More

    ಸಂಪುಟದಿಂದ ಶಿವಾನಂದ್ ಪಾಟೀಲ್ ಕೈಬಿಡಿ -ರೈತರ ಒಕ್ಕೂಟದ ಆಗ್ರಹ 

    ದಾವಣಗೆರೆ: ರೈತರನ್ನು ಅವಮಾನಿಸುವ ಹೇಳಿಕೆ ನೀಡಿದ ಆರೋಪದಡಿ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರನ್ನು ಸಂಪುಟದಿಂದ ಕೈಬಿಡುವಂತೆ ದಾವಣಗೆರೆ ರೈತರ ಒಕ್ಕೂಟ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
    ಬೆಳೆ ಪರಿಹಾರದ ಹಣ ಸಿಗಲಿದೆ ಹಾಗೂ ಸಾಲಮನ್ನಾ ಆಗಲಿದೆ ಎಂಬ ಕಾರಣಕ್ಕಾಗಿ ಮೇಲಿಂದ ಮೇಲೆ ಬರ ಬರಲೆಂದು ರೈತರು ಆಶಿಸುತ್ತಾರೆ ಎಂಬುದಾಗಿ ಕೀಳುಮಟ್ಟದ ಹೇಳಿಕೆ ನೀಡಿದ ಶಿವಾನಂದ್ ಪಾಟೀಲ್ ಅವರನ್ನು ಸಚಿವ ಸ್ಥಾನದಲ್ಲಿ ಮುಂದುವರಿಸುವುದು ಯೋಗ್ಯವಲ್ಲ ಎಂದು ಒಕ್ಕೂಟದ ಮುಖಂಡ ಬಿ.ಎಂ. ಸತೀಶ್ ಕೊಳೇನಹಳ್ಳಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಪರಿಹಾರದ ಆಸೆಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬುದಾಗಿ ಶಿವಾನಂದ್ ಪಾಟೀಲ್ ಈ ಹಿಂದೆಯೂ ಹೇಳಿಕೆ ನೀಡಿದ್ದರು. ಹೈದ್ರಾಬಾದ್‌ನ ಮದುವೆಯೊಂದರಲ್ಲಿ ಇದೇ ಸಚಿವರು ಕರೆನ್ಸಿ ನೋಟುಗಳನ್ನು ಬೂಟಿನಡಿ ಇರಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು. ಮೋಜಿನಲ್ಲಿರುವ ಈ ಸಚಿವರಿಗೆ ರೈತರ ಕಷ್ಟ ಅರ್ಥವಾಗದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
    123 ವರ್ಷದಲ್ಲಿ ಭೀಕರ ಬರ ಸಂಭವಿಸಿದ್ದು, 48.17 ಲಕ್ಷ ಹೆ. ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದಾಗಿ ಸಮೀಕ್ಷೆ ಹೇಳಿದೆ. ಬರ ಪರಿಹಾರ ನೀಡುವುದಾಗಿ ಹೇಳಿದ್ದ ಸರ್ಕಾರ, ಒಂದು ತಿಂಗಳು ಕಳೆದರೂ ಒಬ್ಬರ ರೈತರ ಜೇಬಿಗೂ ಹಣ ಹಾಕಿಲ್ಲ. ರೈತರಿಗೆ ಧೈರ್ಯ ತುಂಬಬೇಕಾದವರೇ ಅಧಿಕಾರದ ಅಮಲಿನಲ್ಲಿ ತೇಲಾಡುತ್ತಿರುವುದು ದುರಂಹಕಾರದ ನಡೆಯಾಗಿದೆ ಎಂದರು.
    ಬರಪರಿಹಾರ ಕೇಳಲೆಂದು ದೆಹಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ, ಸಚಿವರಾದ ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಐಷಾರಾಮಿ ವಿಮಾನದಲ್ಲಿ ಪ್ರಯಾಣಿಸಿದ್ದು ರೈತ ವಿರೋಧಿ ನಡೆಯಾಗಿದೆ ಎಂದು ಹೇಳಿದರು.
    ಸರ್ಕಾರ ಬರ ಪರಿಹಾರವನ್ನು ಕಿಸಾನ್ ಸಮ್ಮಾನ್ ಯೋಜನೆ ಮಾದರಿಯಲ್ಲೇ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಫ್ರೂಟ್ ದತ್ತಾಂಶ ಎಂದು ಇಲ್ಲಸಲ್ಲದ ಹೇಳಿಕೆ ನೀಡಿ ಕಾಲಹರಣ ಮಾಡಬಾರದು. ಬರಗಾಲದಿಂದಾಗಿ ಹುಲ್ಲಿನ ಬೆಲೆ ದುಬಾರಿಯಾಗಿದೆ. ಜಾನುವಾರುಗಳನ್ನು ಸಾಕುವುದು ಕಷ್ಟವಾಗಿದೆ. ಕೂಡಲೇ ಮೇವು ಕಿಟ್ ವಿತರಿಸಬೇಕು. ಮೇವು ಬ್ಯಾಂಕ್ ತೆರೆಯಬೇಕು ಎಂದು ಆಗ್ರಹಿಸಿದರು.
    ಬೆಳವನೂರು ನಾಗೇಶ್ವರರಾವ್ ಮಾತನಾಡಿ ರೈತರ ಬಗ್ಗೆ ಪದೇಪದೇ ಉಡಾಫೆ ಹೇಳಿಕೆ ನೀಡುತ್ತಿರುವ ಶಿವಾನಂದ್ ಪಾಟೀಲ್‌ರನ್ನು ವಾರದೊಳಗೆ ವಜಾ ಮಾಡದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು. ಸಚಿವ ಸ್ಥಾನವಲ್ಲದೆ ಶಾಸಕ ಸ್ಥಾನದಿಂದಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು.
    ಮುಖಂಡರಾದ ಧನಂಜಯ ಕಡ್ಲೇಬಾಳ್, ಎನ್.ರಾಜಶೇಖರ್, ಆರನೇಕಲ್ಲು ವಿಜಯಕುಮಾರ್, ವಾಸನ ಓಂಕಾರಪ್ಪ, ಗೋಪನಾಳ್ ಕರಿಬಸಪ್ಪ, ಚಿಕ್ಕಬೂದಿಹಾಳ್ ಭಗತ್‌ಸಿಂಗ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts