಿದ ಚರ್ಮ, ಕಟ್ಟಿಗೆಗಳಿಂದ ಮಾಡಿದಂತಹ ಕೃಷಿ ವಸ್ತುಗಳು ಸೇರಿ ಹತ್ತಾರು ಬಗೆಯ ವಸ್ತುಗಳನ್ನು ಸಂಗ್ರಹಿಸುವ ಮೂಲಕ ಭಿನ್ನವಾದ ಜ್ಞಾನ ಪರಂಪರೆ ಮನದಟ್ಟು ಮಾಡುವ ಪ್ರಯತ್ನದ ಫಲವೇ ಗ್ರಾಮ ವಸ್ತುಗಳ ಸಂಗ್ರಹವಾಗಿದೆ. ಗ್ರಾಮೀಣ ಜನಪದ ಸೊಬಗು ಹೆಚ್ಚಿಸುವ ನಿಟ್ಟಿನಲ್ಲಿ ಪೂರ್ವಜರು ಬಳಕೆ ಮಾಡಿದಂತಹ ಕೃಷಿ, ಗೃಹೋಪಯೋಗಿ ವಸ್ತುಗಳನ್ನು ಸಂಗ್ರಹಿಸುವ ಮೂಲಕ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

    ಏನೇನಿವೆ?: ಚರ್ಮದಿಂದ ತಯಾರಿಸಲ್ಪಟ್ಟ ಚಕ್ಕಡಿಯ ಮಿಣಿ, ಕಣಗಳಲ್ಲಿ ಬಳಸುತ್ತಿದ್ದ ತೊಗಲಿನ ದೌಣಿ, ಕಲ್ಲಿನಲ್ಲಿ ಕೆತ್ತಿರುವ, ಕಟ್ಟಿಗೆಯಿಂದ ತಯಾರಿಸಿರುವ ದೇವರ ಮೂರ್ತಿಗಳು. ವಿವಿಧ ಬಗೆಯ ಭೂಮಣ್ಣಿ ಬುಟ್ಟಿ, ಜರಡಿ, ಒಳಲೆ,

    ರಂಗೋಲಿ ಮರಗಿ, ಬೆತ್ತದ ಬುಟ್ಟಿ, ತಾಮ್ರದ ಹಂಡೆ, ಚೊಂಬು, ಮೀನಿನ ಮಡಿಕೆ, ಚೆನ್ನಮಣೆ, ದೋಸೆ ಹೆಂಚು, ಮೊರ, ನಾಗಂದಿಗೆ ಕೈ, ಮೀನು ಬರ್ಚಿ, ಉಪ್ಪಿನ ಮರಗಿ, ತಿರಿಗೆ ಮಣೆ, ಲಾಟೀನು, ಮರದ ಚುಚ್ಚ, ತತ್ರಾಣಿ, ಕೂರಿಗೆ ಬಟ್ಟಲು, ಬಳುವಳಿ ಬುಟ್ಟಿ, ದಾರೆ ದೀಪದ ಗುಡ್ಡ, ಪೆಟ್ಟಿಗೆ ಮಣೆ, ಗುಂಬ, ಕೂಣಿ, ನೇಗಿಲು, ಜಿಂಕೆ ಕೋಡು, ನೊಗ, ಮಡಿಕೆ, ರಂಜಣಿಗೆ ಹೀಗೆ 1000ಕ್ಕೂ ಹೆಚ್ಚು ಪರಿಕರಗಳು ಮೈ ರೋಮಾಂಚನಗೊಳಿಸುತ್ತವೆ. ಇಲ್ಲಿರುವ ಪ್ರತಿಯೊಂದು ವಸ್ತುಗಳು ನಮ್ಮನ್ನು ಇತಿಹಾಸಕ್ಕೆ ಕರೆದೊಯ್ಯುತ್ತವೆ.

    ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿರುವ ಗ್ರಾಮ ಕರ್ನಾಟಕ ವಸ್ತು ಸಂಗ್ರಹಾಲಯ ಕಟ್ಟಡದ ಒಳಾಂಗಣ ಸೌಂದರ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 1 ಕೋಟಿ ರೂ. ಅನುದಾನ ನೀಡಿದ್ದು, ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಅವರು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಸಾಕಷ್ಟು ಕಾಳಜಿ ವಹಿಸಿದ್ದಾರೆ.

    | ಪ್ರೊ.ಟಿ.ಎಂ. ಭಾಸ್ಕರ್

    ಕುಲಪತಿ ಕರ್ನಾಟಕ ಜಾನಪದ ವಿವಿ ಗೊಟಗೋಡಿ

    ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಇಡಿ ಜಗತ್ತಿನಲ್ಲಿ ಮೊದಲ ವಿಶ್ವವಿದ್ಯಾಲಯ. ಇಲ್ಲಿನ ವಸ್ತು ಸಂಗ್ರಹಾಲಯದಲ್ಲಿ ಪಾರಂಪರಿಕ ವಸ್ತುಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ಜಾನಪದ ವಿಶ್ವವಿದ್ಯಾಲಯದ ಧ್ಯೇಯವಾಗಿದೆ.

    | ಸಿ.ಟಿ. ಗುರುಪ್ರಸಾದ ಕುಲಸಚಿವರು ಕಜಾವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts