More

    ಸಚಿವರ ತವರಿನಲ್ಲೊಂದು ನಡುಗಡ್ಡೆ !

    ರೇವಣಸಿದ್ದಪ್ಪ ಪಾಟೀಲ್ ಬೀದರ್

    ಕುಡಿವ ನೀರು, ರಸ್ತೆ, ಚರಂಡಿ, ಸಾರಿಗೆ ಬಸ್ ಸೇರಿ ಹಲವು ಸೌಕರ್ಯಗಳಿಂದ ಈ ಗ್ರಾಮ ವಂಚಿತಗೊಂಡಿದೆ. ಸ್ವಾತಂತ್ರೃದ ಅಮೃತ ಮಹೋತ್ಸವದ ಹೊತ್ತಿನಲ್ಲೂ ಈ ಊರಿಗೆ ಸರ್ಕಾರಿ ಬಸ್ ಬಂದಿಲ್ಲ!

    ಹೌದು. ಇಂಥದ್ದೊಂದು ಕುಗ್ರಾಮ ಇರುವುದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ತವರು ಕ್ಷೇತ್ರದಲ್ಲಿ. ಔರಾದ್ ತಾಲೂಕಿನ ಖಾಶೆಂಪುರ(ಬಿ) ಗ್ರಾಮ ಹಲವು ಸೌಲಭ್ಯಗಳಿಂದ ವಂಚಿತಗೊಂಡಿದೆ. ಇಂದಿಗೂ ಸಾರಿಗೆ ಸೌಲಭ್ಯದಿಂದ ವಂಚಿತವಾದ ಈ ಜನ ಬೇರೆಡೆ ಹೋಗಲು ನಿತ್ಯವೂ ಪರದಾಡುವ ಸ್ಥಿತಿ ಇದೆ. ಶೆಂಬೆಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮದಲ್ಲಿ ಕೇವಲ 12 ಕುಟುಂಬಗಳಿದ್ದು, 100 ಜನರು ವಾಸಿಸುತ್ತಿದ್ದಾರೆ. ನಿರ್ಲಕ್ಷೃಕ್ಕೆ ಒಳಗಾಗಿ ಮೂಲಸೌಕರ್ಯ ಇಲ್ಲದೆ ಜನ ಬೇರೆಡೆ ವಲಸೆ ಹೋಗಿದ್ದಾರೆ.

    ಸ್ವಾತಂತ್ರ್ಯ ಸಿಕ್ಕು 75 ವರ್ಷವಾದರೂ ಈ ಊರು ಸಾರಿಗೆ ಬಸ್ ಮುಖ ನೋಡಿಲ್ಲ. ಖಾಸಗಿ ವಾಹನ ಹಾಗೂ ಬೈಕ್ ಸವಾರಿಯನ್ನೇ ಗ್ರಾಮಸ್ಥರು ಅವಲಂಬಿಸಿದ್ದು, ರಾತ್ರಿ ವೇಳೆ ಏನಾದರೂ ಅವಘಡ ಸಂಭವಿಸಿದರೆ ದೇವರೇ ಗತಿ ಎನ್ನುವಂತಿದೆ. ಹಾವು ಕಚ್ಚಿದ ಸಮಯಕ್ಕೆ ವಾಹನ ಸಿಗದೆ ಇಬ್ಬರು ಮೃತಪಟ್ಟ ಕರಾಳ ಇತಿಹಾಸ ಈ ಊರಲ್ಲಿ ನಡೆದಿರುವುದು ದುರದೃಷ್ಟಕರ ಸಂಗತಿ.
    ತಾಲೂಕು ಕೇಂದ್ರ ಔರಾದ್​ನಿಂದ 18 ಕಿಮೀ ಮತ್ತು ಜಿಲ್ಲಾ ಕೇಂದ್ರ ಬೀದರಿನಿಂದ 38 ಕಿಮೀ ದೂರದಲ್ಲಿರುವ ಈ ಪುಟ್ಟ ಗ್ರಾಮದಲ್ಲಿ 56 ಮತದಾರರಿದ್ದಾರೆ. 1200 ಎಕರೆ ಜಮೀನು ಊರಿಗಿದೆ. ಗ್ರಾಪಂ ಕೇಂದ್ರವಾದ ಶೆಂಬೆಳ್ಳಿ 3 ಕಿಮೀ ದೂರದಲ್ಲಿದ್ದರೂ ಈ ಊರಿನವರು 18 ಕಿಮೀ ಸುತ್ತಾಡಿ ಹೋಗಬೇಕಿದೆ. ನಾಗೂರ(ಎಂ), ಸಂತಪುರ ಮೂಲಕ ಶೆಂಬೆಳ್ಳಿಗೆ ತಲುಪಲು 18 ಕಿಮೀ ಪ್ರಯಾಣಿಸಬೇಕು. ಗ್ರಾಮ ಹೊರವಲಯದ ಹಳ್ಳಕ್ಕೆ (ಕೆರೆ) ಸೇತುವೆ ನಿಮರ್ಿಸಿದರೆ ಈ ಬವಣೆ ತಪ್ಪಲಿದೆ. ಆದರೆ ಈ ಕೆಲಸ ಆಗಿಲ್ಲ.

    ಗ್ರಾಮದ ಪಕ್ಕ ವರ್ಷಪೂರ್ತಿ ನೈಸರ್ಗಿಕ ಜಲರಾಶಿ ಹರಿದರೂ ಸ್ಥಳೀಯರಿಗೆ ಸ್ವಚ್ಛ ನೀರಿನ ವ್ಯವಸ್ಥೆಯಿಲ್ಲ. ಊರಲ್ಲಿ ಮೂರು ನೀರು ಸಂಗ್ರಹ ತೊಟ್ಟಿಗಳಿದ್ದು, ಸದ್ಯ ಒಂದು ಸುಸೂತ್ರವಾಗಿದೆ. ಇನ್ನೆರಡು ಹಾಳಾಗಿವೆ. ಹನುಮಾನ ಮಂದಿರ ಹತ್ತಿರದ ಬೋರ್ವೆಲ್ (ಕೈಪಂಪ್) ನಲ್ಲಿ ಸಾಕಷ್ಟು ನೀರಿದ್ದರೂ ಸಮರ್ಪಕ ನಿರ್ವಹಣೆ ಇಲ್ಲದೆ ಕೆಟ್ಟಿದೆ. ಗ್ರಾಮದಲ್ಲಿ ಚರಂಡಿ, ಸಿಸಿ ರಸ್ತೆ ವ್ಯವಸ್ಥೆ ಇಲ್ಲ. ಸೌಲಭ್ಯಗಳು ಇಲ್ಲದ ಈ ಕುಗ್ರಾಮದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

    ಪಡಿತರಕ್ಕಾಗಿ ಕಾಲ್ನಡಿಗೆಯೇ ಗತಿ: ಖಾಶೆಂಪುರ ಜನರು ರೇಷನ್(ಪಡಿತರ) ತರಲು ಸಹ ಪರದಾಡಬೇಕಾಗಿದೆ. ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಇರದ ಕಾರಣಕ್ಕೆ ಪಡಿತರ ತರಲು 5 ಕಿಮೀ ದೂರದ ಬೋರ್ಗಿ(ಜೆ) ತೆರಳುವ ಅನಿವಾರ್ಯತೆ ಇದೆ. ಉಚಿತ ರೇಷನ್ ಪಡೆಯಲು 20 ರೂ. ಖರ್ಚು ಮಾಡಿ ಬೇರೆ ಊರಿಗೆ ಹೋಗಬೇಕಿದ್ದರಿಂದ ಊರಲ್ಲೇ ಪಡಿತರ ನೀಡುವ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.

    ಖಾಶೆಂಪುರ(ಬಿ) ಗ್ರಾಮದಲ್ಲಿನ ಸಮಸ್ಯೆಗಳ ಕುರಿತು ಪರಿಶೀಲನೆ ಮಾಡುವೆ. ಅಧಿಕಾರಿಗಳ ಜತೆಗೆ ಅಲ್ಲಿಗೆ ತೆರಳಿ ಸ್ಥಳೀಯರೊಂದಿಗೆ ಚರ್ಚೆ ನಡೆಸುವೆ. ಗ್ರಾಮದ ಪಕ್ಕದಲ್ಲಿರುವ ಹಳ್ಳದಲ್ಲಿ ಸೇತುವೆ ನಿರ್ಮಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು.
    | ಪ್ರಭು ಚವ್ಹಾಣ್, ಪಶು ಸಂಗೋಪನೆ ಸಚಿವ

    ಇಲ್ಲಗಳ ಮಧ್ಯೆಯೇ ಜೀವನ ಸಾಗಿಸಬೇಕಾಗಿದೆ. ಮೊದಲ ಆದ್ಯತೆಯಾಗಿ ಗ್ರಾಮಕ್ಕೆ ಸರ್ಕಾರಿ ಬಸ್ ಓಡಿಸಲು ಕ್ರಮ ಕೈಗೊಳ್ಳಬೇಕು. ಸಿಸಿ ರಸ್ತೆ, ಚರಂಡಿ ನಿರ್ಮಾಣ, ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಬೇಕು. ಜಿಲ್ಲಾಧಿಕಾರಿ ನಮ್ಮ ಹಳ್ಳಿಯಲ್ಲಿ ವಾಸ್ತವ್ಯ ಮಾಡಿ ಸಮಸ್ಯೆ ಆಲಿಸಬೇಕು.
    | ರೂಪಾಲಿ ಪಾಟೀಲ್, ಸ್ಥಳೀಯ ನಿವಾಸಿ

    ಖಾಶೆಂಪುರ(ಬಿ)ದಲ್ಲಿ ಕುಡಿವ ನೀರು, ಚರಂಡಿ ಸೇರಿ ವಿವಿಧ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮಸ್ಥರಿಗೆ ಗ್ರಾಪಂ ಕಚೇರಿಗೆ ಬರಲು ಅಂತರ ಕಡಿಮೆ ಮಾಡುವ ಸಲುವಾಗಿ ಕೆರೆಯಲ್ಲಿ ಸೇತುವೆ ನಿರ್ಮಿಸುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.
    | ಶರಣಪ್ಪ ಗಾದಗೆ, ಶೆಂಬೆಳ್ಳಿ ಗ್ರಾಪಂ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts