More

    ಸಂಕಲ್ಪಿತ ಗುರಿಯೆಡೆಗೆ ಸಾಗಲು ಉತ್ತಮ ಸಂಸ್ಕಾರ ಮುಖ್ಯ

    ವಿಜಯವಾಣಿ ಸುದ್ದಿಜಾಲ ಕುಮಟಾ: ಶಿಕ್ಷಣದೊಟ್ಟಿಗೆ ಉತ್ತಮ ಸಂಸ್ಕಾರವನ್ನೂ ಪಡೆದವರು ಸಂಕಲ್ಪಿತ ಗುರಿಯೆಡೆಗೆ ಶುದ್ಧವಾಗಿ ಸಾಗುತ್ತಾರೆ. ಇಂಥವರ ಯಶಸ್ಸು, ಕೀರ್ತಿ ಇತರರಿಗೆ ಸದಾ ಪ್ರೇರಣೆಯಾಗುತ್ತದೆ ಎಂದು ಉಜಿರೆ ಶ್ರೀಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ನುಡಿದರು.

    ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನುಡಿದರು. ನಮ್ಮೊಳಗಿನ ಕೌಶಲ, ಪ್ರತಿಭೆ ಪರಿಶ್ರಮದಿಂದ ಬೆಳಕಿಗೆ ಬರುವಂಥದ್ದು, ಅದನ್ನು ದೃಢ ಸಂಕಲ್ಪದಿಂದ ಜಾಗೃತಗೊಳಿಸಿಕೊಳ್ಳುವುದಕ್ಕೆ ಪಾಲಕರು, ಗುರು-ಹಿರಿಯರು, ಸಮಾಜ ಪೂರಕವಾಗಬೇಕು. ಮಕ್ಕಳಿಗೆ ಎಲ್ಲ ಕ್ಷೇತ್ರಗಳಲ್ಲಿ ಆಸಕ್ತಿ ಮೂಡಿಸಬೇಕು ಎಂದರು.

    ಶಿರಸಿ ಡಿವೈಎಸ್​ಪಿ ರವಿ ಡಿ. ನಾಯ್ಕ ಮಾತನಾಡಿ, ಜೀವನ ಉನ್ನತಿಗಾಗಿ ಶಿಕ್ಷಣ ಬೇಕು. ಗುರಿಯೆಡೆಗೆ ಸಾಗಲು ಶಿಸ್ತು, ಪ್ರಾಮಾಣಿಕತೆ, ವಿನಯ ಇರಬೇಕು. ಸಾಧನೆಗೆ ಅಡ್ಡಿಗಳು ಹೊರಗಡೆ ಎಲ್ಲೂ ಇಲ್ಲ. ನಮ್ಮೊಳಗೆ ಇರುವ ಕೊರತೆಗಳನ್ನು ನೀಗಿಸಿಕೊಂಡರೆ ಯಶಸ್ಸು ಖಚಿತ ಎಂದರು.

    ತಾಲೂಕು ಆರೋಗ್ಯಾಧಿಕಾರಿ ಡಾ. ಗಣೇಶ ಟಿ. ನಾಯ್ಕ ಮಾತನಾಡಿ, ಸಮಾಜ ಸಂಘಟನೆಯಿಂದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಲಿ, ಸಮಾಜಕ್ಕೆ ರಾಜಕೀಯ ಶಕ್ತಿಯನ್ನೂ ದೊರಕಿಸಿಕೊಳ್ಳಬೇಕಿದೆ ಎಂದರು.

    ವಾಣಿಜ್ಯ ತೆರಿಗೆ ಅಧಿಕಾರಿ ಗಣೇಶ ಎನ್. ನಾಯ್ಕ, ವನ್ನಳ್ಳಿ ಪ್ರೌಢಶಾಲೆ ಮುಖ್ಯಶಿಕ್ಷಕ ಎಂ.ಜಿ. ನಾಯ್ಕ, ಹಾವೇರಿಯ ಮರೋಳಾ ಶಾಲೆ ಮುಖ್ಯಶಿಕ್ಷಕಿ ಜಯಶ್ರೀ ವಿ. ನಾಯ್ಕ, ಅಧ್ಯಕ್ಷತೆ ವಹಿಸಿದ್ದ ನಾಮಧಾರಿ ಸಂಘದ ತಾಲೂಕು ಅಧ್ಯಕ್ಷ ಸುಬ್ರಾಯ ನಾಯ್ಕ ಮಾತನಾಡಿದರು.

    ಬಳಿಕ ಪ್ರತಿಭಾ ಪುರಸ್ಕಾರದಲ್ಲಿ ಎಸ್​ಎಸ್​ಎಲ್​ಸಿಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಕಾರ್ತಿಕ ನಾಯ್ಕ, ಅಕ್ಷಯ ನಾಯ್ಕ, ಪ್ರಣವ ಎಸ್., ಪ್ರಗತಿ ನಾಯ್ಕ, ಅಕಾಂಕ್ಷಾ ಎಂ. ಹಾಗೂ ಶೇ.90 ಕ್ಕಿಂತ ಹೆಚ್ಚು ಅಂಕಗಳಿಸಿದ 20 ಮಂದಿಗೆ ಪುರಸ್ಕರಿಸಲಾಯಿತು. ವಿವಿಧ ಕ್ಷೇತ್ರದ ಸಾಧನೆಗಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ರಾಜು ಆರ್. ನಾಯ್ಕ, ಭಾಸ್ಕರ ಜಿ. ನಾಯ್ಕ, ಸಾಹಿತಿ ಸಂಧ್ಯಾ ವಿ. ನಾಯ್ಕ, ಇಂಡಿಯನ್ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಪಡೆದ ಸಂಪ್ರೀತ್ ಎಸ್.ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಆರ್.ಜಿ. ನಾಯ್ಕ, ನಾಮಧಾರಿ ನೌಕರರ ಸಂಘದ ಅಧ್ಯಕ್ಷ ಎನ್. ಆರ್. ನಾಯ್ಕ, ಯುವ ನಾಮಧಾರಿ ಸಂಘದ ಉಪಾಧ್ಯಕ್ಷ ಸಂತೋಷ ನಾಯ್ಕ ಇನ್ನಿತರರು ಇದ್ದರು.

    ಶಿಕ್ಷಕ ಮಂಜುನಾಥ ನಾಯ್ಕ ನಿರ್ವಹಿಸಿದರು. ತಾಲೂಕು ಆರ್ಯ ಈಡಿಗ ನಾಮಧಾರಿ ಸಂಘ, ನಾಮಧಾರಿ ಮಹಿಳಾ ಸಂಘ, ಯುವ ನಾಮಧಾರಿ ಸಂಘ, ನಾಮಧಾರಿ ನೌಕರರ ಸಂಘ ಹಾಗೂ ಶ್ರೀರಾಮ ಸೇವಾ ಸಮಿತಿಯವರು ಕಾರ್ಯಕ್ರಮ ಆಯೋಜಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts