More

    ಸಂಕನೂರ ಗೆಲ್ಲಿಸಿ ಪರಿಷತ್​ನಲ್ಲಿ ಬಹುಮತ ನೀಡಿ

    ಧಾರವಾಡ: ಘಟನಾಯಕರು, ಬಿಜೆಪಿ ಸೇನಾನಿಗಳು, ಕಾರ್ಯಕರ್ತರ ಪರಿಶ್ರಮದಿಂದ ಇಂದು ದೆಹಲಿಯಿಂದ ಪಂಚಾಯಿತಿವರೆಗೂ ಬಿಜೆಪಿ ಅಧಿಕಾರದಲ್ಲಿದೆ. ಪ್ರಸ್ತುತ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಎಸ್.ವಿ. ಸಂಕನೂರ ಅವರನ್ನು ಗೆಲ್ಲಿಸಿ ಬಿಜೆಪಿಗೆ ಬಹುಮತ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

    ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಅಂಗವಾಗಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಪರ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಸಂಕನೂರ ಸಜ್ಜನ ರಾಜಕಾರಣಿ. ಅವರು ಪದವೀಧರ ಕ್ಷೇತ್ರದ ವಿವಿಧ ಅಭಿವೃದ್ಧಿ ಹಾಗೂ ಜನಪರ ಕಾರ್ಯ ಮಾಡಿದ್ದಾರೆ. ಅವರ ಗೆಲುವು ಕಾರ್ಯಕರ್ತರ ಗೆಲುವು ಎಂದರು.

    ಶಾಸಕ ಅಮೃತ ದೇಸಾಯಿ, ಮುಖಂಡರಾದ ಮಹೇಶ ಟೆಂಗಿನಕಾಯಿ, ಈರೇಶ ಅಂಚಟಗೇರಿ, ಸೀಮಾ ಮಸೂತಿ, ವಿಜಯಾನಂದ ಶೆಟ್ಟಿ, ದತ್ತಮೂರ್ತಿ ಕುಲಕರ್ಣಿ, ನಾರಾಯಣ ಜರತಾರಘರ, ಸುನೀಲ ಮೋರೆ, ಬಸವರಾಜ ಗರಗ, ಶ್ರೀನಿವಾಸ ಕೋಟ್ಯಾನ, ಹರೀಶ ಬಿಜಾಪುರ, ಪ್ರಕಾಶ ಶೃಂಗೆರಿ, ಅಮಿತ ಪಾಟೀಲ ಹಾಗೂ ಘಟನಾಯಕರು, ಘಟ ಪ್ರಮುಖರು ಉಪಸ್ಥಿತರಿದ್ದರು.

    ಕೃಷಿ ವಿವಿಯಲ್ಲಿ ಪ್ರಚಾರ: ಸಿ.ಟಿ. ರವಿ ಅವರು ಸಂಕನೂರ ಪರ ನಗರದ ಕೃಷಿ ವಿಶ್ವವಿದ್ಯಾಲಯದಲ್ಲೂ ಪ್ರಚಾರ ನಡೆಸಿ ಮತ ಯಾಚಿಸಿದರು. ಸೀಮಾ ಮಸೂತಿ, ಕೃಷಿ ವಿವಿ ಕುಲಪತಿ ಮಹಾದೇವ ಚೆಟ್ಟಿ, ಶಶಿಮೌಳಿ ಕುಲಕರ್ಣಿ, ವಿಜಯಾನಂದ ಶೆಟ್ಟಿ, ಸಂಜಯ ಕಪಟಕರ, ಇತರರಿದ್ದರು.

    ಚುನಾವಣೆ ಮೂಲಕ ಉತ್ತರ

    ಹುಬ್ಬಳ್ಳಿ: ಅಭಿವೃದ್ಧಿಗೆ ಅಡ್ಡಿಯಾಗಿರುವ ಅಂಶಗಳ ನಿವಾರಣೆಗೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಕ್ರಮ ಕೈಗೊಂಡಿವೆ. ಇದರಿಂದಾಗಿ, ಅನಿರೀಕ್ಷಿತ ಸಂಕಷ್ಟಗಳ ಮಧ್ಯೆಯೂ ಜನರು ಸಮಾಧಾನದಿಂದ ಇರಲು ಸಾಧ್ಯವಾಗಿದೆ. ಬಿಜೆಪಿ ಜನಪ್ರಿಯತೆ ಹೆಚ್ಚುತ್ತಿದೆ. ಹೀಗಾಗಿ 2 ಪದವೀಧರ, 2 ಶಿಕ್ಷಕರ ಎಂಎಲ್​ಸಿ ಕ್ಷೇತ್ರ ಹಾಗೂ 2 ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲುವ ಪೂರ್ಣ ವಿಶ್ವಾಸ ಇದೆ ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳ ರಾಜಕೀಯ ಸವಾಲುಗಳಿಗೆ ಚುನಾವಣೆ ಮೂಲಕ ಉತ್ತರ ನೀಡುತ್ತೇವೆ ಎಂದರು. ಪ್ರಶ್ನೆಗಳಿಗೆ ಉತ್ತರಿಸಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಕುರಿತು ಪಕ್ಷವು ಸೂಕ್ತ ಸಮಯದಲ್ಲಿ ಪ್ರತಿಕ್ರಿಯಿಸಲಿದೆ. ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ಶಾಸಕಾಂಗ ಪಕ್ಷದ ಸರ್ವಾನುಮತದ ಆಯ್ಕೆ. ಅವರ ಬದಲಾವಣೆಯ ಊಹೆ ಕುರಿತ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದರು. ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿ ಕೇಂದ್ರಿತ ಆಡಳಿತ ಬರುವಂತೆ ಮಾಡಲು ಸಂಘಟನೆ ಬಲಪಡಿಸುತ್ತಿರುವುದಾಗಿ ತಿಳಿಸಿದರು.

    ಸಿದ್ದರಾಮಯ್ಯಗೆ ತಿರುಗೇಟು: ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿದ್ದಾರೆ ಎಂದಿರುವ ಜಮೀರ್ ಅಹ್ಮದ್​ಗೆ ಸಿ.ಟಿ. ರವಿ ತಿರುಗೇಟು ನೀಡಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆ ಎಂದು ಜಮೀರ್ ಹೇಳುತ್ತಿದ್ದಾರೆ. ಕೆಲವು ಸಂಗತಿಗಳನ್ನು ಕಾಲ ನಿರ್ಣಯಿಸುತ್ತದೆ. ಈಗ ದೇಶದಲ್ಲಿ ಬಿಜೆಪಿ ಕಾಲ ನಡೆಯುತ್ತಿದೆ. ಕಾಂಗ್ರೆಸ್ಸಿಗರಿಗೆ ತವರಿನಲ್ಲೇ ತಮ್ಮ ಪಕ್ಷವನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ. ಜಮೀರ್ ಅಹ್ಮದ್ ಬೆಂಗಳೂರಿನಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಲ್ಲ. ಸಿದ್ದರಾಮಯ್ಯಗೆ ಮೈಸೂರು, ಬಾಗಲಕೋಟೆಯಲ್ಲಿ ತಮ್ಮ ಪಾರ್ಟಿ ಗೆಲ್ಲಿಸಲು ಆಗಿಲ್ಲ. ಜನರು ಕಾಂಗ್ರೆಸ್ ಅನ್ನು ಮತ್ತೇಕೆ ಅಧಿಕಾರಕ್ಕೆ ತರುತ್ತಾರೆ? ಸಮಾಜ ಒಡೆಯುವುದಕ್ಕಾ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ಕಾಂಗ್ರೆಸ್ ತಮ್ಮದೇ ಪಕ್ಷದ ದಲಿತ ಶಾಸಕನಿಗೆ ರಕ್ಷಣೆ ಕೊಡದಂಥ ಪಾರ್ಟಿ. ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಾಕಿದವರನ್ನು ಅಮಾಯಕರು ಎಂದಿದ್ದು ಕಾಂಗ್ರೆಸ್ ಪಾರ್ಟಿ. ಈಗ ಕಾಂಗ್ರೆಸ್ ಕೋಟಾ ಮುಗಿದಿದೆ. ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಭಾರತದಲ್ಲಿ ಅಲ್ಲ; ಪಾಕಿಸ್ತಾನದಲ್ಲಿ ಗೆಲ್ಲಬೇಕಷ್ಟೆ ಎಂದು ಟೀಕಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts