More

    ಸಂತ್ರಸ್ತರಿಗೆ ನ್ಯಾಯ ದೊರಕಿಸಬೇಕು

    ಗದಗ: ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ, ಮಾನಸಿಕ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳು ಜರುಗದಂತೆ ನಿಗಾ ವಹಿಸಬೇಕು. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಬೇಕು ಎಂದು ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಹೇಳಿದರು.

    ಜಿಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಮಹಿಳಾ ಸಖಿ, ಸಾಂತ್ವನ, ಸ್ವಾಧಾರದಂಥ ಪುನರ್ವಸತಿ ಕೇಂದ್ರಕ್ಕೆ ದಾಖಲಾಗುವವರಿಗೆ ನೈತಿಕ ಸ್ಥೈರ್ಯ ತುಂಬಿ ರಕ್ಷಿಸಬೇಕು. ಸಂಬಂಧಿಸಿದವರೊಂದಿಗೆ ಸಮಾಲೋಚನೆ ನಡೆಸಿ, ಸಂತ್ರಸ್ತರ ಸಮಸ್ಯೆ ಇತ್ಯರ್ಥಪಡಿಸಬೇಕು. ಪುನಃ ಮಹಿಳೆಯು ತನ್ನ ಕುಟುಂಬದೊಂದಿಗೆ ಸಂತಸದಿಂದ ಬೆರೆಯುವಂತೆ ಕ್ರಮ ಕೈಗೊಳ್ಳಬೇಕು. ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದರು.

    ತೃತೀಯ ಲಿಂಗಿಗಳು ಸ್ವಾವಲಂಬಿಯಾಗಿ ಬದುಕುವಂತೆ ಕ್ರಮ ಕೈಗೊಳ್ಳಬೇಕು. ದೇವದಾಸಿಯರು, ಅವರ ಮಕ್ಕಳಿಗೆ ಪುನರ್ವಸತಿ, ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ಗರ್ಭಿಣಿಯರು, ಬಾಣಂತಿಯರು, ಮಕ್ಕಳ ಆರೋಗ್ಯ ತಪಾಸಣೆ ಕಾಲಕಾಲಕ್ಕೆ ನಡೆಸಬೇಕು. ಪೌಷ್ಟಿಕಾಂಶ ಮಾತ್ರೆ, ಆಹಾರ ನೀಡಿ ಅಪೌಷ್ಟಿಕತೆ ನಿವಾರಿಸಬೇಕು ಎಂದರು.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಎಚ್.ಎಚ್. ಕುಕನೂರ ಮಾತನಾಡಿ, ಕಳೆದ ವರ್ಷ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಜಿಲ್ಲೆಯಲ್ಲಿ 128 ಪ್ರಕರಣಗಳು ದಾಖಲಾಗಿದ್ದು, ಸಮಾಲೋಚನೆಯಿಂದ 88 ಪ್ರಕರಣಗಳು ಇತ್ಯರ್ಥಗೊಂಡಿವೆ. ಈ ವರ್ಷ 25, ಬಾಕಿ 40 ಸೇರಿ 65 ಪ್ರಕರಣಗಳಿವೆ. ಅವುಗಳಲ್ಲಿ 13 ಇತ್ಯರ್ಥವಾಗಿದ್ದು, 52 ಪ್ರಕರಣಗಳು ಬಾಕಿಯಿವೆ. 6 ಸಾಂತ್ವನ ಕೇಂದ್ರ, 1 ಸ್ವಾಧಾರ ಕೇಂದ್ರವಿದೆ. ಸಾಂತ್ವನ ಯೋಜನೆಯಡಿ 2019 ಏಪ್ರಿಲ್​ನಿಂದ 2020 ಮಾರ್ಚ್​ವರೆಗೆ ವರದಕ್ಷಿಣೆ, ಲೈಂಗಿಕ ಕಿರುಕುಳ, ಕೌಟುಂಬಿಕ ಕಲಹ, ಅತ್ಯಾಚಾರ, ಬಹುಪತ್ನಿತ್ವಕ್ಕೆ ಸಂಬಂಧಿಸಿದಂತೆ 941 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 828 ಇತ್ಯರ್ಥಗೊಂಡಿದ್ದು, 113 ಪ್ರಕರಣಗಳು ಬಾಕಿ ಉಳಿದಿವೆ. ಸ್ಥೈರ್ಯನಿಧಿ ಯೋಜನೆಯಡಿ ಸಂತ್ರಸ್ತರಿಗೆ 5.50 ಲಕ್ಷ ರೂ. ಪರಿಹಾರ ಧನ ನೀಡಿದೆ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ದತ್ತು ಪಡೆದು ಪೌಷ್ಟಿಕಾಂಶ ಆಹಾರ ನೀಡಿ ಆರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ 46 ಜನರು ಕಾಣೆಯಾಗಿದ್ದು, ಅವರಲ್ಲಿ 18 ಜನರು ಪತ್ತೆಯಾಗಿದ್ದಾರೆ. ಜಿಲ್ಲಾದ್ಯಂತ 1520 ದೇವದಾಸಿಯರನ್ನು ಗುರುತಿಸಿದ್ದು, ಈ ಪೈಕಿ 945 ಜನರು ಜೀವಂತವಿದ್ದಾರೆ. 762 ದೇವದಾಸಿಯರಿಗೆ ವಸತಿ ಸೌಲಭ್ಯ ಕಲ್ಪಿಸಿದ್ದು, ಬಾಕಿ ಉಳಿದ 183 ಜನರಿಗೆ ನಿವೇಶನ, ವಸತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. 872 ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ ಎಂದರು.

    ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಂರಕ್ಷಣಾಧಿಕಾರಿಗಳು, ಸಾಂತ್ವನ ಕೇಂದ್ರದ ಪದಾಧಿಕಾರಿಗಳು, ದೇವದಾಸಿ ಪುನರ್ವಸತಿ ಕೇಂದ್ರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಇತರರಿದ್ದರು.

    ಪುನರ್ವಸತಿ ಕೇಂದ್ರಗಳಲ್ಲಿರುವ ಮಕ್ಕಳಿಗೆ ಶಿಕ್ಷಣ, ಸ್ವಾವಲಂಬಿ ಜೀವನಕ್ಕೆ ವೃತ್ತಿಪರ ತರಬೇತಿ ನೀಡಬೇಕು. ಬಾಲ್ಯವಿವಾಹ ನಡೆಯದಂತೆ ನಿಗಾ ವಹಿಸಬೇಕು. ಕಾನೂನು ಅರಿವು ಮೂಡಿಸಬೇಕು. ಮಹಿಳಾ ಆಯೋಗ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಅತ್ಯಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.

    | ಆರ್. ಪ್ರಮೀಳಾ ನಾಯ್ಡು ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts