More

    ಸಂವಿಧಾನ ಪೀಠಿಕೆ ಓದು 15ರಂದು  -ಜಿಲ್ಲಾದ್ಯಂತ ಕಾರ್ಯಕ್ರಮ ಆಯೋಜನೆಗೆ ಡಿಸಿ ಡಾ.ವೆಂಕಟೇಶ್ ಸೂಚನೆ 

    ದಾವಣಗೆರೆ: ಸರ್ಕಾರದ ನಿರ್ದೇಶನದಂತೆ ಸೆ.15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ ಅಂಗವಾಗಿ ದಾವಣಗೆರೆ ಜಿಲ್ಲಾದ್ಯಂತ 12 ಲಕ್ಷಕ್ಕೂ ಅಧಿಕ ಜನರಿಂದ ಸಂವಿಧಾನ ಪ್ರಸ್ತಾವನೆ ಓದಿಸುವ ಜತೆಗೆ ಪ್ರತಿಜ್ಞಾವಿಧಿ ಸ್ವೀಕರಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.
    ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಸರ್ಕಾರದ ನಿರ್ದೇಶನದಂತೆ ಅಂದು ನಮ್ಮ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ ಎಂದರು.
    ಜಿಲ್ಲಾ ಕ್ರೀಡಾಂಗಣದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಮಟ್ಟದ ಕಾರ್ಯಕ್ರಮ ನಡೆಯಲಿದ್ದು, 10 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವರು. ಎಲ್ಲಾ ತಾಲೂಕು, ಗ್ರಾಮ ಪಂಚಾಯಿತಿ ಕಚೇರಿ, ಶಾಲಾ-ಕಾಲೇಜು, ಆಸ್ಪತ್ರೆ, ಹಾಸ್ಟೆಲ್, ಸರ್ಕಾರಿ ಕಚೇರಿಗಳು, ಖಾಸಗಿ ಸಂಘ-ಸಂಸ್ಥೆಗಳು, ಅಂಗನವಾಡಿ ಕೇಂದ್ರ ಸೇರಿ ಎಲ್ಲೆಡೆ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿ ಎಂದು ಸೂಚನೆ ನೀಡಿದರು.
    ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೆ. 12ರೊಳಗಾಗಿ ನೋಂದಣಿಯಾಗಬೇಕು. ಆನ್‌ಲೈನ್ ನೋಂದಣಿ ವೇಳೆ ಹಾಸ್ಟೆಲ್, ಸರ್ಕಾರಿ, ಖಾಸಗಿ ಶಾಲಾ, ಕಾಲೇಜು, ಸಹಕಾರ ಸಂಸ್ಥೆ, ಸಾರ್ವಜನಿಕ ಉದ್ದಿಮೆ, ಸಂಸ್ಥೆಗಳು, ಇತರೆ ಸಂಘ, ಸಂಸ್ಥೆಗಳು, ರಾಜಕೀಯ ಪಕ್ಷಗಳು, ಮಿಲಿಟರಿ, ಪ್ಯಾರಾಮಿಲಿಟರಿ, ಸಮವಸ್ತ್ರವುಳ್ಳ ಭದ್ರತಾ ಪಡೆ, ಆರಕ್ಷಕ ಸೇವೆ ನೀಡುತ್ತಿರುವ ಸಂಸ್ಥೆಗಳು, ಇಲಾಖೆ, ನ್ಯಾಯಾಲಯಗಳು, ಶಾಸಕಾಂಗ ಮತ್ತು ಇತರೆ ವೈಯಕ್ತಿಕ ಗುಂಪುಗಳು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
    ಜಿಪಂ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಕೆ.ನಾಗರಾಜ, ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪಿ. ರಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಡಿಡಿಪಿಐ ಜಿ.ಕೊಟ್ರೇಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts