More

    ಸಂಕಷ್ಟದಲ್ಲಿ ಹೂವು ಬೆಳೆಗಾರರು

    ರಾಮಚಂದ್ರ ಕಿಣಿ, ಭಟ್ಕಳ

    ಕರೊನಾದ ಕರಿನೆರಳು ಭಟ್ಕಳ ಮಲ್ಲಿಗೆಯ ಮೇಲೆಯೂ ಬಿದ್ದಿದ್ದು, ಬೆಳೆಗಾರರು ವಿಲವಿಲ ಒದ್ದಾಡುವಂತಾಗಿದೆ. ಏ. 14 ರಂದು ಲಾಕ್​ಡೌನ್ ಮುಗಿಯದಿದ್ದಲ್ಲಿ ಮಲ್ಲಿಗೆ ಹೂವು ಬೆಳೆ ಆಶ್ರಯಿಸಿದ ಕುಟುಂಬಗಳು ಕಷ್ಟದ ದಿನ ಎದುರಿಸುವ ಆತಂಕದಲ್ಲಿದೆ.

    ಹೌದು! ಭಟ್ಕಳ ಮಲ್ಲಿಗೆಯ ಸುಗಂಧವೇ ಅಂಥದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮಾರುಕಟ್ಟೆಯನ್ನು ಭಟ್ಕಳ ಮಲ್ಲಿಗೆ ಆಳುತ್ತದೆ ಎಂದರೆ ಅದರ ಖದರ್ ಎಷ್ಟು ಎಂದು ಉಹಿಸಿಕೊಳ್ಳಬಹುದು. ಭಟ್ಕಳ ಮಲ್ಲಿಗೆಗೆ ವಿಶಿಷ್ಟ ಪರಿಮಳವಿದೆ. ಇದು ಮಂಗಳೂರು ಮಾತ್ರವಲ್ಲದೆ ಅಲ್ಲಿಂದ ಮುಂಬೈ, ದುಬೈಗೂ ರವಾನೆಯಾಗುತ್ತದೆ. ಮದುವೆ, ಮುಂಜಿ ಶುಭ ಸಮಾರಂಭಗಳಿಗೆ ಮಲ್ಲಿಗೆ ಇಲ್ಲದಿದ್ದರೆ ಆ ಕಾರ್ಯಕ್ರಮವೇ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಮಲ್ಲಿಗೆ ತನ್ನ ಪ್ರಭಾವ ಬೀರಿದೆ.

    ಮಲ್ಲಿಗೆಯ ಮೀತಿಮೀರಿದ ಬೇಡಿಕೆಯಿಂದ ಭಟ್ಕಳದಲ್ಲಿ ಸುಮಾರು 90 ಹೇಕ್ಟರ್ ಪ್ರದೇಶದಲ್ಲಿ ಒಂದು ಪ್ರಮುಖ ಬೆಳೆಯನ್ನಾಗಿ ಬೆಳೆಸಲಾಗುತ್ತಿದೆ. ಕೃಷಿಯಲ್ಲಿ ಮಲ್ಲಿಗೆಯೂ ಒಂದು ಪ್ರಮುಖ ಪಾತ್ರ ಪಡೆದಿದೆ. ಭಟ್ಕಳ ಒಂದರಲ್ಲೇ 8 ರಿಂದ 10 ಸಾವಿರ ಕುಟುಂಬಗಳು ಇದನ್ನೇ ಆಶ್ರಯಿಸಿ ಬದುಕು ಸಾಗಿಸುತ್ತಿವೆ.

    ಮಲ್ಲಿಗೆಯ ಗಿಡ ಬೆಳೆಸಿ ಅದರಿಂದ ಫಸಲು ಪಡೆಯಲು 2 ವರ್ಷ ಬೇಕು. ಅದು ಫಸಲು ಕೊಡಲು ಆರಂಭಿಸಿದ ನಂತರ ಸತತವಾಗಿ ಅದರ ಆರೈಕೆ ಮಾಡಬೇಕು. ಆದರೆ, ದೇಶದಲ್ಲಿ ಕರೊನಾ ಲಾಕ್​ಡೌನ್ ಕಂಟಕ ಎದುರಾಗಿದೆ. ಹೀಗಾಗಿ, ಹೂವಿನ ಮಾರುಕಟ್ಟೆ ಸಂಪೂರ್ಣ ಸ್ತಬ್ಧವಾಗಿದ್ದು, ಇದನ್ನೇ ಆಶ್ರಯಿಸಿದ ಬೆಳೆಗಾರರು ಕಂಗಾಲಾಗಿದ್ದಾರೆ.

    ಭಟ್ಕಳದಲ್ಲಿ ಪ್ರತಿದಿನ ಸರಾಸರಿ 1 ಲಕ್ಷ 10 ಸಾವಿರ ಮೊಳ (11 ಸಾವಿರ ಅಟ್ಟೆ) ಹೂವು ಉತ್ಪದನೆಯಾಗುತ್ತದೆ. ಇದಕ್ಕೆ ಮಂಗಳೂರು ಮುಖ್ಯ ಮಾರುಕಟ್ಟೆಯಾದರೆ ರಾಜ್ಯದ ವಿವಿಧೆಡೆಯೂ ಭಟ್ಕಳ ಮಲ್ಲಿಗೆಗೆ ಬೇಡಿಕೆ ಇದೆ. ಉಳಿದಂತೆ ಪಟ್ಟಣದಲ್ಲೂ ಮಲ್ಲಿಗೆ ಹಾಟ್ ಫೇವರಿಟ್. ಕಳೆದ ಬಾರಿಯ ಸೀಸನ್​ನಲ್ಲಿ ಮಲ್ಲಿಗೆ ಒಂದು ಮೊಳಕ್ಕೆ 160 ರೂ. ಗಡಿದಾಟಿ ದಾಖಲೆ ಮೆರೆದಿತ್ತು. ಇಷ್ಟಾದರೂ ಒಂದೊಂದು ಬಾರಿ ದುಡ್ಡು ಕೊಟ್ಟರೂ ಮಲ್ಲಿಗೆ ದೊರೆಯುವುದಿಲ್ಲ.

    15 ದಿನ ಹೇಗಾದರೂ ತಡೆದುಕೊಂಡರೂ ಇದನ್ನು ಮುಂದುವರಿಸುವುದು ಸಾಧ್ಯವಿಲ್ಲ ಎನ್ನುತ್ತಾರೆ ಕೃಷಿಕ ಮಂಜುನಾಥ ದೇವಾಡಿಗ. ಮಾರುಕಟ್ಟೆ ಇಲ್ಲ ಎಂದು ಮಲ್ಲಿಗೆಯ ಮೊಗ್ಗುಗಳನ್ನು ಗಿಡದಲ್ಲಿ ಬಿಡುವಂತಿಲ್ಲ. ನಿತ್ಯವೂ ಅದನ್ನು ತೆಗೆಯಬೇಕು. ತೆಗೆದರೂ ಅದಕ್ಕೆ ಬೇಡಿಕೆ ಇಲ್ಲದ ಕಾರಣ ಏನೂ ಮಾಡುವಂತಿಲ್ಲ. ಮಲ್ಲಿಗೆ ಮೊಗ್ಗು ಕೊಯ್ಯುವವರಿಗೆ ಪ್ರತಿದಿನ ಮೊಳದ ಲೆಕ್ಕದಂತೆ ನೀಡುವ ಸಂಭಾವನೆ ಒಂದೆಡೆಯಾದರೆ ತೆಗೆದ ಹೂವು ಹಾಳಾಗುತ್ತಿರುವ ಹೊರೆ ಇನ್ನೊಂದೆಡೆ. ಕಾಲಕ್ಕೆ ತಕ್ಕಂತೆ ನೀರು, ಗೊಬ್ಬರ, ಮದ್ದು ಸಿಂಪಡಣೆ ಎಲ್ಲವೂ ದುಬಾರಿಯಾಗಿದೆ. ಮಲ್ಲಿಗೆ ಬೆಳೆಗಾರರಿಗೆ ಆತಂಕ ದ್ವಿಗುಣಗೊಳಿಸಿದೆ. ಕೋವಿಡ್ 19 ಮಹಾಮಾರಿಯ ವಿಷಯದಲ್ಲಿ ಭಟ್ಕಳ ಹಾಟ್​ಸ್ಪಾಟ್ ಆಗಿ ಗುರುತಿಸಿಕೊಂಡಿರುವುದು ರೈತರ ನೆಮ್ಮದಿ ಮತ್ತಷ್ಟು ಹಾಳು ಮಾಡಿದೆ. ಸರ್ಕಾರ ತಮ್ಮ ನೆರೆವಿಗೆ ಬರಬೇಕು ಎಂದು ಕೃಷಿಕರು ಆಗ್ರಹಿಸುತ್ತಿದ್ದಾರೆ.

    ತಾಲೂಕಿನಲ್ಲಿ ಮಲ್ಲಿಗೆ ಬೆಳೆಗೆ ಅದರದೇ ಆದ ಮಾರುಕಟ್ಟೆ ಇದೆ. ನಿತ್ಯ 1 ಲಕ್ಷ 10 ಸಾವಿರ ಮೊಳ ಹೂವು ಹಾಳಾಗುತ್ತಿರುವ ಕುರಿತು ಕಾರವಾರದ ಉಪನಿರ್ದೇಶಕರ ಗಮನಕ್ಕೆ ತರಲಾಗಿದೆ. ಅವರಿಗೂ ಬೆಂಬಲ ಬೆಲೆ ನೀಡುವ ಕುರಿತು ಉಪನಿರ್ದೇಶಕರು ರಾಜ್ಯಮಟ್ಟದಲ್ಲಿ ಮಾತುಕತೆ ನಡೆಸುತ್ತಿದ್ದಾರೆ. ಕೃಷಿಕರಿಗೆ ತಿರುಗಾಡಲು ಯಾರೂ ತಡೆ ಒಡ್ಡುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ. | ಸಂಧ್ಯಾ ಭಟ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಭಟ್ಕಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts