More

    ಸಂಶೋಧನೆಯಲ್ಲಿ ಶ್ರೀಶೈಲ ಆರಾಧ್ಯ ಕೊಡುಗೆ ಅನನ್ಯ

    ಚಿತ್ರದುರ್ಗ: ಇತಿಹಾಸ ಸಂಶೋಧಕ, ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಪ್ರೊ. ಶ್ರೀಶೈಲ ಆರಾಧ್ಯ (78) ಅನಾರೋಗ್ಯ ಕಾರಣಕ್ಕೆ ಗುರುವಾರ ನಿಧನ ಹೊಂದಿದರು. ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಸಂಶೋಧನೆಯಲ್ಲೂ ಅವರ ಕೊಡುಗೆ ಅನನ್ಯವಾಗಿದೆ.

    ಶುಕ್ರವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ನಗರದ ದೊಡ್ಡಪೇಟೆಯ ಮೃತರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಂತರ ಜೋಗಿಮಟ್ಟಿ ರಸ್ತೆಯ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ಚಿತ್ರದುರ್ಗ ಜಿಲ್ಲಾ ಇತಿಹಾಸ ಸಂಶೋಧನ ಮಂಡಳಿ, ಕೋಟೆ ಸ್ಮಾರಕ ರಕ್ಷಣಾ ವೇದಿಕೆ, ಸ್ಥಳೀಯ ನಾಗರಿಕ ಹಿತರಕ್ಷಣಾ ವೇದಿಕೆಗೆ ಅಧ್ಯಕ್ಷ, ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

    ಕೃತಿ, ಇತಿಹಾಸ, ಸಾಮಾಜಿಕ ಕಾರ್ಯ: ಕಾಶಿ ಸಾಹಿತ್ಯ ಸಮೀಕ್ಷೆ, ಸಂಶೋಧನೆಯ ಹಾದಿಯಲ್ಲಿ, ಸೀಮೇಗಿಲ್ಲದೋರ ಸೂರಿನ ಕೆಳಗೆ, ಚಿತ್ರದುರ್ಗ, ಸೋಮನ ಕರಿಯಪ್ಪ, ಗಿರಿಮಲ್ಲಿಗೆ, ರಾಷ್ಟ್ರನಾಯಕ, ಪನ್ನೀರು ಗಿಂಡಿ, ಚಿತ್ರದುರ್ಗ ಜಿಲ್ಲೆಯ ಮೂವರು ಅವಧೂತರು ಕೃತಿ ರಚಿಸಿದ್ದಾರೆ.

    ಸಂದ ಗೌರವ, ಸನ್ಮಾನ: ಜ್ಞಾನಭಾರತಿ ಟ್ರಸ್ಟ್, ಚಿತ್ರದುರ್ಗ ಜಿಲ್ಲಾ ಉತ್ಸವ, ಸುವರ್ಣ ಕರ್ನಾಟಕ ರಾಜ್ಯೋತ್ಸವ, 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಕಾಂಗ್ರೆಸ್‌ನ 127ನೇ ಸಂಸ್ಥಾಪನಾ ವರ್ಷಾಚರಣೆಯಲ್ಲಿ ಗೌರವ, ಸನ್ಮಾನಗಳು ಸಂದಿವೆ. 2015ರಲ್ಲಿ ಮುರುಘಾಮಠದಿಂದ ಮುರುಘಾಶ್ರೀ ಪ್ರಶಸ್ತಿಯೂ ಲಭಿಸಿತ್ತು.

    ಹುಟ್ಟೂರಾದ ಜಿಲ್ಲೆಯ ಹೊಸದುರ್ಗ ತಾಲೂಕಿನ ಸೋಮೇನಹಳ್ಳಿಯಲ್ಲಿ ಪ್ರಾಥಮಿಕ, ಬೂದಿಹಾಳು ಶ್ರೀರಾಂಪುರದಲ್ಲಿ ಮಾಧ್ಯಮಿಕ, ಪ್ರೌಢ, ತುಮಕೂರು ಮತ್ತು ಧಾರವಾಡದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಕರ್ತವ್ಯ ಆರಂಭ. ಮಂಡ್ಯ, ಚಳ್ಳಕೆರೆ, ಚಿತ್ರದುರ್ಗದ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ 33 ವರ್ಷ ಸೇವೆ ಸಲ್ಲಿಸಿದ್ದಾರೆ.

    ವೃತ್ತಿಯೊಂದಿಗೆ ಸಂಸ್ಕೃತಿ, ಸಾಹಿತ್ಯ, ಪ್ರಾಚೀನ ಬದುಕನ್ನು ಬಿಚ್ಚಿಡುವ ಇತಿಹಾಸ, ಕೋಟೆ ಕೊತ್ತಲ, ಪ್ರಾಚೀನ ವಸ್ತುಗಳು, ನವರತ್ನಗಳು, ಅವಧೂತರು, ನಂಬಿಕೆ-ಆಚರಣೆಗಳು ಸೇರಿ ವಿಭಿನ್ನ ವಿಷಯಗಳ ಕುರಿತು 30 ಲೇಖನ ಪ್ರಕಟಿಸಿದ್ದಾರೆ.

    ಜಿಲ್ಲೆಯಾದ್ಯಂತ ಹರಡಿರುವ ಬೆಟ್ಟಗುಡ್ಡಗಳ ಗವಿಗಳಲ್ಲಿ ಶಿಲಾಯುಗದ ಮಾನವರಚಿತ ರೇಖಾ, ನೆರಳು, ಗುಹಾ ಚಿತ್ರಗಳು, ಬಂಡೆಗಳ ಮೇಲೆ ಪ್ರಾಣಿ ಮತ್ತು ಮನುಷ್ಯಾಕೃತಿಗಳು, ಜ್ಯೋತಿಷ್ಯ, ರತ್ನಶಾಸ್ತ್ರ, ಭಾರತೀಯ ಪ್ರಾಚೀನ ಆಚರಣೆ, ನಂಬಿಕೆಗಳು, ಹಳೆಯ ಕಾಗದ ಪತ್ರಗಳ ಅಧ್ಯಯನ, ಮರ-ಗಿಡ ಇವು ಅವರ ಅಭಿರುಚಿಯ ವಿಷಯಗಳಾಗಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts