More

    ಶ್ರೀರಂಗಪಟ್ಟಣದಲ್ಲಿ ಹೆದ್ದಾರಿ ಸಂಚಾರ ಬಂದ್

    ಶ್ರೀರಂಗಪಟ್ಟಣ: ರಾಜ್ಯ ರೈತ ಸಂಘದ ಕಾರ್ಯಕರ್ತರು ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.


    ತಾಲೂಕಿನ ಮೈಸೂರು-ಬೆಂಗಳೂರು ಹೆದ್ದಾರಿಯ ಕಿರಂಗೂರು ವೃತ್ತದಲ್ಲಿ ಎತ್ತಿನ ಗಾಡಿಗಳು, ಕಬ್ಬು ತುಂಬಿದ್ದ ಲಾರಿಗಳನ್ನು ಹೆದ್ದಾರಿಗೆ ಅಡ್ಡ ನಿಲ್ಲಿಸಿ ಜಾನುವಾರುಗಳ ಸಹಿತ ಕಟ್ಟಿಹಾಕಿ ಪ್ರತಿಭಟನೆಗಿಳಿದ ರೈತರು ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ರೈತನಾಯಕ ಪುಟ್ಟಣ್ಯಯ್ಯ ಅವರ ಭಾವಚಿತ್ರ ಇರಿಸಿ ರಾಜ್ಯ ಸರ್ಕಾರ ಹಾಗೂ ಸಿಎಂ ಸೇರಿದಂತೆ ಜನಪ್ರತಿನಿಧಿಗಳ ವಿರುದ್ಧ ಸಾಲು ಸಾಲು ಘೋಷಣೆಗಳನ್ನು ಕೂಗಿ ಧರಣಿ ನಡೆಸಿದರು.


    ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಪ್ರತಿ ಟನ್ ಕಬ್ಬಿಗೆ 4500 ರೂ. ದರ ನಿಗದಿ ಜತೆಗೆ ಹಳೇ ಬಾಕಿ ನೀಡಬೇಕು. ಸರ್ಕಾರ ಎಸ್‌ಎಪಿ ಘೋಷಣೆ ಜತೆಗೆ ಎಫ್‌ಆರ್‌ಪಿ 8.5 ಇಳುವರಿ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.


    ಹೋರಾಟದ ತೀಕ್ಷ್ಣತೆ ತಿಳಿದು ಪ್ರತಿಭಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಆಗಮಿಸಿ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ರೈತ ಪರ ಕಾರ್ಯಕರ್ತರನ್ನು ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿ ಬಳಿಕ ಜಿಲ್ಲಾ ಉಸ್ತವಾರಿ ಸಚಿವ ಕೆ.ಗೋಪಾಲಯ್ಯ ಅವರೊಂದಿಗೆ ಮೊಬೈಲ್‌ನಲ್ಲಿ ಸಂಪರ್ಕಿಸಿ ಚರ್ಚಿಸಲಾಯಿತು. ಈ ವೇಳೆ 15 ದಿನಗಳ ಕಾಲಾವಕಾಶ ನೀಡಿ ಅದರೊಳಗೆ ಸಾಧ್ಯವಾದಷ್ಟು ಸಮಸ್ಯೆ ಪರಿಹರಿಸಿಕೊಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.


    ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ, ತಾಲೂಕು ಸಂಘದ ಅಧ್ಯಕ್ಷ ಕೆಂಪೂಗೌಡ, ಮೈಸೂರು ಜಿಲ್ಲಾ ರೈತ ನಾಯಕಿ ತಾಯಮ್ಮ, ಪಾಂಡವಪುರ ರೈತ ಸಂಘದ ತಾಲೂಕು ಅಧ್ಯಕ್ಷ ಮಂಜು, ಮುಖಂಡರಾದ ಹರವು ಪ್ರಕಾಶ್, ಕೆನ್ನಾಳು ನಾಗಣ್ಣ, ಹರೀಶ್ ಚಿಕ್ಕಾಡೆ, ಕನಗನಮರಡಿ ಬಲರಾಂ, ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ, ಶಂಕರ್ ಅಗ್ರಹಾರ, ಪಾಂಡು, ಪಾ.ಲಾ.ರಾಮೇಗೌಡ, ತಡಗವಾಡಿ ದೇವೇಗೌಡ, ಕಡತನಾಳು ಬಾಲಕೃಷ್ಣ, ಬಿ.ಎಸ್.ರಮೇಶ್, ದೊಡ್ಡಪಾಳ್ಯ ಜಯರಾಮು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts