More

    ಸಂಪಾದಕೀಯ: ಕಠಿಣ ಕ್ರಮ ಅಗತ್ಯ

    ಅನೇಕ ದುಶ್ಚಟಗಳು ಯುವಜನರ ಜೀವನಕ್ಕೆ ಕಂಟಕ ತರುತ್ತಿವೆ. ಅದರಲ್ಲೂ, ಮಾದಕದ್ರವ್ಯಗಳ ಸೇವನೆ ಹೆಚ್ಚುತ್ತಲೇ ಸಾಗಿರುವುದು ಗಂಭೀರ ವಿಷಯ. ಪ್ರೌಢಶಾಲಾ ಮಕ್ಕಳಿಂದ ಹಿಡಿದು ಮೂವತ್ತು ವರ್ಷದ ಯುವಕ-ಯುವತಿಯರು ಈ ಚಟಕ್ಕೆ ಒಳಪಡುತ್ತಿದ್ದು, ಸಣ್ಣ ನಗರಗಳಿಗೂ ಈ ಪಿಡುಗು ಕಾಲಿಟ್ಟಿದೆ. ಡ್ರಗ್ಸ್ ಪೂರೈಕೆ ಜಾಲಗಳನ್ನು ಪತ್ತೆ ಮಾಡಲಾಗುತ್ತಿದ್ದರೂ, ರಹಸ್ಯವಾಗಿ ಕಾರ್ಯಾಚರಿಸುತ್ತಿರುವ ದುಷ್ಟಶಕ್ತಿಗಳಿಗೆ ಕೊರತೆಯೇನಿಲ್ಲ.

    ರಾಜ್ಯದಲ್ಲಿ ಹುಕ್ಕಾ ಮಾರಾಟ ಮತ್ತು ಸೇವನೆಯನ್ನು ಸರ್ಕಾರ ನಿಷೇಧಿಸಿ ಎರಡು ತಿಂಗಳು ಕಳೆದಿದೆ. ಈ ವಿಷಯವನ್ನು ಹೈಕೋರ್ಟ್​ಗೂ ರಾಜ್ಯ ಸರ್ಕಾರ ಹಿಂದೆಯೇ ತಿಳಿಸಿದೆ. ಮಾದಕದ್ರವ್ಯ ಮಾರಾಟ ಮತ್ತು ಸೇವನೆಯ ವಿರುದ್ಧವಂತೂ ಕೆಲವು ವರ್ಷಗಳ ಹಿಂದೆ ಪೊಲೀಸರು ದೊಡ್ಡ ಸಮರವನ್ನೇ ಸಾರಿದ್ದರು. ಆಗ ಅದು ದೇಶಾದ್ಯಂತ ಸುದ್ದಿಯಾಗಿತ್ತು ಮತ್ತು ಆ ಕ್ರಮ ಭರವಸೆಯನ್ನು ಮೂಡಿಸಿತ್ತು. ಆದರೆ ದುರದೃಷ್ಟವಶಾತ್, ಈಗಲೂ ರಾಜ್ಯದೆಲ್ಲೆಡೆ ಹುಕ್ಕಾ ಮತ್ತು ಡ್ರಗ್ಸ್ ಮಾರಾಟ ಹಾಗೂ ಸೇವನೆ ಎಗ್ಗಿಲ್ಲದೆ ನಡೆಯುತ್ತಿದೆ. ಆಗೊಮ್ಮೆ ಈಗೊಮ್ಮೆ ಪೊಲೀಸರು ದಾಳಿ ನಡೆಸಿ ಹುಕ್ಕಾ ಬಾರ್​ಗಳನ್ನು ಮುಚ್ಚಿಸುತ್ತಿದ್ದಾರೆ. ಅಲ್ಲಲ್ಲಿ ಮಾದಕದ್ರವ್ಯ ಮಾರುವವರನ್ನು ಹಿಡಿದು, ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ, ಈ ಕಣ್ಣೊರೆಸುವ ತಂತ್ರಗಳನ್ನು ಬಿಟ್ಟು ನೈಜ ಅರ್ಥದಲ್ಲಿ ಈ ಪಿಡುಗುಗಳ ಮೇಲಿನ ನಿಷೇಧ ಜಾರಿಯಾಗುವಂತೆ ಮಾಡಬೇಕಾಗಿದೆ. ಆ ಮೂಲಕ ಜನರ, ಅದರಲ್ಲೂ ವಿಶೇಷವಾಗಿ ಯುವಜನರ ಆರೋಗ್ಯವನ್ನು ಕಾಪಾಡುವುದಕ್ಕೆ ಆದ್ಯತೆ ನೀಡಬೇಕಾಗಿದೆ. ಪಂಜಾಬ್, ರಾಜಸ್ಥಾನ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿಯೂ ಹುಕ್ಕಾ ಬಾರ್​ಗಳನ್ನು ನಿಷೇಧಿಸಲಾಗಿದ್ದು, ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

    ಆದರೆ, ರಾಜ್ಯದಲ್ಲಿ ಹುಕ್ಕಾ ಮಾರಾಟ ಹಾಗೂ ಸೇವನೆಯನ್ನು ನಿಷೇಧಿಸಿದ್ದರೂ ಅಕ್ರಮ ಮಾರಾಟ ಅವ್ಯಾಹತವಾಗಿ ಮುಂದುವರಿದಿರುವುದು ಕಳವಳದ ಸಂಗತಿ. ಯುವಕರು ಇಂಥ ಚಟಗಳಿಗೆ ಬಿದ್ದು ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವ ಜತೆಗೆ, ಸಮಾಜದ ಸ್ವಾಸ್ಥ್ಯಕ್ಕೂ ಅಪಾಯವೊಡ್ಡಿದ್ದಾರೆ. ಹುಕ್ಕಾ ಮಾರಾಟ ಕೇಂದ್ರಗಳ ಮೇಲೆ ಸಿಸಿಬಿ ದಾಳಿ ನಡೆಸಿ 1.4 ಲಕ್ಷ ರೂ. ನಗದು ಮತ್ತು ಹುಕ್ಕಾ ಫ್ಲೇವರ್ ಜಪ್ತಿ ಮಾಡಿಕೊಂಡಿರುವುದು ತಾಜಾ ವಿದ್ಯಮಾನ. 2023ರ ಡಿಸೆಂಬರ್​ನಲ್ಲಿ ಹೊಸವರ್ಷಕ್ಕೆಂದು ಪೂರೈಸಲು ಸಂಗ್ರಹಿಸಲಾಗಿದ್ದ 21 ಕೋಟಿ ರೂಪಾಯಿ ಮೌಲ್ಯದ 16 ಕೆಜಿ ಡ್ರಗ್ಸ್​ನ್ನು ಮಹತ್ವದ ಕಾರ್ಯಾಚರಣೆಯ ಮೂಲಕ ಬೆಂಗಳೂರಿನ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದರಲ್ಲದೆ, ಪ್ರಕರಣ ಸಂಬಂಧ ವಿದೇಶಿ ಪ್ರಜೆಯನ್ನು ಬಂಧಿಸಿದ್ದರು. ಇಂಥ ಮಾರಾಟ ಜಾಲಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ. ಇಂಥ ಜಾಲಗಳು ವ್ಯಾಪಕವಾಗಿ ಹಬ್ಬಿಕೊಂಡಿದ್ದು, ಇದರ ವಿರುದ್ಧ ಆಂದೋಲನದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದಲ್ಲಿ, ಈ ಸಮಸ್ಯೆ ಸಾಮಾಜಿಕ ಸ್ವಾಸ್ಥ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಹುದು. ವಾಸ್ತವವನ್ನು ಮರೆತು, ನಶೆಯಲ್ಲಿ ತೇಲುವ ಯುವಕರು ಅಶಾಂತಿ ಸೃಷ್ಟಿಸುವ ಇಲ್ಲವೆ ಅಪರಾಧಿಕ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆಯೂ ಇರುತ್ತದೆ. ಈ ಬಗೆಯ ಕೆಲ ರಾದ್ಧಾಂತಗಳು ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಪ್ರಶ್ನೆಯನ್ನು ಸೃಷ್ಟಿಸಿದೆ. ಪಾಲಕರು ಕೂಡ ಹದಿಹರೆಯದ ಮಕ್ಕಳು, ಯುವಕರು ದಾರಿತಪ್ಪದಂತೆ ಜಾಗ್ರತೆ ವಹಿಸಬೇಕು.

    ಹುಕ್ಕಾ ಬಾರ್ ಸೇರಿದಂತೆ ಮಾದಕದ್ರವ್ಯಗಳ ಪಿಡುಗನ್ನು ಬೇರುಸಮೇತ ಕಿತ್ತೊಗೆಯಲು ಇರುವ ಎಲ್ಲ ಮಾಗೋಪಾಯಗಳನ್ನು ಸರ್ಕಾರ ಅನುಷ್ಠಾನಕ್ಕೆ ತರಬೇಕು ಮತ್ತು ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕು. ಈ ನಿಟ್ಟಿನಲ್ಲಿ ಸಂಘಸಂಸ್ಥೆಗಳು ಕೂಡ ಶ್ರಮಿಸಿ, ಆರೋಗ್ಯಕರ ಸಮಾಜ ನಿರ್ವಣಕ್ಕೆ ಯತ್ನಿಸಬೇಕು.

    ಆಂಧ್ರಪ್ರದೇಶ: ಪವನ್ ಕಲ್ಯಾಣ್​​ ಬೆಂಬಲಕ್ಕೆ ನಿಂತ ಮೆಗಾಸ್ಟಾರ್​! ಜನಸೇನಾ ಪರ ಪ್ರಚಾರಕ್ಕೆ ಬರ್ತಾರ ಚಿರಂಜೀವಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts