More

    ಸಂಘಟಿತರಾಗಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ

    ಕೆ.ಆರ್.ಪೇಟೆ: ಕುರುಬ ಸಮುದಾಯ ಮೊದಲು ಸಂಘಟಿತರಾಗಬೇಕು ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಮಾತ್ರ ಶೈಕ್ಷಣಿಕ ಸಾಮಾಜಿಕ ಹಾಗೂ ಆರ್ಥಿಕವಾಗಿ ಮುಂದುವರಿಯಲು ಸಾಧ್ಯ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

    ಪಟ್ಟಣದ ಸಾಹುಕಾರ್ ಚಿಕ್ಕಣ್ಣಗೌಡ ಸಮುದಾಯ ಭವನದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ, ಕೆ.ಆರ್.ಪೇಟೆ ತಾಲೂಕು ಶಾಖೆಯ ಪದಾಧಿಕಾರಿಗಳ ಪದಗ್ರಹಣ, ಸಾಧಕರಿಗೆ ಕಾಯಕಯೋಗಿ ಪ್ರಶಸ್ತಿ, ಸಮುದಾಯದ ಹಿರಿಯರಿಗೆ ಸನ್ಮಾನ ಹಾಗೂ 2021-22ನೇ ಸಾಲಿನಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳಿಸಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ರಾಜ್ಯದಲ್ಲಿ ಮೂರನೇ ಅತಿ ದೊಡ್ಡ ಹಿಂದುಳಿದ ಸಮಾಜವಾಗಿರುವ ಕುರುಬ ಸಮಾಜದ ಇತಿಹಾಸದ ಬಗ್ಗೆ ಈಗಿನ ಪೀಳಿಗೆಗೆ ತಿಳಿಸಲು ಗ್ರಂಥಗಳ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಕುರುಬ ಸಮಾಜದ ಅನೇಕ ಜನರಿಗೆ ಇತಿಹಾಸವೇ ತಿಳಿದಿಲ್ಲ. ಕುರುಬ ಸಮಾಜದ ಸಾಧನೆಯನ್ನು ಮಕ್ಕಳಿಗೂ ಮುಟ್ಟಿಸಬೇಕು. ದಾಸ ಶ್ರೇಷ್ಠ ಭಕ್ತ ಕನಕದಾಸ, ಸಂಗೊಳ್ಳಿ ರಾಯಣ್ಣ ಮೊದಲಾದ ಸಮಾಜದ ಪ್ರಮುಖರು ಕುರುಬರನ್ನು ಮಾತ್ರವಲ್ಲದೆ ಇತರ ಸಮುದಾಯವನ್ನು ಎಚ್ಚರಿಸಿದ್ದಾರೆ ಹಾಗೂ ಮಾರ್ಗದರ್ಶನ ನೀಡಿದ್ದಾರೆ ಎಂಬುದನ್ನು ಇತಿಹಾಸದಲ್ಲಿ ನಾವು ತಿಳಿದಿದ್ದೇವೆ. ಅಂತಹ ಎಲ್ಲ ಮಹನೀಯರು ಇತಿಹಾಸ ತಿಳಿಸಲು ಗ್ರಂಥಗಳು ಬಹಳ ಪ್ರಯೋಜನಕಾರಿಯಾಗಿದೆ. ಎಲ್ಲ ತಳ ಸಮುದಾಯಗಳು ತಮ್ಮ ಕುಲದ ಚರಿತ್ರೆಯನ್ನು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ್ ಮಾತನಾಡಿ, ಯಾವುದೇ ಸಮುದಾಯದ ಸಂಘಗಳಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಗೂ ಸಮಾಜದ ಜನರು ಒಡಕನ್ನು ಹೊರ ತಾರದೆ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ನಡೆಸಿ ಬಗೆಹರಿಸುವ ಮೂಲಕ ಸಂಘವನ್ನು ಸಂಘಟಿಸುವಂತೆ ಸಲಹೆ ನೀಡಿದರು.

    ಸಾಧಕರಿಗೆ ಸನ್ಮಾನ: ಕೆ.ಆರ್.ಪೇಟೆ ತಾಲೂಕಿನವರಾಗಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ್, ಭೂ ಸ್ವಾಧೀನ ಅಧಿಕಾರಿ ಜಿ.ಆರ್.ನಟರಾಜು, ಪೊಲೀಸ್ ಇನ್ಸ್‌ಪೆಕ್ಟರ್ ಜಿ.ಡಿ.ಮಂಜುನಾಥ್ ಗಂಜಿಗೆರೆ, ಉಪ ನೋಂದಣಾಧಿಕಾರಿ ಕೆ.ಎಸ್.ಮಹೇಶ್, ಸಾರ್ವಜನಿಕ ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಕೆ.ಎಸ್.ಶಿವಕುಮಾರ್, ಉಪ ವಲಯ ಅರಣ್ಯ ಅಧಿಕಾರಿ ಕನ್ನಡ ಕುಸುಮಾ, ಆಡಳಿತ ವೈದ್ಯಾಧಿಕಾರಿ ಡಾ.ಪಿ.ಎಸ್.ಲೋಹಿತ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಎಲ್.ಲಿಂಗರಾಜು ಅವರಿಗೆ ಕಾಯಕ ಪ್ರಶಸ್ತಿ ನೀಡಲಾಯಿತು.
    2021-2022ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts