More

    ಸತ್ಸಂಗ ಪ್ರವಚನಗಳಿಂದ ಮನಸ್ಸಿಗೆ ಶಕ್ತಿ, ನೆಮ್ಮದಿ

    ಬೆಳಗಾವಿ: ದೇಹವೆಂಬ ಬಂಗಾರದ ಪಾತ್ರೆಯೊಳಗಿನ ಮುತ್ತು ರತ್ನಗಳು ಸಿಗಬೇಕಾದರೆ ಕಾಮ, ಕ್ರೋಧ, ಮೋಹ, ಮಾಯೆ, ಮದ, ಮತ್ಸರ ಲೋಭಗಳೆಂಬ ಮುಚ್ಚಳಿಕೆ ತೆರೆಯಬೇಕು. ಜತೆಗೆ ಸತ್ಸಂಗ ಪ್ರವಚನಗಳಿಂದ ಶಕ್ತಿ ಪಡೆಯಬೇಕು ಎಂದು ನಿಡಸೋಸಿ ಶ್ರೀ ದುರುದುಂಡೇಶ್ವರ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

    ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮದ ರಾಮಕೃಷ್ಣ ಪರಮಹಂಸರ ವಿಶ್ವ ಭಾವೈಕ್ಯ ಮಂದಿರದ ಪ್ರತಿಷ್ಠಾಪನೆಯ ಸ್ಮರಣಾರ್ಥ ನಡೆಯುತ್ತಿರುವ 19ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮೊಳಗೆ ಮುತ್ತು ರತ್ನಗಳೂ ಇವೆ ಅವುಗಳನ್ನು ಪಡೆಯಲು ನಿಸ್ವಾರ್ಥದಿಂದ ಸೇವಾ ಮನೋಭಾವ ಮೈಗೂಡಿಸಿಕೊಳ್ಳಬೇಕು. ಆಗ ಸಿಗುವ ಸಾರ್ಥಕತೆಗೆ ಯಾವ ಆಭರಣವೂ ಸಮವಲ್ಲ ಎಂದು ತಿಳಿಸಿದರು.

    ಬೆಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ನಿತ್ಯಸ್ಥಾನಾನಂದಜಿ ಮಹಾರಾಜರು ‘ಸ್ವಾಮಿ ವಿವೇಕಾನಂದರ ಜೀವನ ದೃಷ್ಟಿ’ ವಿಷಯದ ಕುರಿತು ಮಾತನಾಡಿ, ನಾವು ಜೀವನದ ಯುದ್ಧವನ್ನು ಎಚ್ಚರದಿಂದ ಮಾಡಬೇಕು. ಅದರಲ್ಲಿ ಬಾಹ್ಯ ಮತ್ತು ಆಂತರಿಕ ಶಕ್ತಿಗಳೊಡನೆ ಎರಡು ವಿಧದಲ್ಲಿ ಹೋರಾಡಬೇಕು. ಆಂತರಿಕ ಶಕ್ತಿ ಅರಿತು ಅದಕ್ಕೆ ಸಕಾರಾತ್ಮಕತೆ, ಪ್ರೀತಿ, ಅಧ್ಯಾತ್ಮ ಎಂಬ ನೀರು-ಗೊಬ್ಬರ ಹಾಕಿ ಬೆಳೆಸಿ ಎಂದು ತಿಳಿಸಿದರು.

    ಶಿವನಹಳ್ಳಿಯ ರಾಮಕೃಷ್ಣ ಮಿಷನ್‌ನ ಸ್ವಾಮಿ ಮಂಗಳನಾಥನಂದಜಿ ಮಹಾರಾಜ ಮಾತನಾಡಿ, ಆಧ್ಯಾತ್ಮಿಕ ಜೀವನದ ಮೂಲಭೂತ ತತ್ವಗಳು ಎಂಬ ವಿಷಯದ ಕುರಿತು ಮಾತನಾಡಿ, ಆಧ್ಯಾತ್ಮಿಕತೆಯು ಬ್ರಹ್ಮಚಾರ್ಯ ಪರಿಪಾಲನೆಯಲ್ಲಿ ಅಡಗಿದೆ. ಭಗವಂತನಲ್ಲಿ ಅಚಲವಾದ ಶ್ರದ್ಧೆ ಇಟ್ಟು ಜೀವಿಸಿದರೆ ಭಗವಂತ ಎಂತಹ ಕಷ್ಟದಲ್ಲೂ ಕೈಬಿಡುವುದಿಲ್ಲ. ಭಗವಂತನನ್ನು ನಂಬು ಭಗವಂತನು ನನ್ನವನೆಂದು ಭಾವಿಸು ಆಗ ಭಗವಂತ ತನ್ನದೆಲ್ಲವನ್ನು ಧಾರೆ ಎರೆಯುತ್ತಾನೆ ಎಂದರು.

    ರಾಮಕೃಷ್ಣ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಪ್ರಾಣಾನಂದಜಿ ಮಹಾರಾಜರು ಸೇರಿ ರಾಮಕೃಷ್ಣ ಆಶ್ರಮದ ಇನ್ನಿತರ ಸ್ವಾಮೀಜಿಗಳು ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts