More

    ಶೋಷಿತ ಸಮುದಾಯಗಳ ಶಕ್ತಿ ಪ್ರದರ್ಶನಕ್ಕೆ ಜನಜಾಗೃತಿ – ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಮುಖಂಡರ ತೀರ್ಮಾನ

    ದಾವಣಗೆರೆ: ಚಿತ್ರದುರ್ಗದಲ್ಲಿ ಜ.28ರಂದು ಆಯೋಜಿಸಿರುವ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶ ಶಕ್ತಿ ಪ್ರದರ್ಶಿಸಲು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪಕ್ಷಾತೀತವಾಗಿ ಜಾಗೃತಿ ಮೂಡಿಸಲು ಮುಖಂಡರು ನಿರ್ಧರಿಸಿದರು.
    ಸಮಾವೇಶದ ಪೂರ್ವಭಾವಿಯಾಗಿ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಈ ಅಭಿಮತ ವ್ಯಕ್ತವಾಯಿತು.
    ಕಾಂತರಾಜು ಆಯೋಗದ ವರದಿ ಜಾರಿ ಸೇರಿ ಇತರ ಹಕ್ಕೊತ್ತಾಯಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ತರುವ ಜತೆಗೆ ಇಡೀ ಸಮಾವೇಶದ ಯಶಸ್ವಿಗೆ ಶ್ರಮಿಸಲು ಮುಖಂಡರು ಒಮ್ಮತದ ತೀರ್ಮಾನ ಕೈಗೊಂಡರು.
    ಕೆಪಿಸಿಸಿ ಎಸ್ಟಿ ವಿಭಾಗದ ಅಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ಮುಂಬರುವ ದಿನಗಳಲ್ಲಿ ದೇಶದ ಆಡಳಿತ ನಿರ್ವಹಣೆಗೆ ಸಂಬಂಧಿಸಿದಂತೆ ಸಂಸತ್ ಬದಲಾಗಿ ದೇವಸ್ಥಾನಗಳಲ್ಲಿ ನಿರ್ಣಯ ಕೈಗೊಳ್ಳುವ ಸಂಭವವಿದೆ. ಮುಂದಿನ ಪೀಳಿಗೆಯಲ್ಲಿ ಹೋರಾಟದ ಮನೋಭಾವ ಬೆಳೆಸುವ ಮೂಲಕ ಹಕ್ಕು ಪಡೆದುಕೊಳ್ಳಬೇಕು ಎಂದು ಹೇಳಿದರು.
    ರಾಜ್ಯದಲ್ಲಿ ಜಾತಿಗಣತಿ ವರದಿ ಬಿಡುಗಡೆಗೆ ಶೋಷಿತ ಸಮುದಾಯಗಳು ಒಂದುಗೂಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಬೇಕು. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಿಂದ ಶೇ.50ರಷ್ಟು ಜನರು ಸಮಾವೇಶದಲ್ಲಿ ಭಾಗವಹಿಸಬೇಕು ಎಂದರು.
    ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತನಾಡಿ, ಶೋಷಿತ ಸಮುದಾಯಗಳ ಅಸ್ತಿತ್ವ ಉಳಿವಿಗಾಗಿ ಸಮಾವೇಶ ನಡೆಯುತ್ತಿದೆ, ಇದು ರಾಜಕೀಯ ಉದ್ದೇಶದ್ದಲ್ಲ. ನಮಗೆ ರಾಮನಿಗಿಂತ ಅಂಬೇಡ್ಕರ್ ಮುಖ್ಯ. ಎಲ್ಲರೂ ಸಂವಿಧಾನ ರಕ್ಷಣೆ ಮಾಡಬೇಕು ಎಂದರು.
    ಸುಮಾರು 160 ಕೋಟಿ ರೂ. ವ್ಯಯಿಸಿ ಕಾಂತರಾಜು ಆಯೋಗದಿಂದ ಸಮೀಕ್ಷೆ ನಡೆಸಿದ್ದು, ಸಮಾವೇಶದೊಳಗೆ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಶೇ.85ರಷ್ಟಿರುವ ಅಹಿಂದ ವರ್ಗ ಜಾಗೃತರಾದರೆ ಅಧಿಕಾರ ನಮ್ಮದೇ ಎಂದು ಹೇಳಿದರು.
    ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಸ್ವಾತಂತ್ರೃ ಬಂದು 75 ವರ್ಷವಾದರೂ ನಮ್ಮ ನಿಖರ ಸಂಖ್ಯೆ ತಿಳಿದುಕೊಳ್ಳಲು ಬಿಡುತ್ತಿಲ್ಲ. ಸಾಂಸ್ಕೃತಿಕ, ರಾಜಕೀಯ ದೌರ್ಜನ್ಯ ಎಷ್ಟು ದಿನ ಸಹಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದರು.
    ಶೋಷಿತರಿಗೆ ಸಂವಿಧಾನವೇ ನಿಜವಾದ ಧರ್ಮಗ್ರಂಥ. ಅದರಿಂದಲೇ ಅಕ್ಷರ, ಅನ್ನ ಸಿಗುತ್ತಿದೆ. ಜನಸಂಖ್ಯಾವಾರು ಅಧಿಕಾರ ಹಾಗೂ ಸಂಪತ್ತು ಹಂಚಿಕೆ ಆಗಬೇಕು. ಎಲ್ಲ ಸಮುದಾಯಗಳಿಗೆ ಅವಕಾಶ ಸಿಗಲು ಜಾತಿಗಣತಿ ಅವಶ್ಯಕ. ವರದಿ ಬಿಡುಗಡೆಗೆ ಮುನ್ನವೇ ವಿರೋಧಿಸುವುದು ಸರಿಯಲ್ಲ ಎಂದರು.
    ಹರಿಹರ ಮಾಜಿ ಶಾಸಕ ಎಸ್. ರಾಮಪ್ಪ ಮಾತನಾಡಿ, ಶೋಷಿತ ಸಮುದಾಯಗಳ ಒಗ್ಗಟ್ಟಿನ ಕೊರತೆಯಿಂದ ಶೇ.30ರಷ್ಟು ಸಂಖ್ಯೆ ಹೊಂದಿದವರು ರಾಜ್ಯವನ್ನಾಳುತ್ತಿದ್ದು, ಶೋಷಿತರು ತಮ್ಮ ಹಕ್ಕು ಪಡೆಯಲು ಜಾಗೃತರಾಗಬೇಕು. ಸಮಾವೇಶದ ಯಶಸ್ಸಿಗೆ ಎಲ್ಲ ತಾಲೂಕುಗಳಲ್ಲಿ ಸಿಮಿತಿ ರಚಿಸಿ ಜವಾಬ್ದಾರಿ ನೀಡಬೇಕು ಎಂದು ತಿಳಿಸಿದರು.
    ಹೊನ್ನಾಳಿಯ ಸಿದ್ದಪ್ಪ ಮಾತನಾಡಿ, ಚಿತ್ರದುರ್ಗದ ಸಮಾವೇಶದಲ್ಲಿ ಎಲ್ಲರ ಶಕ್ತಿ ಪ್ರದರ್ಶನ ಆಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ವರದಿ ಬಿಡುಗಡೆ ಆಗದಿದ್ದರೆ ಅದು ಕನಸಾಗಿಯೇ ಉಳಿಯಲಿದೆ. ಈ ಬಗ್ಗೆ ತಾಲೂಕು ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
    ಅಹಿಂದ ಮುಖಂಡರಾದ ಹೊದಿಗೆರೆ ರಮೇಶ್, ಡಾ.ಈಶ್ವರನಾಯ್ಕ, ನಿವೃತ್ತ ಪೊಲೀಸ್ ಅಧಿಕಾರಿ ರುದ್ರಮುನಿ, ಚಮನ್ ಸಾಬ್ ಇತರರು ಮಾತನಾಡಿದರು. ಬಿ.ಎಚ್. ಪರಶುರಾಮಪ್ಪ, ವಕೀಲ ಜಯದೇವನಾಯ್ಕ, ಬಿ.ವೀರಣ್ಣ, ಹೆಗ್ಗೆರೆ ರಂಗಪ್ಪ, ಅಂಜಿನಪ್ಪ ಹರಪನಹಳ್ಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts